Site icon Vistara News

Gautam Adani | 2050ಕ್ಕೆ ಭಾರತ ಎರಡನೇ ಅತಿ ದೊಡ್ಡ ಆರ್ಥಿಕತೆ: ಗೌತಮ್‌ ಅದಾನಿ

Adani stocks

ಮುಂಬಯಿ: ಭಾರತವು 2050ರ ವೇಳೆಗೆ ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಬಿಲಿಯನೇರ್‌ ಉದ್ಯಮಿ ಗೌತಮ್‌ ಅದಾನಿ (Gautam Adani) ಹೇಳಿದ್ದಾರೆ.

ಭಾರತವು ಮೊದಲ ಟ್ರಿಲಿಯನ್‌ ಡಾಲರ್‌ ಕ್ಲಬ್‌ ಸೇರಿಕೊಳ್ಳಲು 58 ವರ್ಷಗಳನ್ನು ತೆಗೆದುಕೊಂಡಿತು. ಎರಡನೇ ಟ್ರಿಲಿಯನ್‌ಗೆ 12 ವರ್ಷ ತೆಗೆದುಕೊಂಡಿತು. ಮೂರನೇ ಟ್ರಿಲಿಯನ್‌ ಕೇವಲ ಐದು ವರ್ಷಗಳಲ್ಲಿ ಸಾಧ್ಯವಾಯಿತು. ಮುಂದಿನ ಪ್ರತಿ 12-18 ತಿಂಗಳುಗಳಲ್ಲಿ ಟ್ರಿಲಿಯನ್‌ ಡಾಲರ್‌ ಸೇರ್ಪಡೆಯಾಗಲಿದೆ. 2050ರ ವೇಳೆಗೆ 30 ಟ್ರಿಲಿಯನ್‌ ಡಾಲರ್‌ ಎಕಾನಮಿಯಾಗಲಿದೆ. ಷೇರು ಮಾರುಕಟ್ಟೆ 45 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯವನ್ನು ಹೊಂದಲಿದೆ ಎಂದು ಅದಾನಿ ವಿವರಿಸಿದರು.

21ನೇ ವರ್ಲ್ಡ್‌ ಕಾಂಗ್ರೆಸ್‌ ಆಫ್‌ ಅಕೌಂಟೆಂಟ್ಸ್‌ನಲ್ಲಿ ಮಾತನಾಡಿದ ಅವರು, ಪ್ರಬಲ ಬಹುಮತ ಇರುವ ಸರ್ಕಾರ ಇರುವುದರಿಂದ ಹಲವಾರು ರಚನಾತ್ಮಕ ಆಡಳಿತ ಸುಧಾರಣೆಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಆರ್ಥಿಕ ಸೂಪರ್‌ ಪವರ್‌ ಆಗುವತ್ತ ಭಾರತ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಭಾರತವು 2030ಕ್ಕೆ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ. ಮುಂಬರುವ ಮೂರು ದಶಕಗಳಲ್ಲಿ ದೇಶ ಉದ್ಯಮಶೀಲತೆಯಲ್ಲಿ ತ್ವರಿತ ಬೆಳವಣಿಗೆ ದಾಖಲಿಸಲಿದೆ. ಹಲವಾರು ಸ್ಟಾರ್ಟಪ್‌ಗಳು ವೆಂಚರ್‌ ಕ್ಯಾಪಿಟಲ್‌ ಫಂಡಿಂಗ್‌ಗೆ ಉತ್ತೇಜನ ನೀಡಲಿವೆ. ಕೇವಲ ಎಂಟು ವರ್ಷಗಳಲ್ಲಿ ವೆಂಚರ್‌ ಕ್ಯಾಪಿಟಲ್‌ ಫಂಡಿಂಗ್‌ 50 ಶತಕೋಟಿ ಡಾಲರ್‌ಗೆ (4.05 ಲಕ್ಷ ಕೋಟಿ ರೂ.) ಏರಿಕೆಯಾಗಿರುವುದನ್ನು ನಾವು ನೋಡಿದ್ದೇವೆ. ಕಳೆದ ವರ್ಷ ಪ್ರತಿ 9 ದಿನಗಳಿಗೊಮ್ಮೆ ಭಾರತದಲ್ಲಿ ಹೊಸ ಯುನಿಕಾರ್ನ್‌ ಹೊರಹೊಮ್ಮಿದೆ ಎಂದರು.

ಸೌರಶಕ್ತಿ ಮತ್ತು ಗ್ರೀನ್‌ ಪವರ್‌ ಸಂಯೋಜನೆ, ಗ್ರೀನ್‌ ಹೈಡ್ರೋಜನ್‌ ಉತ್ಪಾದನೆ ವೃದ್ಧಿಸಲಿದ್ದು, ಭವಿಷ್ಯವನ್ನು ಉಜ್ವಲಗೊಳಿಸಲಿದೆ. 2050ರ ವೇಳೆಗೆ ಭಾರತ, ಗ್ರೀನ್‌ ಎನರ್ಜಿಯ ನಿವ್ವಳ ರಫ್ತುದಾರ ಎನ್ನಿಸಲಿದೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಪ್ರಜಾಪ್ರಭುತ್ವ ಉಳಿಯದು ಎಂದಿದ್ದರು. ಆದರೆ ಈಗ ಪ್ರಜಾಪ್ರಭುತ್ವ ಉಳಿದಿರುವುದು ಮಾತ್ರವಲ್ಲದೆ, ಸರ್ಕಾರಗಳಿಂದ ಸರ್ಕಾರಕ್ಕೆ ಅಧಿಕಾರ ಶಾಂತಿಯುತವಾಗಿ ವರ್ಗಾವಣೆಯಾಗುತ್ತದೆ. ಎರಡು ದಶಕಗಳ ಬಳಿಕ ತನ್ನದೇ ಸ್ವಂತ ಬಲದ, ಬಹುಮತ ಇರುವ ಸರ್ಕಾರ ಆಡಳಿತಾರೂಢವಾಗಿದೆ. ಇದರಿಂದಾಗಿ ರಚನಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸಲು ಸಾಧ್ಯವಾಗಿದೆ ಎಂದು ಗೌತಮ್‌ ಅದಾನಿ ವಿವರಿಸಿದ್ದಾರೆ.

Exit mobile version