Site icon Vistara News

Gold limits: ನಾವು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಮೀರಿದರೆ ಏನಾಗುತ್ತದೆ?

Gold limits

ಹೆಚ್ಚಿನ ಭಾರತೀಯರು (indians) ಚಿನ್ನದ (Gold limits) ಮೇಲೆ ಪ್ರೀತಿಯನ್ನು ಹೊಂದಿದ್ದಾರೆ. ಹೀಗಾಗಿ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಸಾಧ್ಯವಿಲ್ಲದೇ ಇದ್ದರೂ ಎಷ್ಟು ಸಾಧ್ಯವೋ ಅಷ್ಟು ಚಿನ್ನವನ್ನು ಖರೀದಿ (Gold Purchase) ಮಾಡುತ್ತಾರೆ. ಚಿನ್ನ ಕಷ್ಟ ಕಾಲದಲ್ಲಿ ಸಹಾಯಕ್ಕೆ ಆಗುತ್ತೆ ಎನ್ನುವ ವರ್ಗ ಒಂದೆಡೆಯಾದರೆ ಅದುವೇ ತಮ್ಮ ಅಸ್ತಿ ಎಂದು ತೋರ್ಪಡಿಸಲು ಖರೀದಿ ಮಾಡುವ ವರ್ಗ ಇನ್ನೊಂದೆಡೆ.

ಚಿನ್ನ ಎಲ್ಲರೂ ಸಂಗ್ರಹಿಸಲು ಬಯಸುವ ಅತ್ಯಂತ ಜನಪ್ರಿಯ ಸ್ವತ್ತುಗಳಲ್ಲಿ ಒಂದಾಗಿದೆ. ಪ್ರತಿಯೊಂದು ಕುಟುಂಬವು ಆಭರಣ, ನಾಣ್ಯ ಅಥವಾ ಆಧುನಿಕ ಹೂಡಿಕೆ ಯೋಜನೆಗಳ ರೂಪದಲ್ಲಿ ಸ್ವಲ್ಪ ಪ್ರಮಾಣದ ಚಿನ್ನವನ್ನು ಹೊಂದಿರುತ್ತದೆ. ಚಿನ್ನದ ಮೇಲಿನ ಈ ಗೀಳು ದೇಶದಲ್ಲಿ ಅದೃಷ್ಟ ಮತ್ತು ಸಂಪತ್ತಿನ ಸಂಕೇತವಾಗಿ ಅದರ ಸ್ಥಾನಮಾನವನ್ನು ಹೆಚ್ಚಿಸಿದೆ.
ಚಿನ್ನವನ್ನು ಖರೀದಿ ಮಾಡಲು, ಸಂಗ್ರಹಿಸಿಟ್ಟುಕೊಳ್ಳಲು ಇತಿ ಮಿತಿಗಳಿವೆ. ಮನೆಯಲ್ಲಿ ಎಷ್ಟು ಚಿನ್ನವನ್ನು ಇಡಬಹುದು ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಕೆಲವೊಂದು ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು.

ಭಾರತದಲ್ಲಿ ಚಿನ್ನದ ಖರೀದಿ ಮತ್ತು ಸಂಗ್ರಹಣೆಗೆ ಸಂಬಂಧಿಸಿದಂತೆ ಸರ್ಕಾರವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳ ಪ್ರಕಾರ ವಿವಾಹಿತ ಮಹಿಳೆ 500 ಗ್ರಾಂ ಚಿನ್ನವನ್ನು ಮನೆಯಲ್ಲಿ ಇರಿಸಿಕೊಳ್ಳಲು ಅವಕಾಶವಿದೆ. ನಿಗದಿತ ಮಿತಿಗಿಂತ ಹೆಚ್ಚು ಚಿನ್ನ ಮನೆಯಲ್ಲಿ ಇರಿಸಿಕೊಂಡರೆ ತೆರಿಗೆ ಕಟ್ಟಬೇಕಾಗುತ್ತದೆ ಮತ್ತು ಆ ಚಿನ್ನದ ಮೂಲ ಏನು ಎಂಬ ಬಗ್ಗೆ ಅಧಿಕೃತ ದಾಖಲೆ ತೋರಿಸಬೇಕಾಗುತ್ತದೆ.

ಮನೆಯಲ್ಲಿ ಎಷ್ಟು ಚಿನ್ನವನ್ನು ಇಡಬಹುದು?

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ರಕಾರ ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ಮನೆಯಲ್ಲಿ ಇರಿಸಬಹುದು. ಹಾಗಾಗಿ ನಿಮ್ಮ ಬಳಿ ಎಷ್ಟು ಚಿನ್ನವಿದ್ದರೂ ಅದು ಹೇಗೆ ಸಿಕ್ಕಿತು ಎಂಬುದಕ್ಕೆ ನಿಮ್ಮ ಬಳಿ ಪುರಾವೆ ಇರಬೇಕು.


ಮಹಿಳೆಯರು ತಮ್ಮ ಬಳಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು?

ವಿವಾಹಿತ ಮಹಿಳೆ ತನ್ನ ಬಳಿ 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು ಎಂದು ಆದಾಯ ತೆರಿಗೆ ಕಾನೂನು ಹೇಳುತ್ತದೆ. ಅವಿವಾಹಿತ ಮಹಿಳೆಯ ಚಿನ್ನದ ಮಿತಿಯನ್ನು 250 ಗ್ರಾಂನಲ್ಲಿ ಇರಿಸಲಾಗಿದೆ. ಕುಟುಂಬದ ಪುರುಷರು 100 ಗ್ರಾಂ ಚಿನ್ನವನ್ನು ಮಾತ್ರ ಇಡಲು ಅವಕಾಶವಿದೆ. ಇಷ್ಟು ಪ್ರಮಾಣದ ಚಿನ್ನಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

ಪಿತ್ರಾರ್ಜಿತ ಚಿನ್ನದ ಮೇಲೆ ತೆರಿಗೆ ಇದೆಯೇ?

ಘೋಷಿತ ಆದಾಯ ಅಥವಾ ತೆರಿಗೆ ವಿನಾಯಿತಿ ಆದಾಯದಿಂದ ಚಿನ್ನವನ್ನು ಖರೀದಿಸಿದ್ದರೆ ಅಥವಾ ಅದನ್ನು ಕಾನೂನುಬದ್ಧವಾಗಿ ಪಡೆದಿದ್ದರೆ ಅದರ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ದಾಳಿ ವೇಳೆ ಅಧಿಕಾರಿಗಳು ನಿಗದಿತ ಮಿತಿಯಲ್ಲಿ ಪತ್ತೆಯಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಂತಿಲ್ಲ.

ಚಿನ್ನವನ್ನು ಇಟ್ಟುಕೊಳ್ಳುವುದಕ್ಕೂ ತೆರಿಗೆ ಇದೆಯೇ?

ಮನೆಯಲ್ಲಿ ಚಿನ್ನವನ್ನು ಇಟ್ಟುಕೊಳ್ಳಲು ಯಾವುದೇ ತೆರಿಗೆ ಇಲ್ಲ. ಚಿನ್ನವನ್ನು ಮಾರಾಟ ಮಾಡಿದರೆ ಅದರ ಮೇಲೆ ತೆರಿಗೆ ಪಾವತಿಸಬೇಕು. ಚಿನ್ನವನ್ನು 3 ವರ್ಷಗಳ ಕಾಲ ಇಟ್ಟುಕೊಂಡ ಅನಂತರ ಮಾರಾಟ ಮಾಡಿದರೆ ಗಳಿಸಿದ ಲಾಭವು ದೀರ್ಘಾವಧಿಯ ಬಂಡವಾಳ ಲಾಭದ (LTCG) ತೆರಿಗೆಗೆ ಒಳಪಟ್ಟಿರುತ್ತದೆ. ಇದರ ದರ ಶೇ. 20ರಷ್ಟು ಆಗಿರುತ್ತದೆ.

ಇದನ್ನೂ ಓದಿ: Money Guide: ಸಾಲಕ್ಕೆ ಅಪ್ಲೈ ಮಾಡುವ ಮುನ್ನ ಈ ಅಂಶ ನಿಮಗೆ ತಿಳಿದಿರಲೇ ಬೇಕು

ಚಿನ್ನದ ಬಾಂಡ್‌ಗಳ ಮಾರಾಟಕ್ಕೆ ಎಷ್ಟು ತೆರಿಗೆ?

ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು (SGB) ಮೂರು ವರ್ಷಗಳೊಳಗೆ ಮಾರಾಟ ಮಾಡಿದರೆ ಅನಂತರ ಲಾಭವನ್ನು ಮಾರಾಟಗಾರರ ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ತೆರಿಗೆ ಸ್ಲ್ಯಾಬ್‌ನ ಪ್ರಕಾರ ಆದಾಯ ತೆರಿಗೆಯನ್ನು ವಿಧಿಸಲಾಗುತ್ತದೆ. ಮೂರು ವರ್ಷಗಳ ಅನಂತರ ಮಾರಾಟ ಮಾಡಿದರೆ ಲಾಭವನ್ನು ಶೇ. 20 ಸೂಚ್ಯಂಕ ದರದಲ್ಲಿ ಮತ್ತು ಶೇ. 10 ಸೂಚ್ಯಂಕ ಇಲ್ಲದೆ ತೆರಿಗೆ ವಿಧಿಸಲಾಗುತ್ತದೆ. ಬಾಂಡ್ ಮುಕ್ತಾಯವಾಗುವವರೆಗೆ ಇದ್ದರೆ ಲಾಭದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.

ಸಾಮಾನ್ಯವಾಗಿ ಒಂದು ಕುಟುಂಬದ ಸದಸ್ಯರು ಸಹಜವಾಗಿ ಹೊಂದಿರುವ ಚಿನ್ನಾಭರಣಗಳ ಮೇಲೆ ಯಾವುದೇ ತೆರಿಗೆ ಕಟ್ಟುವ ಪ್ರಮೇಯ ಬರುವುದಿಲ್ಲ. ಆದರೆ, ಅಕ್ರಮ ಮಾರ್ಗದಿಂದ, ಭ್ರಷ್ಟಾಚಾರದಿಂದ ಕೆಜಿಗಟ್ಟಲೆ ಚಿನ್ನವನ್ನು ಮನೆಯಲ್ಲಿ ಇರಿಸಿಕೊಂಡರೆ ಅದನ್ನು ಸಂಬಂಧಪಟ್ಟ ಇಲಾಖೆಗಳು ಮುಟ್ಟುಗೋಲು ಹಾಕಿಕೊಳ್ಳುತ್ತವೆ.

Exit mobile version