ನವ ದೆಹಲಿ: ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಸಂಘರ್ಷ, ಕೋವಿಡ್ ಬಿಕ್ಕಟ್ಟು ಸೃಷ್ಟಿಸಿರುವ ಸಂಕೀರ್ಣ ಸವಾಲುಗಳ ಹಿನ್ನೆಲೆಯಲ್ಲಿ ತಂತ್ರಜ್ಞಾನ ದಿಗ್ಗಜ ಗೂಗಲ್ (Google) ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನಾ ಘಟಕದ ಕೆಲ ಭಾಗಗಳನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಗೂಗಲ್ 5-10 ಲಕ್ಷ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲು ಭಾರತೀಯ ಮೂಲದ ಕಂಪನಿಗಳಿಂದ ಬಿಡ್‌ಗಳನ್ನು ಆಹ್ವಾನಿಸಿದೆ. ಅಂದರೆ ಗೂಗಲ್‌ನ ಪಿಕ್ಸೆಲ್ ಫೋನ್‌ಗಳ ಒಟ್ಟು ವಾರ್ಷಿಕ ಉತ್ಪಾದನೆಯಲ್ಲಿ 10-20% ಪಾಲು ಇದಾಗಿದೆ. ಸ್ಥಳೀಯವಾಗಿ ಕಚ್ಚಾ ವಸ್ತುಗಳನ್ನು ಖರೀದಿಸುವ ಬಗ್ಗೆ ಭಾರತೀಯ ಉತ್ಪಾದಕರಿಂದ ವಿವರಗಳನ್ನೂ ಗೂಗಲ್ ಪಡೆದಿದೆ.
ಅಮೆರಿಕ ಮತ್ತು ಚೀನಾದ ನಡುವೆ ವಾಣಿಜ್ಯ ಸಂಘರ್ಷ ಏರ್ಪಟ್ಟಿರುವುದರಿಂದ ಹಾಗೂ ಅಲ್ಲಿ ಕೋವಿಡ್ ನಿರ್ಬಂಧಗಳು ಮುಂದುವರಿದಿರುವುದರಿಂದ ಗೂಗಲ್‌ಗೆ ಚೀನಾದಲ್ಲಿ ಪಿಕ್ಸೆಲ್ ಸ್ಮಾರ್ಟ್ ಫೋನ್‌ಗಳ ಉತ್ಪಾದನೆಗೆ ಅಡಚಣೆ ಉಂಟಾಗಿದೆ. ಹೀಗಾಗಿ ತನ್ನ ಘಟಕದ ಕೆಲ ಭಾಗಗಳನ್ನು ಭಾರತಕ್ಕೆ ಸ್ಥಳಾಂತರಿಸಲು ಉದ್ದೇಶಿಸಿದೆ ಎಂದು ವರದಿಯಾಗಿದೆ. ಸ್ಮಾರ್ಟ್‌ಫೋನ್ ಸ್ಕ್ರೀನ್ ಗಳನ್ನೂ ಭಾರತದಿಂದ ಖರೀದಿಸಲು ನಿರ್ಧರಿಸಿದೆ. ಹೀಗಿದ್ದರೂ, ಚೀನಾ ಕೂಡ ಗೂಗಲ್ ಯೋಜನೆಗೆ ನಿರ್ಣಾಯಕವಾಗಿದೆ.
ಸೆಮಿಕಂಡಕ್ಟರ್‌ಗಳಿಗೆ ಸಂಬಂಧಿಸಿ ಜಾಗತಿಕ ಬಿಕ್ಕಟ್ಟು ಉಂಟಾಗಿರುವುದು ಕೂಡ ಗೂಗಲ್ ತನ್ನ ಘಟಕದ ಸ್ಥಳಾಂತರಕ್ಕೆ ಯೋಚಿಸಲು ಕಾರಣಗಳಲ್ಲೊಂದಾಗಿದೆ. ಹೀಗಾಗಿ ಭಾರತಕ್ಕೆ ಉತ್ಪಾದನಾ ಘಟಕದ ಭಾಗಶಃ ಸ್ಥಳಾಂತರದಿಂದ ಗೂಗಲ್‌ಗೆ ಅಮೆರಿಕ-ಚೀನಾ ಸಂಘರ್ಷ ಮುಂದೊಮ್ಮೆ ತೀವ್ರವಾದರೂ, ಉಂಟಾಗುವ ನಷ್ಟ ಭರಿಸಲು ಭಾರತದ ಘಟಕ ಸಹಕಾರಿಯಾಗಲಿದೆ. ವಿಯೆಟ್ನಾಂಗೂ ಘಟಕದ ಭಾಗವನ್ನು ಸ್ಥಳಾಂತರಿಸಲು ಗೂಗಲ್ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.