Site icon Vistara News

GDP: 2021-22ರ ಅಂಕಿ ಅಂಶ ಇಂದು ಪ್ರಕಟ, ಜನವರಿ-ಮಾರ್ಚ್‌ ಜಿಡಿಪಿ 5.4%ರಿಂದ 3.5%ಕ್ಕೆ ಇಳಿಕೆ ನಿರೀಕ್ಷೆ

gdp

ನವದೆಹಲಿ: ಕೇಂದ್ರ ಸರಕಾರ 2021-22ರ ಸಾಲಿನ ಜಿಡಿಪಿ ಅಂಕಿ ಅಂಶಗಳನ್ನು ಮಂಗಳವಾರ ಬಿಡುಗಡೆಗೊಳಿಸಲಿದೆ. ಜತೆಗೆ 2022ರ ಜನವರಿ-ಮಾರ್ಚ್‌ ಅವಧಿಯ ವಿವರವೂ ಗೊತ್ತಾಗಲಿದೆ.

ಗಗನಕ್ಕೇರಿರುವ ಹಣದುಬ್ಬರ, ರಷ್ಯಾ-ಉಕ್ರೇನ್‌ ಸಂಘರ್ಷದಿಂದ ಉಂಟಾಗಿರುವ ಸಮಸ್ಯೆಗಳು, ಕಚ್ಚಾ ತೈಲ ದರ ಸ್ಫೋಟ, ಖಾದ್ಯ ತೈಲ ದರ ಜಿಗಿತ ಇತ್ಯಾದಿ ಸವಾಲುಗಳು ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಭಾರತದ ಮುಂದಿದೆ.

ಅಂಕಿ ಅಂಶಗಳ ಸಚಿವಾಲಯ ಜಿಡಿಪಿ ವಿವರಗಳನ್ನು ಬಿಡುಗಡೆಗೊಳಿಸಲಿದೆ. ಅದರ ಪ್ರಕಾರ 2021-22ರಲ್ಲಿ ಶೇ.8.9ರ ಜಿಡಿಪಿ ಬೆಳವಣಿಗೆ ಅಂದಾಜಿಸಲಾಗಿದೆ. ಆರ್‌ಬಿಐ 2021-22ರ ಸಾಲಿನಲ್ಲಿ ಶೇ.9.5ರ ಪ್ರಗತಿಯನ್ನು ಅಂದಾಜಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ ಶೇ.9 ಮತ್ತು ಫಿಚ್‌ ರೇಟಿಂಗ್ಸ್‌ ಶೇ.8.5, ಎಸ್‌ಬಿಐ ಎಕೊರಾಪ್‌ ವರದಿ ಶೇ.8.2 ಬೆಳವಣಿಗೆಯನ್ನು ಅಂದಾಜಿಸಿವೆ.

ಹಣದುಬ್ಬರ ನಿಯಂತ್ರಣ ಹಾಗೂ ಬಳಕೆದಾರರಿಗೆ ರಿಲೀಫ್‌ ನೀಡಲು ಕೇಂದ್ರ ಸರಕಾರ ಇತ್ತೀಚೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಅನುಕ್ರಮವಾಗಿ ಲೀಟರ್‌ಗೆ 8 ರೂ. ಮತ್ತು 6 ರೂ. ಕಡಿತಗೊಳಿಸಿತ್ತು. ಈ ಹಿಂದೆ ಕಳೆದ ವರ್ಷ ನವೆಂಬರ್‌ನಲ್ಲಿ ಕಡಿತಗೊಳಿಸಿತ್ತು.

ಹಣದುಬ್ಬರ, ಕಚ್ಚಾ ತೈಲ ದರ ಜಿಗಿತ ಸವಾಲು

ಕೋವಿಡ್‌ ಬಿಕ್ಕಟ್ಟಿನ ಬಳಿಕ ರಷ್ಯಾ-ಉಕ್ರೇನ್‌ ಸಂಘರ್ಷ ಜಾಗತಿಕ ಆರ್ಥಿಕತೆಗೆ ಮತ್ತೊಂದು ಹೊಡೆತವಾಗಿ ಪರಿಣಮಿಸಿದೆ. ಹಣದುಬ್ಬರ ಆರ್‌ ಬಿಐನ ಸುರಕ್ಷತಾ ಮಟ್ಟವನ್ನು ಮೀರಿ ಶೇ. 7.5% ದಾಟಿದೆ. ಬ್ರೆಂಟ್‌ ಕಚ್ಚಾ ತೈಲ ದರ ಬ್ಯಾರೆಲ್‌ಗೆ 120 ಡಾಲರ್‌ ಗೆ ಜಿಗಿದಿದೆ. ಹೀಗಿದ್ದರೂ, ಹಣದುಬ್ಬರ ತಗ್ಗಿಸಲು ಸರಕಾರದ ಸಂಘಟಿತ ಯತ್ನಗಳು ಮತ್ತು ಕೃಷಿ ಉತ್ಪಾದನೆಯ ಉತ್ತಮ ಮುನ್ನೋಟವಿದ್ದು, ಈ ವರ್ಷ ಆರ್‌ ಬಿಐ ಮೇಲಿನ ಒತ್ತಡ ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಆರ್‌ ಬಿಐ ಅಧಿಕಾರಿ ರಾಮ ಸುಬ್ರಮಣ್ಯಂ ತಿಳಿಸಿದ್ದಾರೆ.

ಮುಂಗಾರು ರಿಲೀಫ್‌ ಸಾಧ್ಯತೆ

ಈ ವರ್ಷ ವಾಡಿಕೆಗಿಂತ ಸ್ವಲ್ಪ ಮೊದಲೇ ಮುಂಗಾರು ಆಗಮನವಾಗಿದೆ. ಆದ್ದರಿಂದ ಅಕ್ಕಿ, ಇತರ ತೈಲ ಧಾನ್ಯಗಳ ಉತ್ಪಾದನೆ ಚುರುಕಾಗುವ ನಿರೀಕ್ಷೆ ಇದೆ. ಆರ್ಥಿಕ ಬೆಳವಣಿಗೆಯಲ್ಲಿ ಉತ್ತಮ ಮುಂಗಾರು ನಿರ್ಣಾಯಕವಾಗುತ್ತದೆ. ಗೋಧಿಯ ಉತ್ಪಾದನೆಗೂ ಸಹಕಾರಿಯಾಗುವ ಸಾಧ್ಯತೆ ಇದೆ.

ರಫ್ತು ಹೆಚ್ಚಳ

ಈ ವರ್ಷ ದೇಶದ ರಫ್ತು ಗಣನೀಯ ವೃದ್ಧಿಸಿರುವುದು ಆಶಾದಾಯಕ. ಏಪ್ರಿಲ್‌ನಲ್ಲಿ ರಫ್ತು ಶೇ. 31 ವೃದ್ಧಿಸಿದೆ. 40 ಶತಕೋಟಿ ಡಾಲರ್‌ಗೆ (ಅಂದಾಜು 3 ಲಕ್ಷ ಕೋಟಿ ರೂ.) ತಲುಪಿದೆ.

Exit mobile version