ಆಹಾರ ದರಗಳು ಮುಂಬರುವ ದಿನಗಳಲ್ಲೂ ಏರುಗತಿಯಲ್ಲಿ ಮುಂದುವರಿಯಲಿದೆಯೇ ಎಂಬ ಜಿಜ್ಞಾಸೆ ನಡೆಯುತ್ತಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆಹಾರ ಹಣದುಬ್ಬರದ(food inflation) ಒತ್ತಡ ಮುಂದೆಯೂ ಇರಬಹುದು ಎಂದಿದ್ದಾರೆ. ರಷ್ಯಾ-ಉಕ್ರೇನ್ ಸಮರದ ಪ್ರತಿಕೂಲ ಪರಿಣಾಮ ಒಂದೆಡೆಯಾದರೆ, ಜಾಗತಿಕ ಹವಾಮಾನ ಬದಲಾವಣೆಯ ಪ್ರಭಾವವೂ ದರ ಇಳಿಕೆಗೆ ಸವಾಲಾಗಿದೆ.
———
ರಷ್ಯಾ-ಉಕ್ರೇನ್ ಸಮರ ಎಫೆಕ್ಟ್
ಆಹಾರ ವಸ್ತುಗಳ ದರ ಏರಿಕೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ರಷ್ಯಾ-ಉಕ್ರೇನ್ ಸಮರದ ಬಳಿಕ ವಿಶ್ವದ ಬಹುತೇಕ ದೇಶಗಳಲ್ಲಿ ಆಹಾರ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ರಷ್ಯಾ ಮತ್ತು ಉಕ್ರೇನ್‌ನಿಂದ ಗೋಧಿ ಮತ್ತು ರಾಸಾಯನಿಕಗಳು ಹೇರಳವಾಗಿ ರಫ್ತಾಗುತ್ತಿತ್ತು. ಅದಕ್ಕೆ ಹೊಡೆತ ಬಿದ್ದಿದ್ದು, ಪೂರೈಕೆಯ ಸರಣಿಯಲ್ಲಿ ವ್ಯತ್ಯಯ ಉಂಟಾಗಿದೆ. ಆದ್ದರಿಂದ ಆಹಾರ ವಸ್ತುಗಳ ದರ ಏರಿಕೆಯಾಗಿದೆ. ಬರ, ಪ್ರವಾಹ, ತಾಪಮಾನ ಹೆಚ್ಚಳದಿಂದಲೂ ಬೆಳೆ ಹಾನಿಯಾಗಿ ದರ ಏರಿಕೆಯಾಗಿದೆ.
ಜಾಗತಿಕ ಹವಾಮಾನ ಬದಲಾವಣೆ, ಬಡತನ, ಸಾಂಕ್ರಾಮಿಕ ರೋಗಗಳು ಮತ್ತು ಸಂಘರ್ಷದ ಪರಿಣಾಮ ಜಾಗತಿಕ ಆಹಾರ ಭದ್ರತೆಗೆ ಅಪಾಯ ಎದುರಾಗಿದೆ ಎನ್ನುತ್ತಾರೆ ತಜ್ಞರು.
ದರ ಏರಿಕೆಗೆ ಕಾರಣಗಳೇನು?
- ರಷ್ಯಾ-ಉಕ್ರೇನ್ ಜಾಗತಿಕ ಗೋಧಿ ರಫ್ತಿನಲ್ಲಿ ಶೇ.30 ಪಾಲನ್ನು ವಹಿಸುತ್ತಿವೆ. ಸಂಘರ್ಷದ ಪರಿಣಾಮ ಅದು ಕುಸಿದಿದೆ.
- ಜೋಳ, ಅಕ್ಕಿ, ಸೋಯಾಬೀನ್ ಬಳಕೆದಾರರು ಪರ್ಯಾಯವಾಗಿ ಗೋಧಿಯನ್ನು ಬಳಸುತ್ತಿದ್ದಾರೆ.
- ತೈಲ ದರ ಏರಿಕೆಯಿಂದಾಗಿ ಸಾಗಣೆ ವೆಚ್ಚವೂ ವೃದ್ಧಿಸಿದೆ.
- ಜಾಗತಿಕ ಹವಾಮಾನ ವೈಪರೀತ್ಯ
- ರಾಸಾಯನಿಕ ಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ
ಗೋಧಿ ದರ 14 ವರ್ಷಗಳಲ್ಲೇ ಗರಿಷ್ಠ
ಜಾಗತಿಕ ಮಟ್ಟದಲ್ಲಿ ಗೋಧಿ ದರ ಕಳೆದ ಮಾರ್ಚ್ನಲ್ಲಿ 14 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಜಿಗಿದಿತ್ತು ಎಂದು ಇಂಟರ್ ನ್ಯಾಶನಲ್ ಪ್ಯಾನೆಲ್ ಆಫ್ ಎಕ್ಸ್ ಪರ್ಟ್ಸ್ ಆನ್ ಸಸ್ಟನೇಬಲ್ ಫುಡ್ ಸಿಸ್ಟಮ್ಸ್ (ಐಪಿಇಎಸ್) ವರದಿ ತಿಳಿಸಿದೆ.
ಭಾರತಕ್ಕೆ ಸಾಧಕ-ಬಾಧಕ ಏನು?
ಭಾರತದಲ್ಲೂ ಆಹಾರ ವಸ್ತುಗಳ ದರ ಏರಿಕೆಯಾಗಿದೆ. ಹೀಗಿದ್ದರೂ
ಒಂದು ಅನುಕೂಲವೇನೆಂದರೆ, ಗೋಧಿ ರಫ್ತಿಗೆ ವಿಫುಲ ಅವಕಾಶ ಸೃಷ್ಟಿಯಾಗಿದೆ. ರೈತರ ಆದಾಯ ವೃದ್ಧಿಗೆ ಇದು ಸಹಕಾರಿಯಾಗಿದೆ. ಈಜಿಪ್ತ್, ಟರ್ಕಿ ಮುಂತಾದ ದೇಶಗಳು ಮೊದಲ ಬಾರಿಗೆ ಭಾರತದ ಗೋಧಿಯನ್ನು ಖರೀದಿಸುತ್ತಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಬೆಲೆ ಹೆಚ್ಚಳ
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಹಣದುಬ್ಬರ 2021ರ ಮಾರ್ಚ್ ನಿಂದೀಚೆಗೆ ಬಹುತೇಕ ಇಮ್ಮಡಿಯಾಗಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಸಂಸ್ಥೆ (ಎನ್‌ಎಸ್‌ಒ) ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿ ತಿಳಿಸಿದೆ. 2021ರ ಮಾರ್ಚ್ ನಲ್ಲಿ ಶೇ.3.94ರಷ್ಟಿದ್ದ ಆಹಾರ ದರ ಹಣದುಬ್ಬರ 2022ರ ಮಾರ್ಚ್ ವೇಳೆಗೆ ಶೇ.8.04ಕ್ಕೆ ವೃದ್ಧಿಸಿತ್ತು.
ಹಣದುಬ್ಬರ ಶೇ.7.7ಕ್ಕೆ ಜಿಗಿತ?
ಆಹಾರ ಹಣದುಬ್ಬರ ಏರಿಕೆಯಾದರೆ ಹಣದುಬ್ಬರ ಕೂಡ ಹೆಚ್ಚಳವಾಗುತ್ತದೆ. 2022ರ ಏಪ್ರಿಲ್‌ನಲ್ಲಿ ಹಣದುಬ್ಬರ ಶೇ.7.7ಕ್ಕೆ ವೃದ್ಧಿಸಿರಬಹುದು ಎಂದು ಅಂದಾಜಿಸಲಾಗಿದೆ. ಮಾರ್ಚ್ ನಲ್ಲಿ ಹಣದುಬ್ಬರ 17 ತಿಂಗಳಿನ ಗರಿಷ್ಠ ಮಟ್ಟಕ್ಕೆ, ಅಂದರೆ ಶೇ.6.95ಕ್ಕೆ ವೃದ್ಧಿಸಿತ್ತು. ಬ್ಯಾಂಕ್ ಆಫ್ ಬರೋಡಾ ಪ್ರಕಾರ ಏಪ್ರಿಲ್‌ನಲ್ಲಿ ಹಣದುಬ್ಬರ ಶೇ.7.2ಕ್ಕೆ ಏರಿಕೆಯಾಗಿರಬಹುದು. ಇಂಡಿಯಾ ರೇಟಿಂಗ್ಸ್ ಶೇ7.25-7.5, ಐಸಿಆರ್‌ಎ ಶೇ.7.4, ಬಾರ್‌ಕ್ಲೇಸ್ ಶೇ.7.5, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.7.5 ಹಣದುಬ್ಬರವನ್ನು ಅಂದಾಜಿಸಿದೆ. ಅಡುಗೆ ಅನಿಲ ಮತ್ತು ಸೀಮೆ ಎಣ್ಣೆ ದರ ಕೂಡ ಏಪ್ರಿಲ್‌ನಲ್ಲಿ ವೃದ್ಧಿಸಿದೆ. ಸಬ್ಸಿಡಿಯೇತರ ಅಡುಗೆ ಅನಿಲದ 14.2 ಕೆಜಿ ಸಿಲಿಂಡರ್ ದರ ದಿಲ್ಲಿಯಲ್ಲಿ 999.50 ರೂ.ಗೆ ಏರಿಕೆಯಾಗಿದೆ. ಮಾರ್ಚ್22 ರಂದು 50 ರೂ. ಹೆಚ್ಚಳವಾಗಿತ್ತು. ಎಲ್ಪಿಜಿ ಸಿಲಿಂಡರ್ ದರಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ. ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಅಡುಗೆ ಅನಿಲ ದರಗಳೂ ವೃದ್ಧಿಸಿವೆ. ಇಂಧನ ದರವನ್ನು ಕಡಿಮೆ ಮಾಡಲು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂಬ ವಾದವಿದೆ. ಆದರೆ ಈ ಬಗ್ಗೆ ಜಿಎಸ್‌ಟಿ ಮಂಡಳಿಯಲ್ಲಿ ಎಲ್ಲ ರಾಜ್ಯಗಳಿಂದ ಒಮ್ಮತ ಏರ್ಪಟ್ಟಿಲ್ಲ. ಏಕೆಂದರೆ ಈ ಬಗ್ಗೆ ಜಿಎಸ್‌ಟಿ ಮಂಡಳಿಯೇ ಸಹಮತದ ನಿರ್ಣಯ ಕೈಗೊಳ್ಳಬೇಕಾಗಿದೆ.