ಬೆಂಗಳೂರು: ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ತೆರೆಯುವಂತೆ ಜಾಗತಿಕ ಮಟ್ಟದ ಹೂಡಿಕೆದಾರರು, ಉದ್ಯಮಿಗಳು, ನಾನಾ ಉತ್ಪನ್ನಗಳ ಮೂಲ ಉತ್ಪಾದಕರಿಗೆ (Global original equipment manufactures) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಹ್ವಾನಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ-ಇಂಡಿಯಾ ಏರ್ ಶೋದ (Aero India 2023) ನೇಪಥ್ಯದಲ್ಲಿ ಬಹು ರಾಷ್ಟ್ರೀಯ ಕಂಪನಿಗಳ ಸಿಇಒಗಳನ್ನು ಅವರು ಭೇಟಿಯಾದರು.
ಜಾಗತಿಕ ಉತ್ಪಾದಕರು ಭಾರತದಲ್ಲಿ ಜಂಟಿಯಾಗಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬಹುದು. ಇಲ್ಲಿಂದಲೇ ಜಗತ್ತಿಗೆ ರಫ್ತು ಮಾಡಬಹುದು ಎಂದು ಅವರು ಆಹ್ವಾನಿಸಿದರು. ಜನರಲ್ ಆಟೋಮಿಕ್ಸ್, ಬೋಯಿಂಗ್, ಎಂಬ್ರೇರ್, ರಾಫೆಲ್ ಅಡ್ವಾನ್ಸ್‌ಡ್ ಡಿಫೆನ್ಸ್ ಸಿಸ್ಟಮ್ಸ್ ಸೇರಿದಂತೆ ಹಲವಾರು ಕಂಪನಿಗಳ ಮುಖ್ಯಸ್ಥರು ಈ ಸಂದರ್ಭ ಸಭೆಯಲ್ಲಿ ಭಾಗವಹಿಸಿದ್ದರು.
ಉದ್ದಿಮೆ ಸ್ಥಾಪಿಸುವವರಿಗೆ ಭೂಮಿ, ಮೂಲಸೌಕರ್ಯಕ್ಕೆ ತಗಲುವ ವೆಚ್ಚ, ಸರ್ಕಾರದ ರೀತಿ-ನೀತಿ, ಉತ್ತೇಜನ, ಮಾನವ ಸಂಪನ್ಮೂಲದ ಲಭ್ಯತೆ, ದೇಶೀಯ ರಕ್ಷಣಾ ವಲಯದ ಮಾರುಕಟ್ಟೆಯ ವಿವರಗಳನ್ನು ಸಚಿವರು ನೀಡಿದರು.
ಭಾರತವು ರಕ್ಷಣಾ ವಲಯದ ಉತ್ಪಾದನೆಯನ್ನು ಉತ್ತೇಜಿಸುತ್ತೆ. ಭಾರತ ಈ ವಲಯದಲ್ಲಿ ಸ್ವಾವಲಂಬಿಯಾಗಲು ಹಾಗೂ ಉದ್ಯೋಗ ಸೃಷ್ಟಿಗೆ ಇದು ಮಹತ್ತರ ಪಾತ್ರ ವಹಿಸಲಿದೆ ಎಂದರು. ರಕ್ಷಣಾ ಉದ್ಯಮ ಕಾರಿಡಾರ್‌ಗಳ ಸ್ಥಾಪನೆಗೆ ಉತ್ತರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳು ಘೋಷಿಸಿರುವ ಇನ್ಸೆಂಟಿವ್‌ಗಳನ್ನೂ ಸಚಿವರು ಪ್ರಸ್ತಾಪಿಸಿದರು.
ಸ್ವದೇಶಿ ಎಲ್‌ಸಿಎ ಎಂಜಿನ್ ಉತ್ಪಾದನೆಗೆ ಸಿದ್ಧತೆ: ಭಾರತವು ಶೀಘ್ರದಲ್ಲಿಯೇ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಎಂಜಿನ್‌ಗಳನ್ನು ತಯಾರಿಸಲಿದೆ ಎಂದು (light combat aircraft engine) ಡಿಆರ್ ಡಿಒ ಮುಖ್ಯಸ್ಥ ಸಮೀರ್ ಕಾಮತ್ ತಿಳಿಸಿದ್ದಾರೆ.