ನವದೆಹಲಿ: ವಾಹನ ಸವಾರರಿಗೆ ಅತಿ ಮುಖ್ಯ ಸೂಚನೆ ಇದು. ಫಾಸ್ಟ್‌ಟ್ಯಾಗ್ (FASTag) ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಮುಖ ಗಡುವು ಇಂದು (ಜನವರಿ 31) ಮುಕ್ತಾಯವಾಗಲಿದೆ. ಅಂದರೆ ಫಾಸ್ಟ್‌ಟ್ಯಾಗ್ ಕೆವೈಸಿ (FASTag KYC) ಅಪ್‌ಡೇಟ್ ಮಾಡಬೇಕಾದ ದಿನಾಂಕ ಇಂದಿಗೆ ಕೊನೆಗೊಳ್ಳಲಿದೆ.
ಜನವರಿ 31, 2024ರ ನಂತರ ಕೆವೈಸಿ ಅಪ್‌ಡೇಟ್ ಆಗದ ಫಾಸ್ಟ್‌ಟ್ಯಾಗ್‌ಗಳನ್ನು ಬ್ಯಾಂಕ್‌ಗಳು ನಿಷ್ಕ್ರಿಯಗೊಳಿಸಲಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ. ಬಹು ವಾಹನಗಳಿಗೆ ಒಂದೇ ಫಾಸ್ಟ್‌ಟ್ಯಾಗ್ ಅಥವಾ ಒಂದೇ ವಾಹನಕ್ಕೆ ಬಹು ಫಾಸ್ಟ್‌ಟ್ಯಾಗ್ ಬಳಸುವುದನ್ನು ತಡೆಯಲು ಅಪ್‌ಡೇಟ್ ಸಹಾಯ ಮಾಡುತ್ತದೆ.
ಫಾಸ್ಟ್‌ಟ್ಯಾಗ್ ಎಂದರೇನು?
ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್ ಸೌಲಭ್ಯ ಜಾರಿಗೆ ತಂದಿದೆ. ಇದು ಪ್ರಿಪೇಯ್ಡ್ ಸೌಲಭ್ಯವಾಗಿದ್ದು, ಈ ಟ್ಯಾಗ್ ಅನ್ನು ವಾಹನದ ಮುಂದಿನ ಗಾಜಿಗೆ ಅಂಟಿಸಲಾಗುತ್ತದೆ. ಇದರಿಂದ ಟೋಲ್ ಶುಲ್ಕವನ್ನು ನಗದು ರಹಿತವಾಗಿ ಹಾಗೂ ತ್ವರಿತವಾಗಿ ಪಾವತಿಸಬಹುದು. ಟೋಲ್‌ನಲ್ಲಿ ಹಣ ಪಾವತಿಸಲು ಹೆಚ್ಚು ಕಾಲ ನಿಲ್ಲಬೇಕೆಂದೇನಿಲ್ಲ. ಗಾಜಿಗೆ ಅಂಟಿಸಿರುವ ಟ್ಯಾಗ್‌ನಲ್ಲಿ ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್‍ಐಡಿ) ಇರುತ್ತದೆ. ಈ ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಿ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗುತ್ತದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣ ಇರಬೇಕಾದುದು ಅಗತ್ಯ. ಟ್ಯಾಗ್ ರೀಡ್ ಆಗುವ ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ.
ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ?
- ಬ್ಯಾಂಕ್ ಲಿಂಕ್ ಮಾಡಲಾದ ಫಾಸ್ಟ್‌ಟ್ಯಾಗ್ ವೆಬ್ಸೈಟ್ಗೆ ಭೇಟಿ ನೀಡಿ
- ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿ ಮತ್ತು ಮೊಬೈಲ್ಗೆ ಬಂದ ಒಟಿಪಿಯನ್ನು ನಮೂದಿಸಿ.
- ಹೋಮ್ಪೇಜ್ನಲ್ಲಿ ಕಂಡು ಬರುವ My Profile ಸೆಕ್ಷನ್ಗೆ ಹೋಗಿ KYC ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ತೆರೆದುಕೊಳ್ಳುವ ಹೊಸ ಪುಟದಲ್ಲಿ ಅಗತ್ಯ ಮಾಹಿತಿಯನ್ನು ತುಂಬಿ Submit ಬಟನ್ ಕ್ಲಿಕ್ ಮಾಡಿ.
- ಈಗ ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯ ಕೆವೈಸಿ ಪೂರ್ಣಗೊಳ್ಳುತ್ತದೆ.
ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್‌ಗೆ ಅಗತ್ಯವಾದ ದಾಖಲೆಗಳು
ಫಾಸ್ಟ್‌ಟ್ಯಾಗ್ ಕೆವೈಸಿ ಪೂರ್ಣಗೊಳಿಸಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ), ವಿಳಾಸ ಪುರಾವೆ, ಪಾಸ್‌ಪೋರ್ಟ್ ಅಳತೆಯ ಫೋಟೊದಂತಹ ಡಾಕ್ಯುಮೆಂಟ್ ಅತ್ಯಗತ್ಯ.
ಫಾಸ್ಟ್‌ಟ್ಯಾಗ್ ಸ್ಟೇಟಸ್ ಪರಿಶೀಲಿಸುವ ವಿಧಾನ
- fastag.ihmcl.com ವೆಬ್ಸೈಟ್ಗೆ ಭೇಟಿ ನೀಡಿ.
- ವೆಬ್ ಪುಟ ತೆರೆಯುತ್ತಿದ್ದಂತೆ ಬಲ ಮೇಲ್ಭಾಗದಲ್ಲಿರುವ ಲಾಗಿನ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
- ಲಾಗ್ ಇನ್ ಮಾಡಲು ಒಟಿಪಿಗಾಗಿ ನೋಂದಾಯಿತ ಮೊಬೈಲ್ ಸಂಖ್ಯೆ ಒದಗಿಸಿ.
- ಲಾಗ್ ಇನ್ ಆದ ನಂತರ, ಡ್ಯಾಶ್ ಬೋರ್ಡ್ನಲ್ಲಿರುವ My Profile ಆಯ್ಕೆಯನ್ನು ಕ್ಲಿಕ್ ಮಾಡಿ.
- ಈಗ ಫಾಸ್ಟ್ಟ್ಯಾಗ್ನ ಕೆವೈಸಿ ಸ್ಟೇಟಸ್ ಕಂಡು ಬರುತ್ತದೆ. ಜತೆಗೆ ನೋಂದಣಿ ಪ್ರಕ್ರಿಯೆಯ ಸಮಯದಲ್ಲಿ ಸಲ್ಲಿಸಿದ ಪ್ರೊಫೈಲ್ ವಿವರಗಳೂ ಮೂಡುತ್ತದೆ.
- ನಿಮ್ಮ ಬ್ಯಾಂಕ್ನ ವೆಬ್ಸೈಟ್ನಲ್ಲಿಯೂ ಇದೇ ರೀತಿ ಪರಿಶೀಲಿಸಬಹುದು.
ಇದನ್ನೂ ಓದಿ: Money Guide: ಫಾಸ್ಟ್‌ಟ್ಯಾಗ್ ಇದ್ದರೂ ದಂಡ ಕಟ್ಟುತ್ತಿದ್ದೀರಾ?; ಪರಿಹಾರ ಇಲ್ಲಿದೆ