ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಏರೋ ಇಂಡಿಯಾದಲ್ಲಿ ಪ್ರದರ್ಶನಕ್ಕಿಡಲಾಗಿದ್ದ ತನ್ನ ನೂತನ ವಿಮಾನ HLFT -42 ಯುದ್ಧ ವಿಮಾನದ ಮಾದರಿಯಲ್ಲಿ ಇದ್ದ ಹಿಂದೂ ದೇವತೆ ಹನುಮಂತನ ಚಿತ್ರವನ್ನು ತೆಗೆದು ಹಾಕಿದೆ. ಎಚ್‌ಎಎಲ್‌ನ ಯುದ್ಧ ವಿಮಾನದ ರೆಕ್ಕೆಯಲ್ಲಿ ವಾಯುಪುತ್ರ ಹನುಮಾನ್ ಚಿತ್ರವನ್ನು ರಚಿಸಲಾಗಿತ್ತು. ಇದು ಸಾಕಷ್ಟು ಗಮನ ಸೆಳೆದಿತ್ತು. ಆದರೆ ಇದಕ್ಕೆ ಅಪಸ್ವರ ಹೊರಡುತ್ತಿದ್ದಂತೆಯೇ ಎಚ್‌ಎಎಲ್, ಹನುಮಂತನ ಚಿತ್ರವನ್ನು ತೆಗೆದು ಹಾಕಿದೆ. ಆದರೆ ಎಚ್‌ಎಎಲ್‌ನ ಈ ನಡೆಗೂ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹನುಮಂತನ ಚಿತ್ರ ತೆಗೆಸಿದ್ದಕ್ಕೆ ಎಚ್‌ಎಎಲ್ ಮುಖ್ಯಸ್ಥರ ಸಮಜಾಯಿಷಿ ಏನು?
ಯಾವುದೇ ಉದ್ದೇಶ ರಹಿತವಾಗಿ ಹನುಮಾನ್ ಚಿತ್ರವನ್ನು ವಿಮಾನದ ರೆಕ್ಕೆಯಿಂದ ತೆರವುಗೊಳಿಸಲಾಗಿದೆ. ಹಾಕಿಕೊಳ್ಳಲೂ ನಿರ್ದಿಷ್ಟ ಉದ್ದೇಶ ಇದ್ದಿರಲಿಲ್ಲ. ಒಟ್ಟಿನಲ್ಲಿ ಕಾರ್ಯಕ್ರಮವು ಸಾಂಗವಾಗಿ ನಡೆಯುವುದು ನಮ್ಮ ಉದ್ದೇಶ ಎಂದು ಚಿತ್ರವನ್ನು ತೆರವುಗೊಳಿಸಿದ ಬಳಿಕ ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ ಅನಂತಕೃಷ್ಣನ್ ಅವರು ತಿಳಿಸಿದ್ದಾರೆ.
ವಿಮಾನದಲ್ಲಿ ಮಾರುತಿಯ ಚಿತ್ರದ ಮಹತ್ವ ಏನು?
ಎಚ್‌ಎಎಲ್ ಅಭಿವೃದ್ಧಿಪಡಿಸಿರುವ ಎಚ್‌ಎಎಲ್ ಮಾರುತ್ ಯುದ್ಧ ವಿಮಾನದ ಮುಂದಿನ ಹಂತದ ವಿಮಾನ ಎಚ್‌ಎಲ್‌ಎಫ್‌ಟಿ-42 ಆಗಿದೆ. ಮಾರುತ್ ಎಂದರೆ ಪವನ ಅಥವಾ ವಾಯು. ಪವನ ಪುತ್ರನೇ ಹನುಮಂತ ಆಗಿರುವುದರಿಂದ ಈ ಯುದ್ಧ ವಿಮಾನದ ಮಾದರಿಯಲ್ಲಿ ಮಾರುತಿಯ ಚಿತ್ರವನ್ನು ಅಳವಡಿಸಲಾಗಿತ್ತು. ಅತ್ಯಾಧುನಿಕ ಯುದ್ಧ ವಿಮಾನಗಳ ಹಾರಾಟಕ್ಕೆ ಸಂಬಂಧಿಸಿ ಪೈಲಟ್‌ಗಳಿಗೆ ತರಬೇತಿ ಕೊಡಲು ಈ ವಿಮಾನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.
ಭಾರತೀಯ ವಾಯುಪಡೆಯಲ್ಲಿ ಯುದ್ಧ ವಿಮಾನಗಳನ್ನು ಚಲಾಯಿಸಬಲ್ಲ ಯುವ ಪೈಲಟ್‌ಗಳಿಗೆ ತರಬೇತಿ ನೀಡುವಲ್ಲಿ HLFT-೪೨ ಅವಶ್ಯಕವಾಗಿದೆ. ಆಧುನಿಕ ಯುದ್ಧ ತಂತ್ರಗಳನ್ನು ಕಲಿಯಲು ಕೂಡ ಅಗತ್ಯವಾಗುತ್ತದೆ. Active electronically scanned array, electronic warfare suite ಇತ್ಯಾದಿ ಅಂಶಗಳನ್ನು ಇದು ಒಳಗೊಂಡಿದೆ. ಹೀಗಾಗಿ ಇದಕ್ಕೆ Next Gen supersonic trainer ಎಂಬ ಹೆಗ್ಗಳಿಕೆಯೂ ಇದೆ.