ಬೆಂಗಳೂರು: ಬಂಗಾರದ ದರ ಬುಧವಾರ ಸಾರ್ವಕಾಲಿಕ ದಾಖಲೆಯ 57,550 ರೂ.ಗೆ ಜಿಗಿದಿದೆ. (Gold rate) ಇದೇ ರೀತಿ ಮುಂದುವರಿದರೆ ಶೀಘ್ರದಲ್ಲಿಯೇ 60,000 ರೂ.ಗಳ ಮೈಲುಗಲ್ಲು ದಾಟಲಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ 10 ಗ್ರಾಮ್‌ಗೆ ದರ 57,550 ರೂ.ಗೆ ಜಿಗಿದಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರದಲ್ಲಿ 350 ರೂ. ಏರಿದ್ದು, 52,400 ರೂ.ಗೆ ವೃದ್ಧಿಸಿದೆ. ಈ ನಡುವೆ ಬೆಳ್ಳಿಯ ದರ ಬುಧವಾರ 700 ರೂ. ಇಳಿಕೆಯಾಗಿದ್ದು, ಪ್ರತಿ ಕೆ.ಜಿಗೆ 74,000 ರೂ.ಗೆ ತಗ್ಗಿದೆ.
ಬಂಗಾರದ ದರ ಮಂಗಳವಾರ ಮೊಟ್ಟ ಮೊದಲ ಬಾರಿಗೆ 57000 ರೂ.ಗಳ ಗಡಿ ದಾಟಿತ್ತು. ಬುಧವಾರ ಮತ್ತಷ್ಟು ದಾಖಲೆಯ ಎತ್ತರಕ್ಕೇರಿತು. ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಿನಲ್ಲಿ ಹಳದಿ ಲೋಹದ ದರದಲ್ಲಿ 20% ಹೆಚ್ಚಳವಾಗಿದೆ. ಡಾಲರ್ ತುಸು ದುರ್ಬಲವಾಗಿದ್ದು, ಸ್ವರ್ಣ ದರ ಜಿಗಿದಿರುವುದನ್ನು ಗಮನಿಸಬಹುದು.
62,000 ರೂ.ಗೆ ಏರಿಕೆ ಸಾಧ್ಯತೆ:
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1950 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.