ನವ ದೆಹಲಿ: ನೀವು ನಿಮ್ಮ ಡಿಮ್ಯಾಟ್ ಖಾತೆಗೆ ನಾಮಿನಿ ಯಾರು ಎಂಬುದನ್ನು ಹೆಸರಿಸಿದ್ದೀರಾ? ಇಲ್ಲ ಎಂದಿದ್ದರೆ ಕೂಡಲೇ ಈ ಬಗ್ಗೆ ಗಮನಹರಿಸಿ. 2023ರ ಮಾರ್ಚ್ 31ರೊಳಗೆ ನೀವು ನಿಮ್ಮ ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ನಿರ್ದೇಶಿಸದಿದ್ದರೆ, ಅಕೌಂಟ್ ಸ್ಥಗಿತವಾಗಲಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯು (sebi) ಈ ಹಿಂದೆ, 2022ರ ಮಾರ್ಚ್‌ಗೆ ಗಡುವನ್ನು ನಿಗದಿಪಡಿಸಿತ್ತು. ಅದನ್ನು ಮತ್ತೆ ಒಂದು ವರ್ಷ ವಿಸ್ತರಿಸಿತ್ತು. (Demat Accounts) ಹೀಗಿದ್ದರೂ, ನಾನಾ ವಲಯಗಳಿಂದ ಬೇಡಿಕೆಯನ್ನು ಪರಿಗಣಿಸಿ ಗಡುವನ್ನು ವಿಸ್ತರಿಸಲಾಯಿತು.
2021ರ ಜುಲೈನಲ್ಲಿ ಬಿಡುಗಡೆಗೊಳಿಸಿದ್ದ ಅಧಿಸೂಚನೆಗೆ ಮುನ್ನ ನಾಮಿನೇಶನ್ ಮಾಡಿರುವವರು ಮತ್ತೆ ನಾಮಿನೇಶನ್ ಮಾಡುವುದು ಅವರ ಆಯ್ಕೆಗೆ ಬಿಟ್ಟಿದೆ. ಆದರೆ ಹಾಲಿ ಹೂಡಿಕೆದಾರರು ಡಿಮ್ಯಾಟ್ ಖಾತೆಗೆ ನಾಮಿನೇಶನ್ ಅನ್ನು ಮಾಡಿಲ್ಲದಿದ್ದರೆ ಮಾರ್ಚ್ 31ರೊಳಗೆ ಮಾಡಬೇಕು.
ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಗೆ ನಾಮಿನೇಶನ್ ಮಾಡುವಾಗ ಸಾಕ್ಷಿಯ ಅಗತ್ಯ ಇರುವುದಿಲ್ಲ. ಇ-ಸೈನ್ ಬಳಸಿ ನಾಮಿನೇಶನ್ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೇ ಮಾಡಬಹುದು. ಆಫ್‌ಲೈನ್‌ನಲ್ಲೂ ಮಾಡಬಹುದು. ನಿಮ್ಮ ಡಿಮ್ಯಾಟ್ ಖಾತೆಯ ಪೂರೈಕೆದಾರ DP ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನಾಮಿನೇಶನ್ ಮಾಡಬಹುದು. NSDL DP ವೆಬ್‌ಸೈಟ್ ಮೂಲಕವೂ ಬದಲಿಸಬಹುದು. ನಿಮ್ಮ ಡಿಮ್ಯಾಟ್ ಖಾತೆಗೆ ಮೂರು ನಾಮಿನಿಗಳನ್ನು ಹೆಸರಿಸಬಹುದು. ನಿಮ್ಮ ತಂದೆ, ತಾಯಿ, ಸಂಗಾತಿ, ಮಕ್ಕಳು ಅಥವಾ ಯಾರಾದರೂ ವ್ಯಕ್ತಿ ನಾಮಿನಿ ಆಗಬಹುದು.