ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಕಳೆದ ಎರಡು ವಾರಗಳಲ್ಲಿ 1000 ಕೋಟಿ ಡಾಲರ್‌ಗಳನ್ನು (ಅಂದಾಜು 78,000 ಕೋಟಿ ರೂ.) ಹಣಕಾಸು ವಾಯಿದಾ ವಹಿವಾಟು ಮಾರುಕಟ್ಟೆಯಲ್ಲಿ (spot market) ಮಾರಾಟ ಮಾಡಿದೆ.
ಹಣದುಬ್ಬರದ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಡಾಲರ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಬಹುದು. ಆಗ ಆಮದು ವೆಚ್ಚ ಮತ್ತು ಹಣದುಬ್ಬರ ಇಳಿಕೆಗೆ ಸಹಾಯಕವಾಗುತ್ತದೆ. ಭಾರತ 600 ಶತಕೋಟಿ ಡಾಲರ್‌ಗಳ (46 ಲಕ್ಷ ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿರುವುದು ಈಗ ಪ್ರಯೋಜನಕ್ಕೆ ಬರುತ್ತಿದೆ.
ಕಳೆದ ಬಜೆಟ್‌ನಲ್ಲಿ ಪ್ರಸಕ್ತ ಸಾಲಿಗೆ ಕಚ್ಚಾ ತೈಲ ದರದ ಸರಾಸರಿ ಕುರಿತ ಮುನ್ನೋಟವನ್ನು 100 ಡಾಲರ್‌ಗೆ ನಿಗದಿಪಡಿಸಲಾಗಿತ್ತು. ಆದರೆ ಅದನ್ನು ಆರ್‌ಬಿಐ 115 ಡಾಲರ್‌ಗೆ ಪರಿಷ್ಕರಿಸುವ ಸಾಧ್ಯತೆ ಇದೆ. ಏಕೆಂದರೆ ಅಂತಾರಾಷ್ಟ್ರೀಯ ಕಚ್ಚಾ ತೈಲ ದರ 120 ಡಾಲರ್‌ನ ಉನ್ನತ ಮಟ್ಟದಲ್ಲಿದೆ.
ಜಾಗತಿಕ ವಿದ್ಯಮಾನಗಳ ಪರಿಣಾಮ ಭಾರತದ ಆರ್ಥಿಕಕತೆ ನಿಶ್ಚಲವಾಗುವ ಅಪಾಯ ಇಲ್ಲ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ. ದೀರ್ಘಕಾಲೀನ ದೃಷ್ಟಿಯಿಂದ ಆರ್ಥಿಕ ಬೆಳವಣಿಗೆ ಸುಧಾರಿಸುವ ಸಾಧ್ಯತೆ ಇದೆ. ಈಗಾಗಲೇ ಜಿಡಿಪಿ ಕೋವಿಡ್ ಪೂರ್ವ ಮಟ್ಟವನ್ನು ಮೀರಿದೆ ಎಂದು ತಿಳಿಸಿದ್ದಾರೆ.