ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಎಲಾನ್ ಮಸ್ಕ್ ಅವರು, ಟ್ವಿಟರ್‌ನಲ್ಲಿ ಬಳಕೆದಾರರಿಗೆ ಕಾಯಂ ನಿಷೇಧವನ್ನು (Twitter) ತೆರವುಗೊಳಿಸಲು ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ಮಸ್ಕ್ ಅವರು ಇಂಥ ನಿರ್ಧಾರ ಕೈಗೊಂಡರೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಟ್ವಿಟರ್‌ಗೆ ವಾಪಸಾಗುವ ಸಾಧ್ಯತೆ ಇದೆ.
ಏಕೆಂದರೆ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಟ್ವಿಟರ್ 2021ರ ಜನವರಿಯಲ್ಲಿ ಕಾಯಂ ಆಗಿ ನಿಷೇಧಿಸಿತ್ತು.
ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ವಿಟರ್ ಖಾತೆಯ ಮೂಲ ಹಿಂಸೆಗೆ ಪ್ರಚೋದನೆ ನೀಡುವ ಪೋಸ್ಟ್‌ಗಳನ್ನು ಹಾಕಿದ್ದಾರೆ. ಇದರಿಂದ ಸಮಾಜದಲ್ಲಿ ಅಶಾಂತಿ, ಗಲಭೆ ಉಂಟಾಗುವ ಅಪಾಯ ಇರುವುದರಿಂದ, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅವರ ಖಾತೆಯನ್ನು ಶಾಶ್ವತವಾಗಿ ಮುಚ್ಚಲಾಗುತ್ತಿದೆ ಎಂದು (@realDonaldTrump) ಟ್ವಿಟರ್ ತಿಳಿಸಿತ್ತು.
ನಿಷೇಧ ತೆರವುಗೊಳಿಸುವುದಾಗಿ ಮಸ್ಕ್ ಭರವಸೆ: ಸ್ವತ ಎಲಾನ್ ಮಸ್ಕ್ ಕೂಡ ಈ ಹಿಂದೆ, ಟ್ವಿಟರ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಟ್ರಂಪ್ ವಿರುದ್ಧದ ನಿಷೇಧವನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು.
ಟ್ರಂಪ್ ನಕಾರ: ಒಂದು ವೇಳೆ ಟ್ವಿಟರ್ ತಮ್ಮ ಖಾತೆಯನ್ನು ಮತ್ತೆ ತೆರೆದರೂ, ಅದರಲ್ಲಿ ಸಕ್ರಿಯನಾಗುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಆಗ ಹೇಳಿದ್ದರು. ಮತ್ತೊಂದು ಸಾಮಾಜಿಕ ಜಾಲತಾಣ ಟ್ರುತ್ ಸೋಶಿಯಲ್‌ನಲ್ಲಿ ಸಕ್ರಿಯರಾಗಿದ್ದರು. ಹೀಗಿದ್ದರೂ ಅಮೆರಿಕದಲ್ಲಿ ನವೆಂಬರ್ 8ರಂದು ಮಧ್ಯಂತರ ಚುನಾವಣೆ ನಡೆಯಲಿದ್ದು, ಅದಕ್ಕೆ ಮುನ್ನ ಟ್ವಿಟರ್‌ಗೆ ಟ್ರಂಪ್ ರಿ ಎಂಟ್ರಿ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.