Site icon Vistara News

Global Business Forum: 2032ರ ವೇಳೆಗೆ ಕರ್ನಾಟಕದಲ್ಲಿ 1 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆ: ಎಂ.ಬಿ. ಪಾಟೀಲ್‌ ವಿಶ್ವಾಸ

Global Business Forum State to become 1 trillion dollar economy by 2032 says MB Patil

ಬೆಂಗಳೂರು: ರಾಜ್ಯವನ್ನು 2032ರ ವೇಳೆಗೆ 1 ಟ್ರಿಲಿಯನ್ ಡಾಲರ್ (Trillion dollar) ಗಾತ್ರದ ಆರ್ಥಿಕತೆಯನ್ನು ಬೆಳೆಸುವ ಹೆಗ್ಗುರಿಯನ್ನು ಸರ್ಕಾರ ಇಟ್ಟುಕೊಂಡಿದ್ದು, ಇದಕ್ಕಾಗಿ ಉದ್ಯಮ ವಲಯದಲ್ಲಿ (Industry Sector) ಅಸಾಂಪ್ರದಾಯಿಕ ಕ್ಷೇತ್ರಗಳತ್ತ ಗಮನಹರಿಸಲಾಗುತ್ತಿದೆ. ಇದರಿಂದ ಹೂಡಿಕೆಯ ಅಗಾಧ ಹರಿವಿನ ಜತೆಗೆ ಉದ್ಯೋಗಾವಕಾಶ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ಹೇಳಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಗ್ಲೋಬಲ್ ಬಿಝಿನೆಸ್ ಫೋರಂನ (Global Business Forum – ಜಿಬಿಎಫ್) 54ನೇ ಜಾಗತಿಕ ವ್ಯಾಪಾರ ಸಮಾವೇಶದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಎರಡನೇ ಬಾರಿಗೆ ಹಾಗೂ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಸಮಾವೇಶದಲ್ಲಿ 30ಕ್ಕೂ ಹೆಚ್ಚಿನ ದೇಶಗಳ ಉನ್ನತ ಮಟ್ಟದ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರ್ಸ್ ಅಸೋಸಿಯೇಶನ್ ಮತ್ತು ಬೆಂಗಳೂರಿನ ಡಬ್ಲ್ಯುಟಿಸಿ ಸಂಯುಕ್ತವಾಗಿ ಏರ್ಪಡಿಸಿರುವ ಈ ಸಮಾವೇಶಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.

ರಾಜ್ಯದ ಆರ್ಥಿಕ ಬೆಳವಣಿಗೆಯ ದರವು ಸದ್ಯಕ್ಕೆ ಶೇ.18ರಷ್ಟಿದ್ದು, ಜಿಡಿಪಿಯಲ್ಲಿ ಕರ್ನಾಟಕವು ಇಡೀ ದೇಶದಲ್ಲಿ ಮೂರನೆಯ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೆ, ಇಲ್ಲಿನ ತಲಾವಾರು ಆದಾಯವು ಕಳೆದ 5 ವರ್ಷಗಳಲ್ಲಿ ಶೇ. 62ರಷ್ಟು ಹೆಚ್ಚಳ ಕಂಡಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದರು.

ಸರ್ಕಾರಿ ಮತ್ತು ಖಾಸಗಿ ವಲಯದ ಉತ್ಪಾದಕರಿಗೆ ಸರ್ಕಾರದ ವತಿಯಿಂದ ಭೂಮಿ ಮತ್ತು ಇನ್ನಿತರ ಮೂಲಸೌಲಭ್ಯಗಳನ್ನು ಸುಗಮವಾಗಿ ಒದಗಿಸಲಾಗುವುದು. ಬೆಂಗಳೂರನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಕೈಗಾರಿಕಾ ಕ್ರಾಂತಿ 4.0‌ ಅನ್ನು ನನಸುಗೊಳಿಸಲು ಸಾವಿರಾರು ಎಕರೆ ಪ್ರದೇಶಗಳಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ಸರ್ಕಾರವು ಅಭಿವೃದ್ಧಿಪಡಿಸುತ್ತಿದೆ. ಉದ್ಯಮಿಗಳು ಪ್ಲಗ್ ಅಂಡ್ ಪ್ಲೇ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡು, ಉದ್ಯಮಗಳನ್ನು ಬೆಳೆಸಬೇಕೆನ್ನುವುದು ಇದರ ಹಿಂದಿರುವ ಗುರಿಯಾಗಿದೆ. ಈ ಎಲ್ಲ ಜಾಗಗಳಿಗೆ ಬಂದರು, ರೈಲು ಮತ್ತು ವೈಮಾನಿಕ ಸಂಪರ್ಕಗಳನ್ನು ಒದಗಿಸಿ ಪೂರೈಕೆ ಸರಪಳಿಯನ್ನು ಆಧುನೀಕರಣಗೊಳಿಸಲಾಗುವುದು ಎಂದು ಎಂ.ಬಿ. ಪಾಟೀಲ್‌ ಹೇಳಿದರು.

ಹಲವು ಕ್ಷೇತ್ರದಲ್ಲಿ ಕರ್ನಾಟಕ ನಂ. 1

ಉತ್ಕೃಷ್ಟ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಬೆಂಗಳೂರು ನಗರವು, ಇಡೀ ಜಾಗತಿಕ ಸಮುದಾಯಕ್ಕೆ ಪ್ರತಿಭಾಪೂರ್ಣ ಮಾನವ ಸಂಪನ್ಮೂಲವನ್ನು ಒದಗಿಸುವ ತೊಟ್ಟಿಲಾಗಿದೆ. ವಿಶೇಷವಾಗಿ ಆಟೋಮೇಶನ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಿಗೆ ಸರ್ಕಾರವು ಒತ್ತು ಕೊಡುತ್ತಿದೆ. ಇದಲ್ಲದೆ ಶುದ್ಧ ಇಂಧನ ನೀತಿ, ಮರುಬಳಕೆ ಇಂಧನಗಳ ಕ್ಷೇತ್ರ, ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಜೈವಿಕ ತಂತ್ರಜ್ಞಾನ ಮತ್ತು ಅದರ ರಫ್ತು, ಎಲೆಕ್ಟ್ರಾನಿಕ್ ವಿನ್ಯಾಸ ಮತ್ತು ಸಂಶೋಧನೆ, ನಾವೀನ್ಯತೆ ಇವುಗಳಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ಬೆಂಗಳೂರು ನಗರವು ಜಗತ್ತಿನಲ್ಲಿ 4ನೇ ಅತಿದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ತಾಣವಾಗಿದೆ ಎಂದು ಎಂ.ಬಿ. ಪಾಟೀಲ್‌‌ ವಿವರಿಸಿದರು.

ಇದನ್ನೂ ಓದಿ: Kyasanur Forest Disease: ಕರ್ನಾಟಕದಲ್ಲಿ ಕೆಎಫ್‌ಡಿಗೆ 6 ಬಲಿ! ಕಾಯಿಲೆ ಲಕ್ಷಣಗಳೇನು? ಪಾರಾಗುವುದು ಹೇಗೆ?

ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ಡಬ್ಲ್ಯುಟಿಸಿ ಅಧ್ಯಕ್ಷ ಜಾನ್ ಡ್ರೀವ್, ಡಿಲೈಟ್ ಸಿಇಒ ರೋಮಲ್ ಶೆಟ್ಟಿ, ಬ್ರಿಗೇಡ್ ಗ್ರೂಪ್ ಕಾರ್ಯ ನಿರ್ವಾಹಕ ಅಧ್ಯಕ್ಷ ಎಂ ಆರ್ ಜಯಶಂಕರ್, ಜಂಟಿ ವ್ಯವಸ್ಥಾಪಕ ನಿರ್ದೇಶಕ ನಿರೂಪ್ ಶಂಕರ್, ಬೆಂಗಳೂರು ಡಬ್ಲ್ಯುಟಿಸಿ ವ್ಯವಸ್ಥಾಪಕ ನಿರ್ದೇಶಕ ವಿನೀತ್ ವರ್ಮಾ ಉಪಸ್ಥಿತರಿದ್ದರು.

Exit mobile version