ಬೆಂಗಳೂರು: ಚಿನ್ನ ಖರೀದಿಸಲು ಬಯಸುವವರಿಗೆ ಇದು ಸಿಹಿ ಸುದ್ದಿ. ಚಿನ್ನದ ದರದಲ್ಲಿ 400 ರೂ. ಮತ್ತು ಬೆಳ್ಳಿಯ ದರದಲ್ಲಿ ೧,೯೦೦ ರೂ. ದರ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ೨೪ ಕ್ಯಾರಟ್ ಬಂಗಾರದ ದರ ( ಪ್ರತಿ ೧೦ ಗ್ರಾಮ್‌ಗೆ ) ೫೦,೮೨೦ ರೂ.ಗೆ ತಗ್ಗಿದೆ. ಅಂದರೆ ೪೦೦ ರೂ. ಇಳಿದಿದೆ. ಆಭರಣ ಚಿನ್ನ ಅಥವಾ ೨೨ ಕ್ಯಾರಟ್ ಚಿನ್ನದ ದರ ೪೬,೫೮೦ ರೂ.ಗೆ ತಗ್ಗಿದೆ. ಅಂದರೆ ೩೭೦ ರೂ. ಇಳಿದಿದೆ. ಜುಲೈ ೧೨ರಿಂದ ಬಂಗಾರದ ದರ ಇಳಿಮುಖವಾಗಿದೆ.
ಡಾಲರ್ ಅಬ್ಬರ ಎಫೆಕ್ಟ್
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ ಸುಮಾರು ೧೧ ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಡಾಲರ್ ಕರೆನ್ಸಿ ಪ್ರಬಲವಾಗುತ್ತಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದು, ದರ ಇಳಿಯುತ್ತಿದೆ. ಹೀಗಿದ್ದರೂ, ಭಾರತದಲ್ಲಿ ಇತ್ತೀಚೆಗೆ ಆಮದು ಸುಂಕವನ್ನು ಹೆಚ್ಚಿಸಿರುವುದರಿಂದ ದರ ಕುಸಿತಕ್ಕೆ ಬ್ರೇಕ್ ಬಿದ್ದಿದೆ. ಇಲ್ಲದಿದ್ದರೆ ಇನ್ನೂ ದರ ಇಳಿಯುತ್ತಿತ್ತು.
ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ ನಿರೀಕ್ಷೆ
ಪ್ರಸಕ್ತ ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆ ಡಾಲರ್‌ನಲ್ಲಿ ಹೂಡಿಕೆ ಆಕರ್ಷಣೆ ಹೆಚ್ಚಿಸಿಕೊಂಡಿದೆ. ಫೆಡರಲ್ ರಿಸರ್ವ್ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ ಇರುವುದರಿಂದ ಡಾಲರ್ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಇದು ಬಂಗಾರದ ದರವನ್ನು ಮತ್ತಷ್ಟು ಇಳಿಸುವ ಸಾಧ್ಯತೆ ಇದೆ. ಅಮತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಈ ವಾರ ೧.೬% ಇಳಿಕೆಯಾಗಿದೆ. ಪ್ರತಿ ಔನ್ಸ್ ಬಂಗಾರದ ದರ ೧,೭೧೩ ಡಾಲರ್‌ಗೆ ತಗ್ಗಿದೆ.