ಬೆಂಗಳೂರು: ಇತ್ತೀಚೆಗೆ ಸ್ವಲ್ಪ ಇಳಿಕೆ ದಾಖಲಿಸಿದ್ದ ಬಂಗಾರದ ದರ ಮಂಗಳವಾರ 220 ರೂ. ಏರಿಕೆಯಾಗಿದೆ. (Gold rate) ಬೆಳ್ಳಿ ಕೂಡ ಪ್ರತಿ ಕೆ.ಜಿಗೆ 80,700 ರೂ.ಗೆ ವೃದ್ಧಿಸಿದ್ದು, 700 ರೂ. ಹೆಚ್ಚಳ ದಾಖಲಿಸಿದೆ. ಬೆಂಗಳೂರಿನಲ್ಲಿ ಮಂಗಳವಾರ 24 ಕ್ಯಾರೆಟ್‌ನ 10 ಗ್ರಾಮ್ ಚಿನ್ನದ ದರದಲ್ಲಿ 220 ರೂ. ಏರಿದ್ದು, 60,980 ರೂ.ಗೆ ವೃದ್ಧಿಸಿತ್ತು. ಆಭರಣ ಚಿನ್ನ ಅಥವಾ 22 ಕ್ಯಾರಟ್‌ನ 10 ಗ್ರಾಮ್ ದರ 55,900 ರೂ.ಗೆ ವೃದ್ಧಿಸಿತ್ತು. ಅಂದರೆ 200 ರೂ. ಏರಿತ್ತು.
ಬಂಗಾರದ ದರ 2023ರಲ್ಲಿ ನಾಗಾಲೋಟದಲ್ಲಿದ್ದು, 2023-24ರಲ್ಲಿ ದರ 68,000 ರೂ.ಗೆ ಜಿಗಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಪರಿಣಾಮ ಬಂಗಾರದ ಮೇಲಿನ ಹೂಡಿಕೆಗೆ 10-15% ಆದಾಯ ಸಿಗುವ ಸಾಧ್ಯತೆ ಇದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಜತೀನ್ ತ್ರಿವೇದಿ (Gold Price Outlook) ತಿಳಿಸಿದ್ದಾರೆ.
ಒಂದು ವೇಳೆ ಬಂಗಾರದ ದರ 15-20% ಪ್ರಮಾಣದಲ್ಲಿ ಏರಿಕೆಯಾದರೆ 64,500 ರೂ. ಮತ್ತು 66,800 ರೂ. ಶ್ರೇಣಿಯಲ್ಲಿ ಏರಿಕೆಯಾಗಲಿದೆ. 2024ರಲ್ಲಿ 68,000 ರೂ. ತನಕ ಹಚ್ಚಳವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1869 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 68,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.
ಮದುವೆಗಳು ಮತ್ತು ಹಬ್ಬಗಳಲ್ಲಿ ಚಿನ್ನದ ಖರೀದಿ ಹೆಚ್ಚು: ಭಾರತದಲ್ಲಿ ಮದುವೆ ಹಾಗೂ ಹಬ್ಬಗಳ ಸಂದರ್ಭ ಚಿನ್ನದ ಖರೀದಿ ಹೆಚ್ಚು.ಮಾರುಕಟ್ಟೆಯಲ್ಲಿ ಅರ್ಧದಷ್ಟು ಪಾಲನ್ನು ವಧುವಿನ ಆಭರಣಗಳು ಮತ್ತು ಹಬ್ಬಗಳ ಸಂದರ್ಭ ಕೊಳ್ಳುವ ಒಡವೆಗಳೇ ವಹಿಸುತ್ತಿವೆ. ಭಾರತದಲ್ಲಿ ಚಿನ್ನದ ಖರೀದಿ ಹೊಸತೇನಲ್ಲ, ಹೀಗಿದ್ದರೂ ಮುಂಬರುವ ವರ್ಷಗಳಲ್ಲಿ ಶಾಪಿಂಗ್ ಗಣನೀಯ ಹೆಚ್ಚಲಿದೆ ಎನ್ನಲು ಕಾರಣಗಳನ್ನು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಮುಂದಿಟ್ಟಿದೆ.
ಆರ್ಥಿಕ ಬೆಳವಣಿಗೆ, ಸಂಪತ್ತಿನ ವಿತರಣೆ, ನಗರೀಕರಣ ಎಫೆಕ್ಟ್: ಭಾರತದಲ್ಲಿ ಉಂಟಾಗುತ್ತಿರುವ ಆರ್ಥಿಕ ಬೆಳವಣಿಗೆ, ಸಂಪತ್ತಿನ ವಿತರಣೆ, ನಗರೀಕರಣದ ಪರಿಣಾಮ ಬಂಗಾರದ ಖರೀದಿಯ ಪ್ರವೃತ್ತಿ ಗಣನೀಯ ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಜ್ಯುವೆಲ್ಲರಿ ರಫ್ತು: ಭಾರತದಿಂದ ಇತ್ತೀಚಿನ ವರ್ಷಗಳಲ್ಲಿ ಜ್ಯುವೆಲ್ಲರಿ ರಫ್ತು ಕೂಡ ಗಣನೀಯ ಏರಿಕೆಯಾಗುತ್ತಿದೆ. 2015ರಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದ್ದ ಜ್ಯುವೆಲ್ಲರಿ ರಫ್ತು 2020ರಲ್ಲಿ ಕೋವಿಡ್-19 ಬರುವುದಕ್ಕೆ ಮುನ್ನ ೧೨.೪ ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ಜ್ಯುವೆಲ್ಲರಿಗಳನ್ನು ಹೊಸ ಮಾರುಕಟ್ಟೆಗೆ ರಫ್ತು ಮಾಡಬೇಕಾದ ಅಗತ್ಯವೂ ಇದೆ. ಈಗ ಜ್ಯುವೆಲ್ಲರಿ ರಫ್ತಿನ 90% ಪಾಲು ಕೂಡ ಕೇವಲ ಐದು ದೇಶಗಳಿಗೆ ಹೋಗುತ್ತಿದೆ.
ವಧುವಿನ ಆಭರಣಕ್ಕಾಗಿ ಖರೀದಿಯ ಪ್ರಾಬಲ್ಯ: ಶತಶತಮಾನಗಳಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಎಲ್ಲಿಲ್ಲದ ಪ್ರಾಧಾನ್ಯತೆ ಇದೆ. ಅದಕ್ಕೆ ಧಾರ್ಮಿಕ ನಂಬಿಕೆಗಳೂ ಬೆಸೆದುಕೊಂಡಿದೆ. ಹೀಗಾಗಿ ವಧುವಿನ ಆಭರಣಗಳಿಗೆ ಚಿನ್ನದ ಒಡವೆಗಳನ್ನು ಖರೀದಿಸುವುದು ವಾಡಿಕೆ. ಮಾಂಗಲ್ಯ ಸೂತ್ರಕ್ಕೆ ಜನ ಬಂಗಾರವನ್ನು ಕೊಳ್ಳುತ್ತಾರೆ. ಅದೊಂದೇ ಅಲ್ಲದೆ, ವಧುವಿನ ಅಂದ ಚಂದ ಹೆಚ್ಚಿಸಲು, ಗಮನ ಸೆಳೆಯಲು ಆಭರಣಗಳನ್ನು ಧರಿಸುತ್ತಾರೆ. ದೇಶದಲ್ಲಿ ಪ್ರತಿ ವರ್ಷ 1.1 ಕೋಟಿಗೂ ಹೆಚ್ಚು ಮದುವೆ ಕಾರ್ಯಕ್ರಮಗಳು ನಡೆಯುತ್ತವೆ. ಈ ಟ್ರೆಂಡ್ ದೀರ್ಘಕಾಲೀನವಾಗಿ ಮುಂದುವರಿಯಲಿದೆ. ವಧುವಿಗೆ ನೀಡುವ ಆಭರಣಗಳು ಅವಳದ್ದೇ ಆಸ್ತಿಯಾಗಿ ಇರುವುದರಿಂದ ಹಾಗೂ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿರುವುದರಿಂದ ಬಂಗಾರಕ್ಕೆ ಮದುವೆ ಸಂದರ್ಭ ಬೇಡಿಕೆ ಹೆಚ್ಚುತ್ತದೆ. ಕೃಷಿ ಕೂಡ ಚಿನ್ನಕ್ಕೆ ಬೇಡಿಕೆ ಸೃಷ್ಟಿಸಿದೆ. ಹೂಡಿಕೆಯ ಸಾಧನವಾಗಿಯೂ ಚಿನ್ನ ಬೇಡಿಕೆ ಉಳಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯದ ಅಭಿವೃದ್ಧಿ, ಮಳೆ-ಬೆಳೆಯನ್ನು ಆಧರಿಸಿ ಚಿನ್ನಕ್ಕೆ ಬೇಡಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಮಳೆ-ಬೆಳೆ ಚೆನ್ನಾಗಿದ್ದಾಗ ಚಿನ್ನದ ಖರೀದಿ ಹೆಚ್ಚುತ್ತದೆ. ಕೃಷಿ ಕಡಿಮೆಯಾದಾಗ ಬಂಗಾರಕ್ಕೆ ಬೇಡಿಕೆ ಕಡಿಮೆಯಾಗುತ್ತದೆ.