ನ್ಯೂಯಾರ್ಕ್: ಜಾಗತಿಕ ಆರ್ಥಿಕ ಅನಿಶ್ಚಿತತೆಯ ಪ್ರಸ್ತುತ ಸಂದರ್ಭದಲ್ಲಿ ಒಂದು ವೇಳೆ ರಷ್ಯಾವು ತನ್ನ ಕಚ್ಚಾ ತೈಲ ಮಾರಾಟದಲ್ಲಿ ತೈಲಕ್ಕೆ ಪ್ರತಿಯಾಗಿ ಚಿನ್ನವನ್ನು (Gold price) ಸ್ವೀಕರಿಸಿದರೆ, ಬಂಗಾರದ ಬೆಲೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಕ್ರೆಡಿಟ್ ಸ್ವೀಸ್‌ನ ಆರ್ಥಿಕ ತಜ್ಞರಾದ ಜೋಲ್ಟಾನ್ ಪೋಜಾರ್ ತಿಳಿಸಿದ್ದಾರೆ.
ಜಿ7 ರಾಷ್ಟ್ರಗಳು ( ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್, ಅಮೆರಿಕ) ಕಚ್ಚಾ ತೈಲ ದರದ ಮೇಲೆ ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗಳ ಮಿತಿ ವಿಧಿಸಿರುವುದರಿಂದ, ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಗೆ ಹಿಂದೇಟು ಹಾಕುತ್ತಿವೆ. ಹೀಗಾಗಿ ರುಬೆಲ್ ಬದಲಿಗೆ ಚಿನ್ನವನ್ನು ಕೊಟ್ಟರೂ ತೈಲ ಮಾರಾಟ ಮಾಡಲು ರಷ್ಯಾ ಮುಂದಾಗುವ ಸಾಧ್ಯತೆ ಇದೆ.
ಒಂದು ವೇಳೆ ಅಂಥ ಸನ್ನಿವೇಶ ಸೃಷ್ಟಿಯಾದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ ಪ್ರತಿ ಔನ್ಸಿಗೆ 3,600 ಡಾಲರ್‌ಗೆ ಜಿಗಿಯಬಹುದು ಎಂದು ಅವರು ಹೇಳಿದ್ದಾರೆ. ಒಂದು ಔನ್ಸ್ ಎಂದರೆ 28 ಗ್ರಾಮ್‌ಗಳಾಗಿದೆ.
ಚಿನ್ನದ ದರ ಇತ್ತೀಚೆಗೆ ಏರುತ್ತಿರುವುದೇಕೆ?:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸಿಗೆ 1800 ಡಾಲರ್‌ನತ್ತ ಏರುತ್ತಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಇತ್ತೀಚೆಗೆ ತನ್ನ ಅಬ್ಬರವನ್ನು ಕಳೆದುಕೊಂಡಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಒಂದು ವೇಳೆ ಡಾಲರ್ ದುರ್ಬಲವಾದರೆ ಬಂಗಾರದ ದರ ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ಡಾಲರ್ ದುರ್ಬಲವಾಗಿದ್ದೇಕೆ? ಅಮೆರಿಕದ ಸರ್ಕಾರಿ ಬಾಂಡ್‌ಗಳ ಉತ್ಪತ್ತಿಯನ್ನು ಹೆಚ್ಚಿಸುವುದರಲ್ಲಿ ಇತ್ತೀಚೆಗೆ ಡಾಲರ್ ವಿಫಲವಾಗಿರುವ ಹಿನ್ನೆಲೆಯಲ್ಲಿ ಬಂಗಾರಕ್ಕೆ ಮತ್ತೆ ಬೇಡಿಕೆ ಉಂಟಾಗುತ್ತಿದೆ. ಹೀಗಾಗಿ ಅವುಗಳ ದರದಲ್ಲಿ ಏರುಗತಿ ಕಂಡು ಬಂದಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ದರ ಭಾರತದಲ್ಲೂ ಚಿನ್ನದ ದರ ಏರಿಕೆಗೆ ಕಾರಣವಾಗಿದೆ.