Site icon Vistara News

Gautam Adani: ಅಧಿಕಾರ ತೊರೆದು ನಿವೃತ್ತರಾಗಲಿದ್ದಾರಾ ಗೌತಮ್ ಅದಾನಿ? ಈ ಬಗ್ಗೆ ಅವರು ಹೇಳಿದ್ದೇನು?

Hindenburg

ನವದೆಹಲಿ: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್‌ ಅದಾನಿ (Gautam Adani) ಅವರು ತಮ್ಮ ಅದಾನಿ ಗ್ರೂಪ್‌ಗೆ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಹೊರಟಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ (Adani Enterprises) ಸ್ಪಷ್ಟೀಕರಣ ನೀಡಿದೆ. ಗೌತಮ್‌ ಅದಾನಿ ಹೇಳಿರುವ ವಿಚಾರಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅವರು ತಮ್ಮ ನಿವೃತ್ತಿಯ ದಿನಾಂಕವನ್ನು ಘೋಷಿಸಿಲ್ಲ ಎಂದು ತಿಳಿಸಿದೆ.

“ಇತ್ತೀಚಿನ ಸಂದರ್ಶನವೊಂದರಲ್ಲಿ ಗೌತಮ್ ಅದಾನಿ ಅವರು ವ್ಯವಹಾರದ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಉತ್ತರಾಧಿಕಾರಿ ನೇಮಕದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಉತ್ತರಾಧಿಕಾರವು ಕೇವಲ ಒಂದು ಘಟನೆಯಲ್ಲ ಮತ್ತು ಒಂದು ದಿನದಲ್ಲಿ ನಡೆಯುವ ಬೆಳವಣಿಗೆಯಲ್ಲ. ಅದು ಒಂದು ನಿರಂತರ ಪ್ರಯಾಣ ಎಂದಷ್ಟೇ ಹೇಳಿದ್ದಾರೆ. ಅವರು ನಿವೃತ್ತಿಯ ಬಗ್ಗೆ ಯಾವುದೇ ದಿನಾಂಕ ಅಥವಾ ಸಮಯವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲʼʼ ಎಂದು ಅದಾನಿ ಎಂಟರ್‌ಪ್ರೈಸಸ್‌ ತಿಳಿಸಿದೆ.

“ಇದಲ್ಲದೆ ಕುಟುಂಬ ಟ್ರಸ್ಟ್‌ ಬಗ್ಗೆಯೂ ಗೌತಮ್‌ ಅದಾನಿ ಹೇಳಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ತಮ್ಮ ವಿವಿಧ ಉದ್ಯಮಗಳನ್ನು ಇಬ್ಬರು ಪುತ್ರರು ಮತ್ತು ಸೋದರ ಸಂಬಂಧಿಕರು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಷೇರು ಬೆಲೆಗಳು ಮಾರುಕಟ್ಟೆ ಆಧಾರದಲ್ಲಿ ನಿರ್ಧಾರವಾಗುತ್ತವೆ. ಕಂಪನಿಯ ಆಡಳಿತ ಮಂಡಳಿಗೆ ಇದರಲ್ಲಿ ಯಾವುದೇ ನಿಯಂತ್ರಣವಿಲ್ಲ. ಇತ್ತೀಚೆಗೆ ಕಂಡುಬಂದ ಷೇರುಗಳ ಬೆಲೆಯಲ್ಲಿನ ವ್ಯತ್ಯಾಸಕ್ಕೆ ಯಾವುದೇ ನಿರ್ದಿಷ್ಟ ಕಾರಣದ ಬಗ್ಗೆ ಮಾಹಿತಿ ಇಲ್ಲʼʼ ಎಂದು ಅದಾನಿ ಎಂಟರ್‌ಪ್ರೈಸಸ್‌ ಹೇಳಿದೆ.

62 ವರ್ಷದ ಗೌತಮ್ ಅದಾನಿ ಅವರು ತಮ್ಮ 70ನೇ ವಯಸ್ಸಿನಲ್ಲಿ ನಿವೃತ್ತರಾಗಲು ಚಿಂತನೆ ನಡೆಸಿದ್ದಾರೆ ಮತ್ತು 2030ರ ಆರಂಭದಲ್ಲಿ ವ್ಯವಹಾರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಮುಂದಾಗಿದ್ದಾರೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದ ಹಿನ್ನಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ʼʼಅದಾನಿ 70ನೇ ವಯಸ್ಸಿನಲ್ಲಿ ನಿವೃತ್ತರಾಗಲಿದ್ದಾರೆ. ತಮ್ಮ ಪುತ್ರರಾದ 37 ವರ್ಷದ ಕರಣ್‌ ಅದಾನಿ, 26ರ ಹರೆಯದ ಜೀತ್‌ ಅದಾನಿ ಹಾಗೂ ಅವರ ಸೋದರ ಸಂಬಂಧಿಗಳಾದ 45 ವರ್ಷದ ಪ್ರಣವ್‌ ಹಾಗೂ 30 ವರ್ಷದ ಸಾಗರ್‌ ಅವರು ಉತ್ತರಾಧಿಕಾರಿಗಳಾಗಿದ್ದು, ಕುಟುಂಬದ ಟ್ರಸ್ಟ್‌ನಲ್ಲಿ ಇದನ್ನು ಉಲ್ಲೇಖಿಸಲಾಗಿದೆʼʼ ಎಂದು ಬ್ಲೂಮ್‌ಬರ್ಗ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂದರ್ಶನವೊಂದರಲ್ಲಿ ಗೌತಮ್‌ ಅದಾನಿ, “ಅವರೆಲ್ಲರೂ (ಕರಣ್‌ ಅದಾನಿ, ಜೀತ್‌ ಅದಾನಿ, ಪ್ರಣವ್‌ ಹಾಗೂ ಸಾಗರ್‌) ಕಂಪನಿಯ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಅವರು ಕಂಪನಿಯ ಬೆಳವಣಿಗೆಗಾಗಿ ಹಸಿದಿದ್ದಾರೆ ಎನ್ನುವ ವಿಚಾರವೇ ನನಗೆ ಸಂಸತವನ್ನು ತಂದಿದೆ. ಎರಡನೇ ಪೀಳಿಗೆಯಲ್ಲಿ ಇಂತಹ ತುಡಿತ ಕಂಡು ಬರುವುದು ಬಹಳ ಅಪರೂಪ. ಅವರು ಮುಂದೆ ಒಟ್ಟಾಗಿ ಕೆಲಸ ಮಾಡಬೇಕುʼʼ ಎಂದು ಹೇಳಿದ್ದರು.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

ಸದ್ಯ ಅದಾನಿ ಸಮೂಹ 111 ಬಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದ್ದು, ಗೌತಮ್‌ ಅದಾನಿ ವಿಶ್ವದ 11ನೇ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. 109 ಬಿಲಿಯನ್‌ ಡಾಲರ್‌ ಆಸ್ತಿಯೊಂದಿಗೆ ಮುಕೇಶ್‌ ಅಂಬಾನಿ ಈ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.

Exit mobile version