Site icon Vistara News

Financial planning : ನೀವು ನಿವೃತ್ತಿಗೆ, ಮಕ್ಕಳ ಶಿಕ್ಷಣಕ್ಕೆ ಉಳಿತಾಯ ಮಾಡಿದ್ದೀರಾ?

cash

Financial planning : ನೀವು ಈಗ ದುಡಿಯುವ ವಯಸ್ಸಿನಲ್ಲಿ ಇದ್ದೀರಿ ಎಂದು ಇಟ್ಟುಕೊಳ್ಳಿ. ಉದಾಹರಣೆಗೆ 18-45 ವರ್ಷ ವಯಸ್ಸಿನವರು ಎಂದು ಭಾವಿಸಿ. ಹಾಗಿದ್ದರೆ ನಿಮ್ಮ ನಿವೃತ್ತಿಯ ಬದುಕಿನ ಖರ್ಚುವೆಚ್ಚ ಹಾಗೂ ಮಕ್ಕಳ ಶಿಕ್ಷಣ ವೆಚ್ಚದ ಗುರಿ ಸಾಧನೆಗೆ ಅಗತ್ಯ ತಯಾರಿ ನಡೆಸಿದ್ದೀರಾ? ಸರಿಯಾದ ಹೂಡಿಕೆಯ ಪ್ರಾಡಕ್ಟ್‌ ಅನ್ನು ಆಯ್ಕೆ ಮಾಡಿದ್ದೀರಾ?

ಹಣಕಾಸು ಪ್ಲಾನಿಂಗ್‌ (financial planning) ಅಡಿಯಲ್ಲಿ ಸರಿಯಾದ ಹೂಡಿಕೆಯ ಆಯ್ಕೆ ನಿರ್ಣಾಯಕ. ಎರಡನೆಯದಾಗಿ ಹಣಕಾಸು ಗುರಿಗೆ ತಕ್ಕಂತೆ ಹೂಡಿಕೆಯ ಮೊತ್ತವನ್ನು ನಿರ್ಧರಿಸಬೇಕು. (money goals) ಅದು ಹೇಗೆ ಎಂಬುದನ್ನು ಈಗ ನೋಡೋಣ.

ಆದಾಯದಿಂದ ಉಳಿತಾಯವನ್ನು ಕಳೆಯುವ ಪದ್ಧತಿ: ಅನೇಕ ಮಂದಿ ಕುಟುಂಬದ ಖರ್ಚು ವೆಚ್ಚಗಳನ್ನು ಮಾಡಿದ ಬಳಿಕ ಉಳಿತಾಯಕ್ಕೆ ಆದ್ಯತೆ ನೀಡುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ. ಮೊದಲು ಉಳಿತಾಯದ ಹಣವನ್ನು ತೆಗೆದಿಟ್ಟು, ಉಳಿದ ಹಣವನ್ನು ಕುಟುಂಬದ ಖರ್ಚು ವೆಚ್ಚ ನೋಡಿಕೊಳ್ಳಲು ಬಳಸುವುದು ಸೂಕ್ತ.

ಮೊದಲ ವಿಧಾನದಲ್ಲಿ ಎಂಥಾ ಸಮಸ್ಯೆಯಾಗುತ್ತದೆ ಎಂಬುದನ್ನು ನೋಡೋಣ. ಈ ಪದ್ಧತಿಯಲ್ಲಿ ಹೂಡಿಕೆಗೂ ಮುನ್ನ ಕುಟುಂಬದ ಖರ್ಚು ವೆಚ್ಚಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ ಖರ್ಚು ಕಳೆದು ತಿಂಗಳಿಗೆ 15,000 ರೂ. ಉಳಿತಾಯವಾಗುತ್ತದೆ. ಆದರೆ ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ನಿಮ್ಮ 15 ವರ್ಷಗಳ ಗುರಿ ಸಾಧನೆಗೆ ಪ್ರತಿಯಾಗಿ ಮಾಸಿಕ 18,000 ರೂ. ಬೇಕು ಎಂದಿಟ್ಟುಕೊಳ್ಳಿ. 3000 ರೂ. ಕೊರತೆಯಿಂದ ಏನಾಗುತ್ತದೆ ಎಂದು ನೀವು ಕೇಳಬಹುದು. ಆದರೆ 3,000 ರೂ. ಕೊರತೆಯಿಂದ ನಿಮ್ಮ ಹಣಕಾಸು ಯೋಜನೆಯ ಗುರಿಯೇ ಹಳಿ ತಪ್ಪಬಹುದು!

ಹೇಗೆ ಎನ್ನುತ್ತೀರಾ? ಮಾಸಿಕ 3,000 ಸಿಪ್‌ ಅನ್ನು 15 ವರ್ಷಗಳ ಅವಧಿಗೆ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿದರೆ, 12% ಆದಾಯ ಸಿಕ್ಕಿದರೆ 15 ಲಕ್ಷ ರೂ. ಸಂಪತ್ತು ಸೃಷ್ಟಿಯಾಗುತ್ತದೆ.

ನಿಮ್ಮ ಗುರಿಗಳಿಗೆ ಹಣದುಬ್ಬರವೇ ಶತ್ರು: ದೀರ್ಘಕಾಲೀನ ಗುರಿಗಳನ್ನು ಹಣಕಾಸು ಯೋಜನೆ ಹೊಂದಿರುವಾಗ, ಭವಿಷ್ಯದ ಹಣದುಬ್ಬರದ ಗತಿಯ ಬಗ್ಗೆಯೂ ಯೋಚಿಸಬೇಕು. ಹಣದುಬ್ಬರ ನಿಧಾನವಾಗಿ ನಿಮ್ಮ ಉಳಿತಾಯದ ಮೌಲ್ಯವನ್ನು ಸವಕಳಿಸುವಂತೆ ಮಾಡಿ ಹಾಕುತ್ತದೆ. ಆದ್ದರಿಂದ ಹೂಡಿಕೆಯ ಮೊದಲ ದಿನದಿಂದಲೇ ಹಣದುಬ್ಬರವನ್ನು ಸೋಲಿಸುವಂತೆ ನೋಡಿಕೊಳ್ಳಬೇಕು. ಉದಾಹರಣೆಗೆ ಈಗ ಮಕ್ಕಳ ಮದುವೆಗೆ 25 ಲಕ್ಷ ರೂ. ಖರ್ಚಾದರೆ 21 ವರ್ಷಗಳ ಬಳಿಕ 70 ಲಕ್ಷ ರೂ. ಖರ್ಚಾಗಬಹುದು. (ವಾರ್ಷಿಕ 5 ಪರ್ಸೆಂಟ್ ಹಣದುಬ್ಬರದ ಲೆಕ್ಕ) ಹೀಗಾಗಿ 21 ವರ್ಷದ ಬಳಿಕ ಮಕ್ಕಳ ಮದುವೆ ಮಾಡಬೇಕಾಗಿರುವವರು 70 ಲಕ್ಷ ರೂ.ಗೆ ತಕ್ಕಂತೆ ಹೂಡಿಕೆ ಮಾಡಬೇಕು. 25 ಲಕ್ಷ ರೂ.ಗೆ ತಕ್ಕಂತೆ ಅಲ್ಲ.

ಮಕ್ಕಳ ಶಿಕ್ಷಣಕ್ಕೆ ಈಗ 10 ಲಕ್ಷ ರೂ. ಖರ್ಚು ತಗಲುತ್ತದೆ ಎಂದು ಭಾವಿಸಿ. 15 ವರ್ಷಗಳ ಬಳಿಕ 28 ಲಕ್ಷ ರೂ. ಆಗುತ್ತದೆ. (7 % ಹಣದುಬ್ಬರದ ಲೆಕ್ಕದಲ್ಲಿ). ಹೀಗಾಗಿ ಪೂರ್ವಸಿದ್ಧತೆ ಮತ್ತು ಲೆಕ್ಕಾಚಾರ ಇಲ್ಲಿ ಮುಖ್ಯ.

Exit mobile version