Site icon Vistara News

Gold import : ಚಿನ್ನದ ದರ ಇಳಿಯಲಿದೆಯೇ? ರಿಯಾಯಿತಿ ಸುಂಕದಲ್ಲಿ 140 ಟನ್‌ ಬಂಗಾರ ಆಮದಿಗೆ ಚಿಂತನೆ

gold bars

ನವ ದೆಹಲಿ: ಭಾರತವು ಶೀಘ್ರದಲ್ಲಿಯೇ ಯುಎಇಯಿಂದ (Gold import) ರಿಯಾಯಿತಿ ಸುಂಕದಲ್ಲಿ 140 ಟನ್‌ ಬಂಗಾರವನ್ನು ಖರೀದಿಸಲು ಚಿಂತನೆ ನಡೆಸಿದೆ. ಆಮದು ಕೋಟಾ ವ್ಯವಸ್ಥೆಯ ಅಡಿಯಲ್ಲಿ (Tariff rate quota) ರಿಯಾಯಿತಿ ಸುಂಕದಲ್ಲಿ ಚಿನ್ನ ಆಮದಿಗೆ ಪ್ರಸ್ತಾಪಿಸಲಾಗಿದೆ. ಉಭಯ ದೇಶಗಳ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಇದು ನಡೆಯುವ ನಿರೀಕ್ಷೆ ಇದೆ.

ಇದರಿಂದ ಸರ್ಕಾರಕ್ಕೆ ಕಂದಾಯ ನಷ್ಟವಾಗದಂತೆ ನೋಡಿಕೊಳ್ಳಲಾಗುವುದು. ಉತ್ಪಾದಕರು ಮತ್ತು ಜ್ಯುವೆಲರ್ಸ್‌ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಮದು ಕೋಟಾ ವ್ಯವಸ್ಥೆಯಲ್ಲಿ ಆಮದುದಾರರಿಗೆ ಅರ್ಹತೆಯ ನಿಯಮಗಳು ಸಡಿಲವಾಗಿರುತ್ತವೆ. ಭಾರತ ಮತ್ತು ಯುಎಇ ನಡುವಣ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ ಇದು ಸಾಧ್ಯವಾಗಲಿದೆ (India-UAE Comprehensive Economic Partnership Agreement) 2023-24ರ ಆರ್ಥಿಕ ಸಾಲಿಗೆ ಇದು ಅನ್ವಯವಾಗಲಿದೆ.

ರಿಯಾಯಿತಿ ಸುಂಕ ಎಷ್ಟು?

ಒಪ್ಪಂದದ ಪ್ರಕಾರ 2023-24ರಲ್ಲಿ ಪರಮಾಪ್ತ ರಾಷ್ಟ್ರ (Most favoured nation) ಸ್ಥಾನಮಾನದ ಅಡಿಯಲ್ಲಿ 15% ಸುಂಕ ಇದ್ದು, ಅದರಲ್ಲಿ 1% ರಿಯಾಯಿತಿ ಸಿಗಲಿದೆ. (14%) 2022-23ರ ಮೇ-ಮಾರ್ಚ್‌ ಅವಧಿಯಲ್ಲಿ ಈ ಒಪ್ಪಂದದ (Gold tariff rate quota) ಅಡಿಯಲ್ಲಿ 110 ಟನ್‌ ಆಮದು ಮಾಡಲು ಅವಕಾಶ ಇತ್ತು. ಆದರೆ ಕೇವಲ 8.1 ಟನ್‌ ಮಾತ್ರ ಆಮದು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಮದು ಕುರಿತ ಕೆಲ ನಿರ್ಬಂಧಗಳನ್ನು ರದ್ದುಪಡಿಸುವಂತೆ ಯುಎಇ, ಭಾರತಕ್ಕೆ ಮನವಿ ಮಾಡಿತ್ತು. ಉದಾಹರಣೆಗೆ ಜ್ಯುವೆಲ್ಲರಿ ಉತ್ಪಾದಕರಿಗೆ ಮಾತ್ರ ಆಮದಿಗೆ ಅವಕಾಶದಂಥ ನಿರ್ಬಂಧ ತೆರವುಗೊಳಿಸಲು ಯುಎಇ ಮನವಿ ಮಾಡಿತ್ತು.

ಬಂಗಾರದ ದರ 2023ರಲ್ಲಿ ನಾಗಾಲೋಟದಲ್ಲಿದ್ದು, 2023-24ರಲ್ಲಿ ದರ 68,000 ರೂ.ಗೆ ಜಿಗಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಪರಿಣಾಮ ಬಂಗಾರದ ಮೇಲಿನ ಹೂಡಿಕೆಗೆ 10-15% ಆದಾಯ ಸಿಗುವ ಸಾಧ್ಯತೆ ಇದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಜತೀನ್‌ ತ್ರಿವೇದಿ (Gold Price Outlook) ತಿಳಿಸಿದ್ದಾರೆ.

ಒಂದು ವೇಳೆ ಬಂಗಾರದ ದರ 15-20% ಪ್ರಮಾಣದಲ್ಲಿ ಏರಿಕೆಯಾದರೆ 64,500 ರೂ. ಮತ್ತು 66,800 ರೂ. ಶ್ರೇಣಿಯಲ್ಲಿ ಏರಿಕೆಯಾಗಲಿದೆ. 2024ರಲ್ಲಿ 68,000 ರೂ. ತನಕ ಹಚ್ಚಳವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್‌ (28 ಗ್ರಾಮ್)‌ ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1869 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 68,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Exit mobile version