ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ ಅಥವಾ ಹಣದುಬ್ಬರವನ್ನು ಹತೋಟಿಗೆ ತರಲು ರಿಸರ್ವ್ ಬ್ಯಾಂಕ್ ತನ್ನ ಬಳಿ ಇರುವ ಅಸ್ತ್ರಗಳನ್ನೆಲ್ಲ ಬುಧವಾರ ಪ್ರಯೋಗಿಸಿದೆ. ಇದರ ತಕ್ಷಣದ ಪರಿಣಾಮವಾಗಿ ಎಲ್ಲ ಬಗೆಯ ಸಾಲಗಾರರಿಗೆ ದೊಡ್ಡ ಬರೆ ಬಿದ್ದಿದೆ. ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲದ ಇಎಂಐ ಹೊರೆ ಏರಿಕೆಯಾಗಲಿದೆ. ಇದೇ ವೇಳೆ ಠೇವಣಿದಾರರಿಗೆ ಬಡ್ಡಿ ಆದಾಯ ವೃದ್ಧಿಸಿದರೂ, ಹಣದುಬ್ಬರ ಈಗಾಗಲೇ ಏರುಗತಿಯಲ್ಲಿರುವ ಕಾರಣ ಹೆಚಿನ ಪ್ರಯೋಜನವಾಗದು.
ರಿಸರ್ವ್ ಬ್ಯಾಂಕ್ ಕಳೆದ ಮೇ 4ರಂದು ತನ್ನ ರೆಪೊ ದರದಲ್ಲಿ 0.40% ಹೆಚ್ಚಿಸಿತ್ತು. ಬಳಿಕ ಇದೀಗ ಮತ್ತೊಮ್ಮೆ 0.50% ಏರಿಸಿದೆ. ರೆಪೊ ದರ ಏರಿಸಿರುವುದರ ಉದ್ದೇಶ ಸ್ಪಷ್ಟ. ಕಾಡುತ್ತಿರುವ ಹಣದುಬ್ಬರ ಅಥವಾ ಬೆಲೆ ಏರಿಕೆಯನ್ನು ನಿಯಂತ್ರಿಸುವುದು. ಆರ್‌ಬಿಐನ ಸುರಕ್ಷತಾ ಮಟ್ಟದ ಪ್ರಕಾರ ರಿಟೇಲ್ ಹಣದುಬ್ಬರ ಶೇ.2-6ರ ನಡುವೆ ಇರಬೇಕು. ಅದನ್ನು ಮೀರಿದರೆ ಅಪಾಯದ ಮಟ್ಟದಲ್ಲಿದೆ ಎಂದರ್ಥ. ಆದರೆ ಈಗ ಶೇ.7.79ರ ಉನ್ನತ ಮಟ್ಟದಲ್ಲಿದೆ. ಕಳೆದ ಜನವರಿಯಿಂದ ರಿಟೇಲ್ ಹಣದುಬ್ಬರ ಶೇ.6 ದಾಟಿದೆ. ಹೀಗಾಗಿ ಹಣದುಬ್ಬರದ ನಿಯಂತ್ರಣಕ್ಕೆ ಆದ್ಯತೆ ನೀಡುವುದು ಸರಿ. ಆದರೆ ಇದರಿಂದ ಸಾಲಗಾರರಿಗೆ ಹೊಡೆತ ಬಿದ್ದಿರುವುದನ್ನು ಅಲ್ಲಗಳೆಯುವಂತಿಲ್ಲ.
ಸಾಲಗಾರರಿಗೆ ಬಿದ್ದಿದೆ ಬರೆ
ಆರ್ ಬಿಐ ತನ್ನ ರೆಪೊ ದರವನ್ನು ಏರಿಕೆ ಮಾಡುವ ಮೂಲಕ ವ್ಯವಸ್ಥೆಯಲ್ಲಿರುವ ಹೆಚ್ಚುವರಿ ನಗದನ್ನು ಹೀರಿಕೊಳ್ಳಲು ಆರಂಭಿಸಿದೆ. ಇದರ ಪರಿಣಾಮ ಬ್ಯಾಂಕ್‌ಗಳಿಗೆ ಸಾಲ ವಿತರಿಸಲು ತಗಲುವ ವೆಚ್ಚ ಹೆಚ್ಚುತ್ತದೆ. ಆಗ ಸಾಲ ವಿತರಣೆ ಕಡಿಮೆಯಾಗಿ ಬೇಡಿಕೆ ತಗ್ಗಲಿದೆ. ಬೆಲೆ ಏರಿಕೆ ಕೂಡ ನಿಯಂತ್ರಣಕ್ಕೆ ಬರಲಿದೆ ಎಂಬುದು ಲೆಕ್ಕಾಚಾರ. ಆದರೆ ಎಷ್ಟರ ಮಟ್ಟಿಗೆ ಬೆಲೆ ಇಳಿಕೆಯಾಗಲಿದೆ ಎಂಬುದನ್ನು ಕಾದು ನೋಡಬೇಕು. ಆರ್ ಬಿಐ ಹೇಳಿರುವ ಪ್ರಕಾರ ವರ್ಷಾಂತ್ಯದ ವೇಳೆಗೆ ಹಣದುಬ್ಬರ ಶೇ.6ರ ಆಜುಬಾಜಿಗೆ ತಗ್ಗಲಿದೆ. 2023ರ ಜನವರಿಯಿಂದ ಸುರಕ್ಷತಾ ಮಟ್ಟಕ್ಕೆ, ಅಂದರೆ ಶೇ.6ಕ್ಕಿಂತ ಕೆಳಕ್ಕಿಳಿಯಲಿದೆ.
2019ರ ಅಕ್ಟೋಬರ್‌ನಿಂದ ಬ್ಯಾಂಕ್‌ಗಳಲ್ಲಿ ರಿಟೇಲ್ ಸಾಲಗಳನ್ನು ಫ್ಲೋಟಿಂಗ್ ದರದಲ್ಲಿ ಮಂಜೂರು ಮಾಡಲಾಗುತ್ತದೆ. ಅವುಗಳು ಬಹುತೇಕ ರೆಪೊ ದರಕ್ಕೆ ಲಿಂಕ್ ಆಗಿರುವುದರಿಂದ ರೆಪೊ ದರ ಏರಿಕೆಯಾದ ಕೂಡಲೇ ಸಾಲದ ಬಡ್ಡಿ ದರಗಳೂ ಏರುತ್ತವೆ. ಬಡ್ಡಿ ದರದ ವರ್ಗಾವಣೆ ಇಲ್ಲಿ ವೇಗವಾಗಿ ನಡೆಯುತ್ತದೆ. ಹೀಗಾಗಿ ಒಂದು ತಿಂಗಳಿನ ಅಸುಪಾಸಿನಲ್ಲಿ ಸಾಲದ ಬಡ್ಡಿ ದರದಲ್ಲಿ ಒಟ್ಟು 0.90% ಹೆಚ್ಚಳ ಆದಂತಾಗಿದೆ. ವ್ಯವಸ್ಥೆಯಿಂದ ಬಹಳಷ್ಟು ನಗದನ್ನು ಹೀರಿಕೊಳ್ಳಲು ಆರ್ ಬಿಐಗೆ ಸಾಧ್ಯವಾಗಲಿದೆ. ಆದರೆ ಎಲ್ಲರಿಗೂ ಸಾಲ ಮಾತ್ರ ದುಬಾರಿಯಾಗಲಿದೆ. ಮೇಗೆ ಮುನ್ನ ಯಾರಾದರೂ 1 ಕೋಟಿ ರೂ. ಸಾಲ ಪಡೆಯಲು ಅರ್ಹತೆ ಗಳಿಸಿದ್ದರೆ, ಈಗ ಅರ್ಹತೆ 80 ಲಕ್ಷ ರೂ.ಗೆ ಇಳಿಯಲಿದೆ. ಏಕೆಂದರೆ ಸಾಲ ಮರು ಪಾವತಿಸುವ ಸಾಮರ್ಥ್ಯಕ್ಕೂ ಇಎಂಐಗೂ ನೇರ ಸಂಬಂಧ ಇದೆ. ಉದಾಹರಣೆಗೆ ಇಎಂಐ ಶೇ.6.5 ಬಡ್ಡಿಯ ಲೆಕ್ಕದಲ್ಲಿ ಪ್ರತಿ ಲಕ್ಷ ರೂ.ಗೆ 675 ರೂ. ಎಂದು ಇಟ್ಟುಕೊಳ್ಳಿ. ಹಾಗೂ ಸಾಲ ಮರುಪಾವತಿಯ ಅವಧಿ 300 ತಿಂಗಳು ಎಂದು ಭಾವಿಸಿ. ಆಗ ಇತ್ತೀಚಿನ ಎರಡು ಸಲದ ಬಡ್ಡಿ ಏರಿಕೆಯಿಂದಾಗಿ ಇಎಂಐ ಪ್ರತಿ ಲಕ್ಷ ರೂ.ಗೆ 675 ರೂ.ಗೆ ವೃದ್ಧಿಸುತ್ತದೆ. ಸಾಲಗಾರನ ಒಟ್ಟಾರೆ ಇಎಂಐ ನೀಡುವ ಸಾಮರ್ಥ್ಯ ಕುಸಿಯುತ್ತದೆ.
ಇಎಂಐ ಅವಧಿ ಹೆಚ್ಚುತ್ತದೆ. ಮೊತ್ತವಲ್ಲ
ಸಾಮಾನ್ಯವಾಗಿ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಳವಾದಾಗ ಇಎಂಐನ ಮೊತ್ತ ಏರಿಸುವುದಿಲ್ಲ. ಬದಲಿಗೆ ಇಎಂಐ ಕಟ್ಟುವ ಅವಧಿ ಅಥವಾ ಸಂಖ್ಯೆ ಹೆಚ್ಚುತ್ತದೆ. ಇಎಂಐ ಸಂಖ್ಯೆ ಹೆಚ್ಚಿದರೆ ಸಾಲಗಾರರಿಗೆ ಹೊರೆಯೇ ಸರಿ. ಪದೇಪದೆ ಬಡ್ಡಿ ದರ ಏರಿಸಿದರೆ ಸಂಕಷ್ಟವಾಗಲಿದೆ.
ಉದಾಹರಣೆಗೆ ಸಾಲಗಾರನೊಬ್ಬ 7% ಬಡ್ಡಿಗೆ 20 ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡಿದ್ದಾನೆ ಎಂದು ಇಟ್ಟುಕೊಳ್ಳಿ. ಬಡ್ಡಿ ದರ 7.5%ಕ್ಕೆ ಏರಿಕೆಯಾಗುವುದರಿಂದ ಆತನ ಇಎಂಐನಲ್ಲಿ ಮತ್ತೆ 24 ಕಂತು ಜಾಸ್ತಿಯಾಗುತ್ತದೆ. ಇದನ್ನು ತಪ್ಪಿಸಬೇಕಿದ್ದರೆ ಇಎಂಐನಲ್ಲಿ ಕಟ್ಟುವ ಮೊತ್ತವನ್ನು ಹೆಚ್ಚಿಸಬೇಕು ಎನ್ನುತ್ತಾರೆ ಹಣಕಾಸು ತಜ್ಞರು. ಹೀಗಾಗಿ ಸಾಲಗಾರರು ಮುಂಬರುವ ದಿನಗಳಲ್ಲಿ ಅವಧಿಗೆ ಮುನ್ನವೇ ಸಾಲ ತೀರಿಸುವುದು ಉತ್ತಮ. ಸಾಧ್ಯವಾದಷ್ಟು ಸಾಲದ ಮೂಲ ಮತ್ತವನ್ನು ಚುಕ್ತಾ ಮಾಡಿದರೆ ಬಡ್ಡಿ ದರದ ಹೊರೆ ತಗ್ಗಿಸಬಹುದು. ಆಗ ಸಾಲದ ಅವಧಿಯನ್ನು ಕೂಡ ಕಡಿಮೆ ಮಾಡಬಹುದು.
ಇದನ್ನೂ ಓದಿ: Explainer: ಬೆಲೆ ಏರಿಕೆಗೆ ಬ್ರೇಕ್ ಹಾಕಲು ಬಡ್ಡಿ ದರ ಹೆಚ್ಚಿಸಿದ ಆರ್‌ಬಿಐ, ಸಾಲಗಾರರಿಗೆ EMI ಹೊರೆ
ಆರ್‌ಬಿಐ ನೀತಿಯ 10 ಮುಖ್ಯಾಂಶಗಳು ಇಲ್ಲಿವೆ
- ರೆಪೊ ದರದಲ್ಲಿ 0.50% ಏರಿಸಿ 4.90%ಕ್ಕೆ ಹೆಚ್ಚಿಸಿದೆ ಆರ್‌ಬಿಐ. ಇದರಿಂದ ಬ್ಯಾಂಕ್‌ಗಳಿಗೆ ಆರ್ ಬಿಐನಿಂದ ಹಣ ಪಡೆಯಲು ಹೆಚ್ಚು ಬಡ್ಡಿ ದರ ನೀಡಬೇಕಾಗುವುದು. ಇದರ ಪರಿಣಾಮ ಗ್ರಾಹಕರಿಗೆ ಹೊರೆಯನ್ನು ಬ್ಯಾಂಕ್‌ಗಳು ತಕ್ಷಣ ವರ್ಗಾಯಿಸುತ್ತವೆ. ಸಾಲಗಾರರ ಇಎಂಐ ಅವಧಿ ಹೆಚ್ಚುತ್ತದೆ. ರೆಪೊ ದರ ಎಂದರೆ, ಆರ್‌ಬಿಐ, ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಕೊಡುವ ಬಡ್ಡಿ ದರ. ಈ ರೆಪೊ ದರವನ್ನು ಹೆಚ್ಚಿಸುವ ಮೂಲಕ ಬ್ಯಾಂಕ್‌ಗಳಿಂದ ಹೆಚ್ಚಿನ ಹಣವನ್ನು ಆರ್‌ಬಿಐ ಸೆಳೆದುಕೊಳ್ಳುತ್ತದೆ. ಆಗ ಬ್ಯಾಂಕ್ ಗಳಲ್ಲಿ ಸಾಲ ವಿತರಣೆ ಮಂದಗತಿಗೆ ತಿರುಗುತ್ತದೆ. ಸಾಲ ವಿತರಣೆಗೆ ತಗಲುವ ವೆಚ್ಚ ಬ್ಯಾಂಕ್‌ಗಳಿಗೆ ಹೆಚ್ಚುತ್ತದೆ. ವ್ಯವಸ್ಥೆಯಲ್ಲಿನ ಹೆಚ್ಚುವರಿ ನಗದನ್ನು ಆರ್ ಬಿಐ ಹೀಗೆ ಹೀರಿಕೊಳ್ಳುತ್ತದೆ. ಆಗ ಬೇಡಿಕೆ ತಗ್ಗಿ ಬೆಲೆ ಏರಿಕೆ ಇಳಿಯುತ್ತದೆ.
- ಆರ್‌ಬಿಐ standing deposit facility (SDF) ಎಂಬ ಮತ್ತೊಂದು ಟೂಲ್ ಅನ್ನೂ ವ್ಯವಸ್ಥೆಯಿಂದ ಹೆಚ್ಚುವರಿ ಹಣವನ್ನು ಹೀರಿಕೊಳ್ಳಲು ಬಳಸಿದೆ. ಈ ಸ್ಟ್ಯಾಂಡಿಂಗ್ ಡಿಪಾಸಿಟ್ ಫೆಸಿಲಿಟಿಯಲ್ಲಿ ಆರ್‌ಬಿಐ ಬ್ಯಾಂಕ್‌ಗಳಿಗೆ ಸರಕಾರಿ ಬಾಂಡ್ ಗಳನ್ನು ಅಡಮಾನವಾಗಿ ನೀಡದೆಯೂ ಸಾಲವನ್ನು ಪಡೆಯಬಹುದು. ರೆಪೊ ದರದಲ್ಲಾದರೆ, ಆರ್‌ಬಿಐ ಸರಕಾರಿ ಬಾಂಡ್‌ಗಳನ್ನು ಬ್ಯಾಂಕ್‌ಗಳಿಗೆ ಅಡಮಾನ ಕೊಟ್ಟು ಸಾಲ ಪಡೆಯಬೇಕಾಗುತ್ತದೆ. ಆದ್ದರಿಂದ ಸರಕಾರಿ ಬಾಂಡ್ ಇಲ್ಲದಿದ್ದರೆ ಆರ್ ಬಿಐಗೆ ರೆಪೊ ದರದ ಮೂಲಕ ವ್ಯವಸ್ಥೆಯಿಂದ ಹಣವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ರೆಪೊ ದರದ ಹಾಗೆಯೇ ಇರುವ ಇದರ ದರ ಈಗ 4.65%.
- ಕೋವಿಡ್-19 ಬಿಕ್ಕಟ್ಟಿನ ವೇಳೆ ಪಾತಾಳಕ್ಕೆ ಕುಸಿದಿದ್ದ ಆರ್ಥಿಕತೆಯನ್ನು ಚೇತರಿಸುವ ಸಲುವಾಗಿ ಆರ್ ಬಿಐ ತನ್ನ ಬಡ್ಡಿ ದರಗಳನ್ನು ಇಳಿಸಿತ್ತು. ರೆಪೊ ದರಗಳನ್ನು ಕಡಿತಗೊಳಿಸಿತ್ತು. ಈ ಉಪಕ್ರಮಗಳನ್ನು ಹಿಂತೆಗೆದುಕೊಳ್ಳಲು ಇದೀಗ ಆರ್ ಬಿಐನ ಹಣಕಾಸು ನೀತಿ ಸಮಿತಿ ಆದ್ಯತೆ ಕೊಟ್ಟಿದೆ.
- ಆರ್ ಬಿಐ ಪ್ರಕಾರ ಈ 2022-23ರಲ್ಲಿ ಹಣದುಬ್ಬರದ ಮಟ್ಟ 6.7%ರಲ್ಲಿ ಇರಲಿದೆ.
- ಹಣದುಬ್ಬರ ಡಿಸೆಂಬರ್ ತನಕವೂ ಶೇ.6ಕ್ಕಿಂತ ಮೇಲಿರಲಿದೆ. ಅಂದರೆ ಆರ್ ಬಿಐನ ಅಪಾಯಕಾರಿ ಮಟ್ಟದಲ್ಲಿ ಇರಲಿದೆ. 2023ರ ಜನವರಿಯಿಂದ ಸುರಕ್ಷಿತ ಮಟ್ಟಕ್ಕೆ ಇಳಿಯಲಿದೆ.
- 2022-23ರ ಜಿಡಿಪಿ ಅಂದಾಜನ್ನು 7.2%ರಲ್ಲಿ ಉಳಿಸಿಕೊಳ್ಳಲಾಗಿದೆ.
- ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲಗಾರರಿಗೆ ಗೃಹ ಸಾಲದ ಗರಿಷ್ಠ ಮಿತಿಯನ್ನು ಆರ್ ಬಿಐ ಇಮ್ಮಡಿಗೊಳಿಸಿದೆ. ಪ್ರೈಮರಿ (ಅರ್ಬನ್) ಕೋಪರೇಟಿವ್ ಬ್ಯಾಂಕ್ (UCBs) ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕ್ (RCBs)ಗಳಿಗೆ ಇದು ಅನ್ವಯಿಸಲಿದೆ. 11 ವರ್ಷಗಳ ಬಳಿಕ ಈ ಪರಿಷ್ಕರಣೆ ನಡೆದಿದೆ. ಟೈರ್-1 ನಗರಗಳಲ್ಲಿ ಯುಸಿಬಿಗಳಲ್ಲಿ ಈ ಹಿಂದಿನ ಗೃಹ ಸಾಲ ಮಿತಿ 30 ಲಕ್ಷ ರೂ. ಇದ್ದಿದ್ದರೆ, ಈಗ 60 ಲಕ್ಷ ರೂ.ಗೆ ಏರಿಸಲಾಗಿದೆ. ಟೈರ್-2 ನಗರಗಳಲ್ಲಿ 70 ಲಕ್ಷ ರೂ.ಗಳಿಂದ 1.4 ಕೋಟಿ ರೂ.ಗೆ ವೃದ್ಧಿಸಲಾಗಿದೆ.
- ರಾಜ್ಯ ಕೋಪರೇಟಿವ್ ಬ್ಯಾಂಕ್ ಗಳು ಮತ್ತು ಜಿಲ್ಲಾ ಕೇಂದ್ರೀಯ ಕೋಪರೇಟಿವ್ ಬ್ಯಾಂಕ್‌ಗಳು (DCCBs) ಕಮರ್ಶಿಯಲ್ ರಿಯಲ್ ಎಸ್ಟೇಟ್, ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಗೆ ಸಾಲ ಸೌಲಭ್ಯ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಫರ್ಡಬಲ್ ಹೌಸಿಂಗ್‌ಗೆ ಇದು ಅನ್ವಯಿಸಲಿದೆ. ಈ ಕ್ರಮಗಳು ಸಹಕಾರ ವಲಯದ ಬಲವರ್ಧನೆಗೆ ಸಹಾಯಕ.
- ಆರ್ ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಮೂಲಕ ಆವರ್ತಿತ ವರ್ಗಾವಣೆಗಳಿಗೆ ( Recurring transactions) ಇ-ಮ್ಯಾಂಡೇಟ್ ಕುರಿತ ಮಿತಿಯನ್ನು ಈಗಿನ 5,000 ರೂ.ಗಳಿಂದ 15,000 ರೂ.ಗೆ ವಿಸ್ತರಿಸಿದೆ,
- ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐ ಜತೆ ಲಿಂಕ್ ಕಲ್ಪಿಸಲು ಆರ್ ಬಿಐ ಅನುಮತಿ ನೀಡಿದೆ. ಆರಂಭದಲ್ಲಿ ರುಪೇ ಕ್ರೆಡಿಟ್ ಕಾರ್ಡ್‌ಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಕ್ರೆಡಿಟ್ ಕಾರ್ಡಗಳ ಬಳಕೆಯನ್ನು ಇದು ಹೆಚ್ಚಿಸುವ ನಿರೀಕ್ಷೆ ಇದೆ.
- ಪ್ರಸ್ತುತ ಡೆಬಿಟ್ ಕಾರ್ಡ್ ಗಳಿಗೆ ಮಾತ್ರ ಯುಪಿಐ ಜತೆ ಲಿಂಕ್ ಮಾಡಬಹುದು. ಇದರಿಂದ ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಜನಪ್ರಿಯ ಯುಪಿಐ ಅಪ್ಲಿಕೇಶನ್ ಗಳಾದ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಮೊದಲಾದವುಗಳ ಜತೆ ಲಿಂಕ್ ಮಾಡಿ ಬಳಸಬಹುದು. ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ಬಳಿಕ ಪೇಮೆಂಟ್ ಮೋಡ್ ಆಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಸಬಹುದು.
- ಯುಪಿಐ ಪೇಮೆಂಟ್‌ಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಮಾಡುವುದಕ್ಕೆ ಸಂಬಂಧಿಸಿ ಆರ್ ಬಿಐ ಯಾವುದೇ ಶುಲ್ಕವನ್ನು ಇದುವರೆಗೆ ನಿಗದಿಪಡಿಸಿಲ್ಲ. ಬ್ಯಾಂಕ್ ಗಳು ನಿಯಮಿತ ಶುಲ್ಕವನ್ನು ವಿಧಿಸುವ ಸಾಧ್ಯತೆ ಇದೆ.
- ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಜತೆಗೆ ಲಿಂಕ್ ಮಾಡುವುದರಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಏಕೆಂದರೆ ದುಬಾರಿ ಪಿಒಎಸ್ ಮೆಶೀನ್‌ನ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ: ಆರ್‌ಬಿಐನಿಂದ ಸಾಲದ ಬಡ್ಡಿ ದರ 0.50% ಏರಿಕೆ, ಹಣದುಬ್ಬರ 6%ಕ್ಕೆ ಇಳಿಕೆ ನಿರೀಕ್ಷೆ