ಬರ್ಲಿನ್: ಯುರೋಪಿನ ಅತಿ ದೊಡ್ಡ ಆರ್ಥಿಕತೆಯಾಗಿರುವ ಜರ್ಮನಿಯಲ್ಲಿ ಆರ್ಥಿಕ ಹಿಂಜರಿತದ ಕಾರ್ಮೋಡ (Recession) ಆವರಿಸಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ಜರ್ಮನಿಗೆ ಇಂಧನ ವೆಚ್ಚ ದುಬಾರಿಯಾಗಿದೆ. ಇದು ಹಣದುಬ್ಬರವನ್ನೂ ಹೆಚ್ಚಿಸಿದ್ದು, ಜರ್ಮನಿ ಆರ್ಥಿಕ ಹಿಂಜರಿತದ ಭೀತಿಯನ್ನು ಎದುರಿಸುತ್ತಿದೆ. ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಬೆಂಬಲಿಸಿದ್ದ ಜರ್ಮನಿ ಈಗ ಅಪಾಯವನ್ನು ತಾನಾಗಿಯೇ ಆಹ್ವಾನಿಸಿಕೊಂಡಿದೆ.
ಜರ್ಮನಿಯ ಪ್ರಮುಖ ಸೂಚ್ಯಂಕ ಐಎಫ್‌ಒ ಸರ್ವೇ ಆಫ್ ಬಿಸಿನೆಸ್ ಕಾನ್ಫಿಡೆನ್ಸ್ ಸತತ ನಾಲ್ಕನೇ ತಿಂಗಳಿಗೆ ಅಧಿಕ ಹಣದುಬ್ಬರ ಸಾಧ್ಯತೆಯನ್ನು ಬಿಂಬಿಸಿದೆ. ನೈಸರ್ಗಿಕ ಅನಿಲದ ದರ ಜಿಗಿತದಿಂದ ಬಳಕೆದಾರರ ವಿಶ್ವಾಸ ನಷ್ಟವಾಗಿದೆ. ಉದ್ದಿಮೆಗೂ ಇದರಿಂದ ಸಮಸ್ಯೆಯಾಗಿದೆ. ಖರ್ಚು ವೆಚ್ಚದಲ್ಲಿ ಹೆಚ್ಚಳವಾಗಿದೆ.
ಮ್ಯೂನಿಕ್ ಮೂಲದ ಐಎಫ್‌ಒ ಸೂಚ್ಯಂಕ ಸೆಪ್ಟೆಂಬರ್‌ನಲ್ಲಿ 84.3 ಇಳಿಕೆಯಾಗಿದ್ದು, ಆಗಸ್ಟ್‌ನಲ್ಲಿ 88.5ರಷ್ಟಿತ್ತು. ಈ ಇಳಿಕೆ ದಶಕದ ಹಿಂದೆ ಸಂಭವಿಸಿದ ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ಅತ್ಯಂತ ಕನಿಷ್ಠ ಮಟ್ಟವಾಗಿದೆ.
ಇಂಧನ ಮತ್ತು ಸರಕುಗಳ ದರ ಜಿಗಿತದಿಂದ ಉದ್ದಿಮೆಗಳಿಗೆ ಲಾಭಾಂಶದಲ್ಲಿ ಇಳಿಕೆ ಉಂಟಾಗಿದೆ ಎಂದು ಯೂರೊ ವಲಯದ ಆರ್ಥಿಕ ತಜ್ಞ ಕಾರ್‌ಸ್ಟೆನ್ ಬ್ರೆಜ್‌ಸ್ಕಿ ತಿಳಿಸಿದ್ದಾರೆ. ಉತ್ಪಾದನಾ ವೆಚ್ಚದಲ್ಲಿ ಉಂಟಾಗಿರುವ ಹೊರೆಯನ್ನು ಕಂಪನಿಗಳು ಹೆಚ್ಚು ಕಾಲ ಭರಿಸಿಕೊಳ್ಳಲು ಕಷ್ಟ ಸಾಧ್ಯ. ಗ್ರಾಹಕರಿಗೆ ವರ್ಗಾಯಿಸುವುದು ಖಚಿತವಾದ್ದರಿಂದ ಬೆಲೆ ಏರಿಕೆ ಕಟ್ಟಿಟ್ಟ ಬುತ್ತಿಯಾಗಿದೆ. ಇದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ. ಚಳಿಗಾಲದಲ್ಲಿ ಯುರೋಪಿನಲ್ಲಿ ಇಂಧನಕ್ಕೆ ಬೇಡಿಕೆ ಹೆಚ್ಚುತ್ತದೆ. ಇದಕ್ಕೆ ತಕ್ಕಂತೆ ಪೂರೈಕೆ ಆಗದಿದ್ದರೆ ದರ ಏರಿಕೆಯ ಹೊರೆ ಕಾಡಲಿದೆ. ರಷ್ಯಾ ತೈಲ ವಿರುದ್ಧ ಐರೋಪ್ಯ ಒಕ್ಕೂಟದ ನಿರ್ಬಂಧ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಪ್ರತಿಕೂಲ ಪರಿಣಾಮ ಬೀರುವ ಅಪಾಯ ಉಂಟಾಗಿದೆ.
ಬ್ರಿಟನ್‌ನಲ್ಲೂ ಪೌಂಡ್ ದಾಖಲೆಯ ಕುಸಿತ: ಬ್ರಿಟನ್‌ನಲ್ಲಿ ಡಾಲರ್ ಎದುರು ಅಲ್ಲಿನ ಕರೆನ್ಸಿ ಪೌಂಡ್ ದಾಖಲೆಯ ಕುಸಿತಕ್ಕೀಡಾಗಿದ್ದು, ಆರ್ಥಿಕ ಹಿಂಜರಿತದ ಭೀತಿ ಉಂಟಾಗಿದೆ. ಬ್ರಿಟನ್‌ನಲ್ಲೂ ಗ್ರಾಹಕ ವಿಶ್ವಾಸ ಸೂಚ್ಯಂಕ ತೀವ್ರ ಕುಸಿತಕ್ಕೀಡಾಗಿದೆ. ಆಹಾರ ವಸ್ತು, ಇಂಧನ ದರ ಹೆಚ್ಚಳಕ್ಕೆ ಜನ ತತ್ತರಿಸಿದ್ದಾರೆ. ಚಳಿಗಾಲದಲ್ಲಿ ಬ್ರಿಟನ್‌ನಲ್ಲಿ ಇಂಧನ ದರ ಮತ್ತು ಹಣದುಬ್ಬರ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ. ಹಣದುಬ್ಬರಕ್ಕೆ ತಕ್ಕಂತೆ ಆದಾಯ ಹೆಚ್ಚಳವಾಗದಿರುವುದರಿಂದ ಅನೇಕ ಮಂದಿ ಉತ್ತಮ ಗುಣಮಟ್ಟದ ಜನಜೀವನ ಹೊಂದಲು ಸಾಧ್ಯವಾಗುತ್ತಿಲ್ಲ ಎಂದು ಜೋಸೆಫ್ ರೌನ್‌ಟ್ರೀ ಫೌಂಡೇಷನ್ ವರದಿ ತಿಳಿಸಿದೆ.