ಕೇಶವ ಪ್ರಸಾದ್ ಬಿ, ಬೆಂಗಳೂರು
ಆರ್ಥಿಕ ಹಿಂಜರಿತದ ಕಡೆಗೆ ಅಮೆರಿಕ ಜಾರಿದೆಯೇ ಎಂಬ ಪ್ರಶ್ನೆ ಎದ್ದಿದೆ. ಬಿಲಿಯನೇರ್ ಹೂಡಿಕೆದಾರ ಲಿಯೋನ್ ಕೂಪರ್‌ಮ್ಯಾನ್ ಹೇಳುವ ಪ್ರಕಾರ, ಮುಂದಿನ ವರ್ಷ ಅಮೆರಿಕದ ಆರ್ಥಿಕತೆ ಹಿಂಜರಿತಕ್ಕೀಡಾಗಲಿದೆ. ಇದಕ್ಕೆ ಕಾರಣ ಒಟ್ಟಾರೆ ಎಕಾನಮಿಯ ಮಂದಗತಿ.
ಅಮೆರಿಕದ ಕಂಪನಿಗಳ ಆದಾಯ ಇಳಿಕೆಯಾಗಲಿದ್ದು, ಪರಿಣಾಮವಾಗಿ ಷೇರು ಸೂಚ್ಯಂಕ ಎಸ್ ಆಂಡ್‌ಪಿ ಶೇ. 40ರಷ್ಟು ಕುಸಿಯಲಿದೆ. ಸದ್ಯದ ಭವಿಷ್ಯದಲ್ಲಿ ಷೇರು ಪೇಟೆಯಲ್ಲಿ ಗೂಳಿಯ ಅಬ್ಬರ ಕಾಣಲು ಸಿಗಲಿಕ್ಕಿಲ್ಲ.
ಹೂಡಿಕೆದಾರರು ಈ ವರ್ಷ ಷೇರುಗಳನ್ನು ಕೈಗೆ ಸಿಕ್ಕ ಬೆಲೆಗೆ ಮಾರಾಟ ಮಾಡಲು ಆರಂಭಿಸಿದ್ದಾರೆ. ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಏರಿಸಿರುವುದು ಅವರಿಗೆ ಆರ್ಥಿಕ ಬೆಳವಣಿಗೆ ಬಗ್ಗೆ ನಂಬಿಕೆ ಹೊರಟು ಹೋಗುವಂತೆ ಮಾಡಿದೆ. ಇದಕ್ಕಿಂತ ಆತಂಕದ ಸಂಗತಿ ಏನೆಂದರೆ ಪ್ರತಿ 10 ಮಂದಿ ಅಮೆರಿಕನ್ನರಲ್ಲಿ 6 ಮಂದಿ ತಮ್ಮ ಉಳಿತಾಯದ ಹಣವನ್ನು ಬೆಳೆಯಬಹುದು ಎಂಬ ನಂಬಿಕೆಯೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿದ್ದಾರೆ. ಒಂದೊಮ್ಮೆ ಷೇರು ಸೂಚ್ಯಂಕ 40 ಪರ್ಸೆಂಟ್ ಕುಸಿದರೆ, ಉಂಟಾಗುವ ನಷ್ಟವನ್ನು ಭರಿಸಲು ಮತ್ತೆಷ್ಟು ವರ್ಷ ಕಾಯಬೇಕೇನೋ ಎಂಬ ಆತಂಕ ಕೂಪರ್‌ಮ್ಯಾನ್ ಅವರದ್ದು.
ಕಾರ್ಪೊರೇಟ್ ಕಂಪನಿಗಳ ಆದಾಯ ಕುಸಿಯಲಿದ್ದು, ಅದರ ಬೆನ್ನಲ್ಲೇ ಷೇರುಗಳು ನೆಲಕಚ್ಚಲಿವೆ ಎಂಬುದು ಮಾರುಕಟ್ಟೆ ತಜ್ಞರ ಲೆಕ್ಕಾಚಾರ. ಈ ವರ್ಷ ಅಮೆರಿಕದ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ಕೈಗೆ ಸಿಕ್ಕ ಬೆಲೆಗೆ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಬೆಲೆ ಏರಿಕೆಯನ್ನು ಕಡಿಮೆ ಮಾಡಲು ಫೆಡರಲ್ ರಿಸರ್ವ್ ಬಡ್ಡಿ ದರ ಏರಿಸುತ್ತಿರುವುದರಿಂದ ಮಾರುಕಟ್ಟೆ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಕಳವಳ ಹೂಡಿಕೆದಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಆರ್ಥಿಕ ತಜ್ಞರ ಪ್ರಕಾರ ಅಮೆರಿಕದಲ್ಲಿ ರಿಸೆಷನ್ ಪಕ್ಕಾ
ಯಾವುದೇ ದೇಶದ ಆರ್ಥಿಕ ಬೆಳವಣಿಗೆ ಸತತ 6 ತಿಂಗಳು ಅಥವಾ ಎರಡು ತ್ರೈಮಾಸಿಕ ಅವಧಿಯಲ್ಲಿ ಕುಸಿದರೆ, ಅದನ್ನು ರಿಸೆಷನ್ ಎನ್ನುತ್ತಾರೆ. ಈ ವರ್ಷ ಮೊದಲ ಮೂರು ತಿಂಗಳುಗಳಲ್ಲಿ ಅಮೆರಿಕದ ಆರ್ಥಿಕತೆ ಸತತ ಕುಸಿದ ಪರಿಣಾಮ ರಿಸೆಷನ್ ಭೀತಿ ಕಾಣಿಸಿಕೊಂಡಿದೆ. ಗಾಯಕ್ಕೆ ಉಪ್ಪು ಸವರುವಂತೆ ಅಮೆರಿಕದ ರಫ್ತು ಗಣನೀಯ ಕುಸಿದಿದೆ. ರಾಜ್ಯಗಳು ಹಾಗೂ ಸ್ಥಳೀಯಾಡಳಿತಗಳಲ್ಲಿ ಸಾರ್ವಜನಿಕ ವೆಚ್ಚ ಕಡಿಮೆಯಾಗುತ್ತಿದೆ. ಇತ್ತೀಚೆಗೆ ಐಟಿ ಷೇರುಗಳೂ ಕುಸಿದಿವೆ. ಇದೆಲ್ಲವೂ ರಿಸೆಷನ್ ಆಗಬಹುದೇ ಎಂಬ ಆತಂಕಕ್ಕೆ ಕಾರಣವಾಗಿದೆ.
ಅಮೆರಿಕಕ್ಕೆ ರಿಸೆಷನ್ ಹೊಸತೇನೂ ಅಲ್ಲ. ಆದರೆ ಅಮೆರಿಕದ ಹಿಂಜರಿತ ಬಹುತೇಕ ಜಗತ್ತನ್ನು ನೇರ ಅಥವಾ ಪರೋಕ್ಷವಾಗಿ ಕಾಡುತ್ತದೆ. ಆದರೆ ಅದರ ತೀವ್ರತೆಯಲ್ಲಿ ವ್ಯತ್ಯಾಸವಿರುತ್ತದೆ. ಏಕೆಂದರೆ ಅಮೆರಿಕದ ಡಾಲರ್ ಜಾಗತಿಕ ಕರೆನ್ಸಿ. ಪ್ರಪಂಚದ ಬಲಾಢ್ಯ ಎಕಾನಮಿಗಳಲ್ಲಿ ಒಂದಾಗಿರುವುದರಿಂದ ಬಹುತೇಕ ರಾಷ್ಟ್ರಗಳು ಅದರ ಜತೆಗೆ ವ್ಯವಹಾರವನ್ನು, ವಾಣಿಜ್ಯ ಸಂಬಂಧವನ್ನು ಹೊಂದಿರುತ್ತದೆ.
ನಮ್ಮಲ್ಲಿ ಆರ್‌ಬಿಐ ಇರುವಂತೆ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಕಳೆದ 30 ವರ್ಷದಲ್ಲೇ ಗರಿಷ್ಠ ಬಡ್ಡಿ ದರ ಏರಿಕೆ ಮಾಡಿರುವುದರಿಂದ ಸಾಲದ ಬಡ್ಡಿ ದರ ಹೆಚ್ಚಲಿದೆ. ಜನ ಗೃಹ ಸಾಲ, ವಾಹನ ಸಾಲ ಪಡೆಯುವುದನ್ನು ಕಡಿಮೆ ಮಾಡುತ್ತಾರೆ. ಆಗ ವ್ಯವಸ್ಥೆಯಲ್ಲಿ ಉತ್ಪನ್ನ ಮತ್ತು ಸೇವೆಗಳಿಗೆ ಬೇಡಿಕೆ ತಗ್ಗುತ್ತದೆ. ಬೆಲೆ ಇಳಿಯುತ್ತದೆ ಎಂಬುದು ಬಡ್ಡಿ ದರ ಏರಿಕೆ ಹಿಂದಿನ ಲೆಕ್ಕಾಚಾರ. ಹಾಗಂತ ಈ ಬಡ್ಡಿ ದರ ಇಳಿಕೆಯಿಂದ ಬೇಡಿಕೆ ಕುಸಿದು ರಿಸೆಷನ್ ಆಗಲಿದೆಯೇ ಎಂಬುದು ಸದ್ಯಕ್ಕೆ ಭಾರಿ ಚರ್ಚೆಯಾಗುತ್ತಿದೆ. ಫೈನಾನ್ಷಿಯಲ್ ಟೈಮ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ ಶೇ.70ರಷ್ಟು ಆರ್ಥಿಕ ತಜ್ಞರು ಮುಂದಿನ ವರ್ಷ ಅಮೆರಿಕದಲ್ಲಿ ರಿಸೆಶನ್ ಪಕ್ಕಾ ಎನ್ನುತ್ತಾರೆ. ಇನ್ನು ಕೆಲವರು, ಆದರೆ ಒಳ್ಳೆಯದು ಎಂದೂ ಹೇಳುತ್ತಾರೆ.
ಅಮೆರಿಕದಲ್ಲಿ 40 ವರ್ಷದಲ್ಲೇ ಅತಿ ಹೆಚ್ಚಿನ ಬೆಲೆ ಏರಿಕೆ
ಜಗತ್ತಿನ ನಂ.1 ಎಕಾನಮಿ ಎನ್ನಿಸಿರುವ ಅಮೆರಿಕದಲ್ಲೇ ಈಗ ದಿನ ನಿತ್ಯದ ಹಾಲು, ಮೊಟ್ಟೆ, ತರಕಾರಿ, ಅಡುಗೆ ಅನಿಲ, ಆಸ್ಪತ್ರೆ ಖರ್ಚು, ರೆಫ್ರಿಜರೇಟರ್‌ನಿಂದ ಕಾರು, ಮನೆ, ಸೈಟು, ಫ್ಲ್ಯಾಟ್ ಎಲ್ಲದರ ದರ ಭಾರಿ ದುಬಾರಿಯಾಗಿ ಜನ ತತ್ತರಿಸಿದ್ದಾರೆ. ಕೋವಿಡ್ ಬಿಕ್ಕಟ್ಟು ಶುರುವಾದಂದಿನಿಂದ ನಿಧಾನವಾಗಿ ಮಂದಗತಿಗೆ ತಿರುಗಿದ ಎಕಾನಮಿ, ಕಳೆದೊಂದು ವರ್ಷದಿಂದೀಚೆಗೆ, ಕಳೆದ ಹಲವಾರು ದಶಕಗಳಲ್ಲೇ ಕಂಡರಿಯದಂತೆ ಕುಸಿಯುತ್ತಿದೆ.
ಕಳೆದ ಕೆಲವು ತಿಂಗಳಿನಿಂದ ಅಮೆರಿಕದಿಂದ ಬರುತ್ತಿರುವ ಸುದ್ದಿಗಳಂತೂ, ಇಡೀ ಜಗತ್ತಿನ ಕಳವಳವನ್ನು ಹೆಚ್ಚಿಸಿದೆ. ಮೇನಲ್ಲಿ ಹಣದುಬ್ಬರ ಅಥವಾ ಬೆಲೆ ಏರಿಕೆ 8.6%ಕ್ಕೆ ಹೆಚ್ಚಳವಾಗಿದೆ. ಇದು 40 ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣವಾಗಿದೆ. ಏಪ್ರಿಲ್-ಮೇ ಒಂದರಲ್ಲಿಯೇ ಹಣದುಬ್ಬರ 1 ಪರ್ಸೆಂಟ್ ಏರಿತ್ತು. ಜನರ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ. ಹೀಗಾಗಿ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಮೆರಿಕದ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಳೆದ 30 ವರ್ಷದಲ್ಲೇ ಹೆಚ್ಚಿನ ಮಟ್ಟಕ್ಕೆ ಏರಿಸಿದೆ. ಕಳೆದ ಮಾರ್ಚ್‌ನಿಂದ ಬಡ್ಡಿ ದರ ಏರಿಕೆಯ ಅಸ್ತ್ರವನ್ನು ಅದು ಪ್ರಯೋಗಿಸಿದೆ.
ಭಾರತದಲ್ಲಿ ಆರ್‌ಬಿಐ ಹಣಕಾಸು ನೀತಿಗಳನ್ನು ಜಾರಿಗೊಳಿಸುವಂತೆ, ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಕಾರ್ಯನಿರ್ವಹಿಸುತ್ತದೆ. ಬಡ್ಡಿ ದರಗಳನ್ನು ಏರಿಸುವ ಅದರ ನಿರ್ಧಾರದಿಂದ ಎಕಾನಮಿ ಚುರುಕಾಗಬಹುದೇ ಅಥವಾ ರಿಸೆಷನ್‌ಗೆ ಕಾರಣವಾಗಬಹುದೇ ಎಂಬ ಚರ್ಚೆ ಈಗ ನಡೆಯುತ್ತಿದೆ. ಬಡ್ಡಿ ದರದ ತೀವ್ರ ಏರಿಕೆಯಿಂದ ಬೇಡಿಕೆ ಕುಸಿದು ಆರ್ಥಿಕ ಚಟುವಟಿಕೆಗಳು ಕುಸಿದರೆ ರಿಸೆಶನ್ ಆಗಬಹುದು ಎಂಬ ವಾದ ಹೂಡಿಕೆದಾರರ ವಲಯದಲ್ಲಿದೆ. ಬಡ್ಡಿ ದರ ಏರಿಕೆಯಾದಾಗ ಕಾರ್ಪೊರೇಟ್ ಕಂಪನಿಗಳೂ ಸಾಲ ತೆಗೆದು ಹೂಡಿಕೆ ಮಾಡುವುದಿಲ್ಲ. ಹೂಡಿಕೆಯ ನಿರ್ಧಾರಗಳನ್ನು ಮುಂದೂಡುತ್ತವೆ.
ರಷ್ಯಾ ವಿರುದ್ಧದ ನಿರ್ಬಂಧಗಳ ಎಫೆಕ್ಟ್
ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾದ ವಿರುದ್ಧ ಅಮೆರಿಕ ಅನೇಕ ನಿರ್ಬಂಧಗಳನ್ನು ವಿಧಿಸಿದೆ. ಅಮೆರಿಕದ ಕಂಪನಿಗಳು ರಷ್ಯಾಕ್ಕೆ ರಫ್ತು ಮಾಡಬಾರದು, ರಷ್ಯಾದಿಂದ ತೈಲ ಖರೀದಿಸಬಾರದು ಎಂಬ ನಿರ್ಬಂಧಗಳೂ ಇವೆ. ಇದರ ಪರಿಣಾಮ ಅಮೆರಿಕದ ಕಂಪನಿಗಳಿಗೆ ಉತ್ಪಾದನೆಯ ಖರ್ಚು ವೆಚ್ಚಗಳು ಜಾಸ್ತಿಯಾಗಿವೆ. ರಷ್ಯಾದಿಂದ ಅಮೆರಿಕಕ್ಕೆ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಕೃಷಿ ಉತ್ಪನ್ನಗಳ ಅಭಾವಕ್ಕೆ ಇದು ಕಾರಣವಾಗಿದೆ. ತರಕಾರಿಗಳ ಬೆಲೆ ಗಗನಕ್ಕೇರಿದೆ. ಹವಾಮಾನ ವೈಪರೀತ್ಯವೂ ಕಷ್ಟವನ್ನು ಹೆಚ್ಚಿಸಿದೆ.
ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಪರಿಣಾಮಗಳು ಕಚ್ಚಾ ತೈಲ ಮತ್ತು ದಿನ ನಿತ್ಯ ಬಳಕೆಯ ವಸ್ತುಗಳ ದರಗಳನ್ನು, ಕಚ್ಚಾ ವಸ್ತುಗಳ ಬೆಲೆಯನ್ನು ಗಗನಕ್ಕೇರುವಂತೆ ಮಾಡಿವೆ. ಉದಾಹರಣೆಗೆ ಆಹಾರ ವಸ್ತುಗಳ ದರ ಏಪ್ರಿಲ್-ಮೇ ನಡುವೆ 10% ಏರಿಕೆಯಾಗಿದೆ. ಇಂಧನ ದರ 34% ಜಿಗಿದಿದೆ. ಪ್ರತಿ ತಿಂಗಳೂ ಇದೇ ರೀತಿ ಬೆಲೆಗಳು ಏರಿದರೆ ಹೇಗೆ ಎಂಬುದು ಅಲ್ಲಿನ ಜನರ ಆತಂಕವಾಗಿದೆ.
ನೇರವಾಗಿ ದುಡ್ಡು ಹಂಚಿತ್ತು ಅಮೆರಿಕ ಸರಕಾರ
ಕೋವಿಡ್ ಬಿಕ್ಕಟ್ಟಿನಿಂದ ಅಮೆರಿಕ ಕೂಡ ಕಂಗೆಟ್ಟಿತ್ತು. ಇಂಥ ಸಂದರ್ಭ ಫೆಡರಲ್ ರಿಸರ್ವ್ 3 ಲಕ್ಷ ಕೋಟಿ ಡಾಲರ್ ನೋಟುಗಳನ್ನು ಮುದ್ರಿಸಿತು. ಬೈಡೆನ್ ಸರಕಾರ ಜನತೆಗೆ ನೆರವಾಗುವ ಉದ್ದೇಶದಿಂದ ಕಳೆದ ವರ್ಷ 1.9 ಲಕ್ಷ ಕೋಟಿ ಡಾಲರ್ ಪ್ಯಾಕೇಜನ್ನು ಘೋಷಿಸಿತು. ಜನರ ಬ್ಯಾಂಕ್ ಖಾತೆಗೆ ದುಡ್ಡು ಜಮೆ ಮಾಡಲಾಯಿತು. ನೇರ ನಗದನ್ನು ಹೆಚ್ಚಿಸಲಾಯಿತು. ಫೆಡರಲ್ ರಿಸರ್ವ್ ಹೇಗೂ 3 ಲಕ್ಷ ಕೋಟಿ ಡಾಲರ್ ನೋಟುಗಳನ್ನು ಮುದ್ರಿಸಿಟ್ಟಿತ್ತು. ಇದರ ಪರಿಣಾಮ ಜನರ ಆದಾಯದಲ್ಲಿ ವರ್ಷದೊಳಗೆ ಮೂರರಿಂದ ನಾಲ್ಕು ಪರ್ಸೆಂಟ್ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಯಿತು. ಆದರೆ ನಿಜಕ್ಕೂ ಉಂಟಾಗಿದ್ದು ದೊಡ್ಡ ಬ್ಲಂಡರ್. ನೋಟುಗಳನ್ನು ಪ್ರಿಂಟ್ ಹಾಕುವುದು ಮತ್ತು ವಿತರಿಸುವುದು ದೊಡ್ಡದಲ್ಲ, ಆದರೆ ಅದಕ್ಕೆ ತಕ್ಕಂತೆ ಉತ್ಪಾದನೆ, ಪೂರೈಕೆಯ ಚಟುವಟಿಕೆಗಳು ಚುರುಕಾಗಬೇಕು. ಅಮೆರಿಕದಲ್ಲಿ ಅದು ನಡೆಯಲಿಲ್ಲ. ಇದರ ಪರಿಣಾಮ ಉಂಟಾಗಿದ್ದು, 40 ವರ್ಷಗಳಲ್ಲೇ ಕಂಡರಿಯದ ಹಣದುಬ್ಬರ.
ರಿಸೆಷನ್ ಆತಂಕ ಬೇಡ ಎನ್ನುತ್ತಿದ್ದಾರೆ ಜೊ ಬೈಡೆನ್
ಬೆಲೆ ಏರಿಕೆ ಆಗಿರುವುದು ನಿಜ, ಆರ್ಥಿಕತೆಯಲ್ಲಿ ಕೆಲವು ತೊಂದರೆಗಳಿರುವುದೂ ಹೌದು. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ನಾವೇ ವಾಸಿ. ಆರ್ಥಿಕ ಹಿಂಜರಿತ ಆಗಲಿದೆ ಎಂದು ನನಗೆ ಅನ್ನಿಸುತ್ತಿಲ್ಲ ಎನ್ನುತ್ತಾರೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್.
ಇಂಧನ ಪೂರೈಕೆಯಲ್ಲಿನ ಕೊರತೆಯಿಂದ ದೇಶದ ಜನತೆಗೆ ಸಂಕಷ್ಟವಾಗಿದೆ. ಇದನ್ನು ಬಗೆಹರಿಸಲು ಸರ್ಕಾರ ಯತ್ನಿಸುತ್ತಿದೆ ಎಂಬುದು ಜೋ ಬೈಡೆನ್ ಅವರ ಸಮರ್ಥನೆ.
ಇದಕ್ಕೆ ಪೂರಕವಾಗಿ ಕೆಲ ಆರ್ಥಿಕ ತಜ್ಞರೂ ತಮ್ಮ ವಾದವನ್ನು ಮುಂದಿಡುತ್ತಾರೆ. ಅಮೆರಿಕದಲ್ಲಿ ಕೋವಿಡ್ ಬಿಕ್ಕಟ್ಟಿನ ಸಂದರ್ಭ ನಷ್ಟವಾಗಿದ್ದ ಉದ್ಯೋಗಗಳೆಲ್ಲ 2022ರ ವೇಳೆಗೆ ಭರ್ತಿಯಾಗಿದೆ. ಉದ್ಯೋಗ ಸೃಷ್ಟಿ ಚುರುಕಾಗಿದೆ. ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಖರ್ಚು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ಕೊರತೆ ಇಲ್ಲ. ಕಾರ್ಪೊರೇಟ್ ಕಂಪನಿಗಳಲ್ಲಿ ಸಂಬಳ ಹೆಚ್ಚುತ್ತಿದೆ ಎಂಬ ವಾದವೂ ಇದೆ.
ಭಾರತದ ಮೇಲೆ ಪರಿಣಾಮವೇನು?
ಪ್ರತಿ ಸಲವೂ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾದಾಗಲೆಲ್ಲ ಭಾರತದ ಐಟಿ ಕ್ಷೇತ್ರಕ್ಕೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬ ಚರ್ಚೆ ಸಾಮಾನ್ಯ. ಅದರಲ್ಲೂ ಅಮೆರಿಕದಲ್ಲಿ ನಡೆಯುವ ವಿದ್ಯಮಾನಗಳಿಗೂ, ಭಾರತದ ಐಟಿ ವಲಯಕ್ಕೂ ಹೋಲಿಸುವುದು ಹೆಚ್ಚು. ಇದಕ್ಕೆ ಕಾರಣವೂ ಇದೆ. ಭಾರತದ ಐಟಿ ಕಂಪನಿಗಳ ಆದಾಯದಲ್ಲಿ 40ರಿಂದ 78 ಪರ್ಸೆಂಟ್ ಪಾಲು ಅಮೆರಿಕದಿಂದ ಬರುತ್ತದೆ. ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾದ ಬಹುಪಾಲು ಆದಾಯ ಅಮೆರಿಕದ ಗ್ರಾಹಕರಿಂದ ಸಿಗುತ್ತದೆ. ಹೀಗಾಗಿಯೇ ಅಮೆರಿಕದ ಬಿಕ್ಕಟ್ಟು ಪ್ರಭಾವ ಬೀರಬಹುದೇ ಎಂಬ ಪ್ರಶ್ನೆ ಕಾಡುತ್ತಿದೆ. ಸಾಲದ್ದಕ್ಕೆ ಜೆಪಿ ಮೋರ್ಗಾನ್ ಸಂಸ್ಥೆಯೂ ತನ್ನ ಇತ್ತೀಚಿನ ವರದಿಯಲ್ಲಿ ಐಟಿ ವಲಯ ಒತ್ತಡದಲ್ಲಿದೆ. ಮುಂಬರುವ ದಿನಗಳಲ್ಲಿ ಆದಾಯಕ್ಕೆ ಹೊಡೆತ ಬೀಳಬಹುದು ಎಂದು ಎಚ್ಚರಿಸಿದೆ.
ಆದರೆ ಭಾರತದ ಐಟಿ ಉದ್ದಿಮೆ ಈಗ ಪ್ರಬುದ್ಧವಾಗಿದ್ದು, ಯಾವುದೇ ಬಾಹ್ಯ ಒತ್ತಡಗಳನ್ನು ನಿಭಾಯಿಸಬಲ್ಲುದು ಎನ್ನುತ್ತಾರೆ ಅಸೊಚೆಮ್‌ನ ಮಾಜಿ ಅಧ್ಯಕ್ಷ ಸಂಪತ್ ರಾಮನ್.
ಇತ್ತೀಚೆಗೆ ಐಟಿ ಕಂಪನಿಗಳ ಷೇರು ದರಗಳಲ್ಲಿ ಕುಸಿತಕ್ಕೀಡಾಗಿದ್ದರೂ, ಇಂಥ ಏರಿಳಿತಗಳನ್ನು ಉದ್ದಿಮೆ ತಾಳಿಕೊಳ್ಳಲಿದೆ ಎನ್ನುತ್ತಾರೆ ತಜ್ಞರು. ಕೋವಿಡ್ ಸಂದರ್ಭದಲ್ಲೂ ಐಟಿ ಕಂಪನಿಗಳ ಭವಿಷ್ಯದ ಬಗ್ಗೆ ಊಹಾಪೋಹಗಳು ಉಂಟಾಗಿತ್ತು. ಆದರೆ ಕೋವಿಡ್ ಲಾಕ್ ಡೌನ್ ನಡುವೆಯೂ ಟೆಕ್ಕಿಗಳು ಮನೆಯಿಂದಲೇ ಕೆಲಸ ಮುಂದುವರಿಸಿದ್ದರು. ಈ ಅವಧಿಯಲ್ಲಿ ಬಹುತೇಕ ಉದ್ದಿಮೆಗಳು ಡಿಜಿಟಲೀಕರಣಕ್ಕೆ ತಮ್ಮನ್ನು ಒಡ್ಡಿಕೊಂಡ ಪರಿಣಾಮ ಐಟಿ ವಲಯಕ್ಕೆ ನಿರೀಕ್ಷೆ ಮೀರಿ ಬೇಡಿಕೆ ವೃದ್ಧಿಸಿತು. ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಯಿತು. ಈಗಲೂ ಅದೇ ಟ್ರೆಂಡ್ ಮುಂದುವರಿದಿದೆ.
ಆದರೆ ಭಾರತವು ಅಮೆರಿಕಕ್ಕೆ ಐಟಿ ಹೊರತುಪಡಿಸಿ ಇತರ ಅನೇಕ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಅದರಲ್ಲಿ ಜವಳಿ ಉತ್ಪನ್ನಗಳು, ಎಂಜಿನಿಯರಿಂಗ್, ಔಷಧ, ಅಮೂಲ್ಯ ಶಿಲೆಗಳು, ಯಂತ್ರೋಪಕರಣಗಳು, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಸಾಧನಗಳು, ಸಾವಯವ ರಾಸಾಯನಿಕಗಳು, ಸಾಗರೋತ್ಪನ್ನಗಳು, ಪ್ಲಾಸ್ಟಿಕ್, ಪೀಠೋಪಕರಣಗಳು, ರಬ್ಬರ್, ಅಲ್ಯುಮಿನಿಯಂ, ಕಬ್ಬಿಣ ಮತ್ತು ಉಕ್ಕು, ಪಾದರಕ್ಷೆ, ಸೌಂದರ್ಯವರ್ಧಕಗಳು, ಕಾಫಿ,ಚಹಾ, ಏರ್‌ಕ್ರಾಫ್ಟ್, ಸ್ಪೇಸ್ ಕ್ರಾಫ್ಟ್, ಗ್ಲಾಸ್, ತೈಲಬೀಜಗಳು, ಹತ್ತಿ, ಅನೇಕ ಉದ್ದಿಮೆಗಳಿಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಭಾರತ ರಫ್ತು ಮಾಡುತ್ತದೆ. ಐಟಿ ಒಂದು ಭಾಗ ಮಾತ್ರ. ಇವುಗಳ ಹಿತಾಸಕ್ತಿಗೆ ಅಮೆರಿಕದ ಪರಿಸ್ಥಿತಿ ಚೆನ್ನಾಗಿರುವುದು ಮುಖ್ಯ. 2021ರಲ್ಲಿ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸರಕು ವ್ಯಾಪಾರ ದಾಖಲೆಯ 100 ಬಿಲಿಯನ್ ಡಾಲರ್, ಅಂದರೆ ಅಂದಾಜು 7.8 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು. ಹೀಗಾಗಿ ಬಡ್ಡಿ ದರ ಏರಿಕೆ ಪರಿಣಾಮ ಭಾರತದ ಉತ್ಪನ್ನಗಳಿಗೆ ಅಮೆರಿಕದಲ್ಲಿ ಬೇಡಿಕೆ ಕ್ಷೀಣಿಸಿದರೆ ಮಾತ್ರ ಕಷ್ಟವಾದೀತು. ಎರಡನೆಯದಾಗಿ ಭಾರತದಲ್ಲಿ ಅಮೆರಿಕದ ಹೂಡಿಕೆ ಕಡಿಮೆಯಾದರೆ ಸವಾಲಾದೀತು. ಆದರೆ ಭಾರತ ಮೇಕ್ ಇನ್ ಇಂಡಿಯಾ ಅಭಿಯಾನ, ಪಿಎಲ್‌ಐ ಸ್ಕೀಮ್ ಅಡಿ ದೇಶಿ ಉತ್ಪಾದನೆಗೆ ಒತ್ತು ನೀಡುತ್ತಿದೆ, ಹೀಗಾಗಿ ವಿದೇಶಿ ಹೂಡಿಕೆಯ ಒಳಹರಿವು ಉಂಟಾಗುತ್ತಿದೆ ಎನ್ನುತ್ತಾರೆ ತಜ್ಞರು.
ಈಗಲೂ ಅಮೆರಿಕ ಸೂಪರ್ ಪವರ್
ಶೀತಲ ಸಮರದ ಕಾಲಘಟ್ಟದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಪತನವಾಯಿತು. ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ಕಣದಲ್ಲಿ ಉಳಿಯಿತು. ಶೀತಲಸಮರ ಅಂತ್ಯವಾಗುವ ಹೊತ್ತಿಗೆ 1991ರಲ್ಲಿ ಸೋವಿಯತ್ ಒಕ್ಕೂಟ ವಿಸರ್ಜನೆಯಾಯಿತು. ಅಮೆರಿಕ ವಿಶ್ವದ ಏಕೈಕ ಸೂಪರ್ ಪವರ್ ಆಯಿತು. ಈಗಲೂ ಜಾಗತಿಕ ಮಟ್ಟದಲ್ಲಿ ಅಮೆರಿಕ ತನ್ನ ಪ್ರಭಾವವನ್ನು ಹೊಂದಿದೆ. ಜಗತ್ತಿನಲ್ಲಿ ಅತಿ ದೊಡ್ಡ ಮಿಲಿಟರಿ ಬಜೆಟ್ ಅನ್ನು ಇದು ಒಳಗೊಂಡಿದೆ. ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಹಲವು ದೇಶಗಳಿಗೆ ರಫ್ತು ಮಾಡುತ್ತದೆ. ಇದಕ್ಕಾಗಿಯೇ ಜಗತ್ತಿನ ಒಂದಿಲ್ಲೊಂದು ಕಡೆಗಳಲ್ಲಿ ಸಂಘರ್ಷಗಳಿಗೆ ಕುಮ್ಮಕ್ಕು ನೀಡುತ್ತದೆ ಎಂಬ ಆರೋಪವೂ ಅಮೆರಿಕದ ಮೇಲಿದೆ. ಮಾಹಿತಿ ತಂತ್ರಜ್ಞಾನ, ಆಟೊಮೊಬೈಲ್, ಬಾಹ್ಯಾಕಾಶ, ಪರಮಾಣು ಇಂಧನ ಹಾಗೂ ಉತ್ಪಾದನೆಯಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ.
ಈಗಲೂ ಅಮೆರಿಕ ಸೂಪರ್ ಪವರ್ ಆಗಿದೆ. ಜನ ಅಂದುಕೊಂಡಷ್ಟು ದುರ್ಬಲವಾಗಿಲ್ಲ. ರಿಸೆಶನ್ ಆಗಲಿದೆ ಎಂದು ಗ್ರಹಿಸುವುದು ಕಷ್ಟ ಎನ್ನುತ್ತಾರೆ ಹೂಡಿಕೆದಾರ ಕೆವಿನ್ ಒಲಿಯರಿ. ಅದಕ್ಕೆ ಎರಡು ಕಾರಣಗಳನ್ನೂ ಅವರು ವಿವರಿಸುತ್ತಾರೆ. ಮೊದಲನೆಯದಾಗಿ ಕಳೆದ ಕೆಲ ವರ್ಷಗಳಲ್ಲಿ ಅಮೆರಿಕದ ಆರ್ಥಿಕತೆಗೆ 4.5 ಲಕ್ಷ ಕೋಟಿ ಡಾಲರ್ ಹಣವನ್ನು ಸೇರಿಸಲಾಗಿದೆ. ಗ್ರಾಹಕರು ಮತ್ತು ಬಿಸಿನೆಸ್ ವಲಯಕ್ಕೂ ಭರಪೂರ ಹಣ ನೀಡಲಾಗಿದೆ. ಈ ಹಣದಿಂದ ಗ್ರಾಹಕರು ತಮಗೆ ಬೇಕಾದ್ದನ್ನು ಖರೀದಿಸುತ್ತಿದ್ದಾರೆ. ಎರಡನೆಯದಾಗಿ ತಂತ್ರಜ್ಞಾನದ ಪರಿಣಾಮ ಉತ್ಪಾದನೆ ಗಣನೀಯವಾಗಿ ಸುಧಾರಿಸಿದೆ. ಹೀಗಾಗಿ ರಿಸೆಶನ್ ಉಂಟಾಗದು ಎನ್ನುತ್ತಾರೆ ಅವರು.
ಹೀಗಾಗಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಆಗಲಿದೆಯೇ ಎಂಬುದನ್ನು ಗ್ರಹಿಸುವುದು ಕಷ್ಟ. ಆದರೆ ಹಣದುಬ್ಬರ ಕಳೆದ 40 ವರ್ಷಗಳಲ್ಲಿಯೇ ಕಂಡರಿಯದ ಮಟ್ಟಕ್ಕೇರಿದ್ದು, ಅಮೆರಿಕದ ಪ್ರಜೆಗಳನ್ನು ಕಂಗೆಡಿಸಿರುವುದಂತೂ ವಾಸ್ತವ. ಈ ಬಿಕ್ಕಟ್ಟು ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಕಾದು ನೋಡಬೇಕು.