ನವದೆಹಲಿ: ದೇಶದಲ್ಲಿ ಮುಖ್ಯವಾಗಿ ಬಿಹಾರ, ಕೇರಳ, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಅಧ್ಯಯನ ವರದಿ ತಿಳಿಸಿದೆ.
ಶ್ರೀಲಂಕಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್‌ಬಿಐ ರಾಜ್ಯಗಳ ಹಣಕಾಸು ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿತ್ತು. ಕೋವಿಡ್-೧೯ ಬಿಕ್ಕಟ್ಟಿನ ಬಳಿಕ ಮೇಲ್ಕಂಡ ರಾಜ್ಯಗಳ ವಿತ್ತೀಯ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂದು ತಿಳಿಸಿದೆ.
ನಗದು ಸಬ್ಸಿಡಿ, ಉಚಿತ ಲೋಕೋಪಯೋಗಿ ಸೇವೆ, ಹಳೆಯ ಪಿಂಚಣಿಯ ಮರು ಜಾರಿ, ಅತಾರ್ಕಿಕವಾದ ಖಾತರಿ ಸ್ಕೀಮ್‌ಗಳನ್ನು ನೀಡಿರುವ ರಾಜ್ಯಗಳು ಆರ್ಥಿಕವಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿ ಇವೆ ಎಂದು ವರದಿ ತಿಳಿಸಿದೆ.
ಆರ್‌ಬಿಐ ಪ್ರಕಾರ ವಿತ್ತೀಯವಾಗಿ ಉತ್ತಮ ಸ್ಥಿತಿಯಲ್ಲಿರುವ ರಾಜ್ಯಗಳು
- ಗುಜರಾತ್
- ಮಹಾರಾಷ್ಟ್ರ
- ದಿಲ್ಲಿ
- ಕರ್ನಾಟಕ
- ಒಡಿಶಾ
ಸಾಲದ ಶೂಲದಲ್ಲಿರುವ ರಾಜ್ಯಗಳು
ಪಂಜಾಬ್, ರಾಜಸ್ಥಾನ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾಲ- ಜಿಎಸ್‌ಡಿಪಿ ಅನುಪಾತ ಮಿತಿ ಮೀರಿದೆ. ಬಿಹಾರ, ಆಂಧ್ರಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಹರಿಯಾಣ ಮತ್ತು ಉತ್ತರಪ್ರದೇಶ ಕೂಡ ತಮ್ಮ ಸಾಲದ ಹೊರೆ ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆರ್‌ಬಿಐ ತಿಳಿಸಿದೆ.
ಭಾರತದ ಎಲ್ಲ ರಾಜ್ಯಗಳು ಮಾಡುವ ಒಟ್ಟು ಖರ್ಚುಗಳಲ್ಲಿ ಸುಮಾರು ಅರ್ಧದಷ್ಟನ್ನು ಈ ೧೦ ರಾಜ್ಯಗಳು ಮಾಡುತ್ತವೆ.
ಉಚಿತ ವಿದ್ಯುತ್ ಮತ್ತು ಉಚಿತ ನೀರು, ಉಚಿತ ಸಾರಿಗೆ, ಸಾಲ ಮನ್ನಾ ಯೋಜನೆಗಳು ಪ್ರತಿಕೂಲ ಪರಿಣಾಮವನ್ನೂ ಬೀರುತ್ತಿವೆ. ಪುಕ್ಕಟೆ ವಿದ್ಯುತ್ ಮತ್ತು ನೀರಿನ ವಿತರಣೆ ಪರಿಸರ ಸಂಪನ್ಮೂಲದ ದುರ್ಬಳಕೆಗೂ ಕಾರಣವಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಇದೀಗ ಕೆಲ ರಾಜ್ಯಗಳು ಹಳೆಯ ಪಿಂಚಣಿ ಯೋಜನೆ ಜಾರಿಗೆ ಮುಂದಾಗಿದ್ದು, ಇದು ವಿತ್ತೀಯ ಪರಿಸ್ಥಿತಿಯನ್ನು ಹದಗೆಡಿಸುತ್ತಿವೆ ಎಂದಿದೆ.