ಮುಂಬಯಿ: ವಿಮೆ ವಲಯದ ಹಲವಾರು ಕಂಪನಿಗಳ ವಿರುದ್ಧ ಜಿಎಸ್‌ಟಿ ಇಂಟಲಿಜೆನ್ಸ್ ನಿರ್ದೇಶನಾಲಯವು (Directorate General of GST) ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಗೋ ಡಿಜಿಟ್ ಇನ್ಷೂರೆನ್ಸ್, ಪಾಲಿಸಿ ಬಾಜಾರ್ ಮುಂತಾದ ಕಂಪನಿಗಳ ವಿರುದ್ಧ ಡಿಜಿಜಿಐ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ವಿಮೆ ಕಂಪನಿಗಳು ಅಕ್ರಮವಾಗಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್ ಮಾಡಿರುವ ಆರೋಪ ಎದುರಿಸುತ್ತಿವೆ. ಡಿಜಿಜಿಐನ ಮುಂಬಯಿ, ಬೆಂಗಳೂರು, ಗಾಜಿಯಾಬಾದ್ ಕಚೇರಿಯಿಂದ ನೋಟಿಸ್ ರವಾನೆಯಾಗಿದೆ. ವಿಮೆ ಕಂಪನಿಗಳು ಯಾವುದೇ ಸೇವೆ ನೀಡದಿದ್ದರೂ ನಕಲಿ ಇನ್ ವಾಯ್ಸ್ ಕಳಿಸಿ ಇನ್‌ಪುಟ್ ಕ್ರೆಡಿಟ್ ಟ್ಯಾಕ್ಸ್ ಅನ್ನು ಕ್ಲೇಮ್ ಮಾಡಿವೆ ಎಂದು ವರದಿಯಾಗಿದೆ. ಇದುವರೆಗೆ 2,250 ಕೋಟಿ ರೂ. ಮೊತ್ತದ ತೆರಿಗೆ ವಂಚನೆ ನಡೆದಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಕಳೆದ 2018-2022ರ ಅವಧಿಯಲ್ಲಿ ಇನ್ ವಾಯ್ಸ್‌ಗಳ ಬಗ್ಗೆ ನಡೆಸಿದ ತನಿಖೆಯಲ್ಲಿ ತೆರಿಗೆ ವಂಚನೆ ಬಯಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹ 1,49,577 ಕೋಟಿ ರೂ.ಗೆ ಏರಿಕೆಯಾಗಿದೆ. ವಾರ್ಷಿಕ ಆಧಾರದಲ್ಲಿ 12% ಏರಿಕೆಯಾಗಿದೆ. ಇದರೊಂದಿಗೆ ಕಳೆದ 12 ತಿಂಗಳುಗಳಲ್ಲಿ ಸತತವಾಗಿ 1.4 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹ ಆದಂತಾಗಿದೆ (GST Collection) ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ಬುಧವಾರ ತಿಳಿಸಿದೆ. 2022ರ ಫೆಬ್ರವರಿಯಲ್ಲಿ ಜಿಎಸ್‌ಟಿ ಆದಾಯ 1,33,026 ಕೋಟಿ ರೂ.ಗಳಾಗಿತ್ತು.
ಜಿಎಸ್‌ಟಿ ಸಂಗ್ರಹದಲ್ಲಿ ಸಿಜಿಎಸ್‌ಟಿ 27,662 ಕೋಟಿ ರೂ, ಎಸ್‌ಜಿಎಸ್ ಟಿ 34,915 ಕೋಟಿ ರೂ, ಐಜಿಎಸ್‌ಟಿ 75,069 ಕೋಟಿ ರೂ. ಆಗಿದೆ. ಸೆಸ್ 11,931 ಕೋಟಿ ರೂ. ಸಂಗ್ರಹವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಪ್ರಕಾರ 2022-23ರಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ 12% ಏರಿಕೆ ನಿರೀಕ್ಷಿಸಲಾಗಿದೆ.
ಕಳೆದ ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ 13% ಏರಿಕೆಯಾಗಿತ್ತು. 1.60 ಲಕ್ಷ ಕೋಟಿ ರೂ.ಗೆ ವೃದ್ಧಿಸಿತ್ತು. 2022-23ರಲ್ಲಿ ನಾಲ್ಕನೇ ಸಲ 1.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಜಿಎಸ್‌ಟಿ ಸಂಗ್ರಹವಾಗಿದೆ.