ನವ ದೆಹಲಿ: ಉದ್ಯೋಗಿಗಳು ಇಪಿಎಸ್ ಅಡಿಯಲ್ಲಿ (Employees Pension Scheme-EPS ) ಹೆಚ್ಚಿನ ಪಿಂಚಣಿ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು 2023ರ ಮೇ 3 ಕೊನೆಯ ದಿನವಾಗಿದೆ. ಈ ದಿನ ತಪ್ಪಿದರೆ ಮತ್ತೆ ಅವಕಾಶ ಸಿಗುವುದಿಲ್ಲ. ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (Employees provident fund Organisation) ಈಗಾಗಲೇ ಗಡುವನ್ನು ವಿಸ್ತರಿಸಿತ್ತು. (Higher EPFO Pension) ಅದರ ಪ್ರಕಾರ ಬುಧವಾರ ಕೊನೆಯ ದಿನವಾಗಿದೆ.
ಎಲ್ಲ ಇಪಿಎಫ್ ಸದಸ್ಯರೂ ಈ ಸೌಲಭ್ಯಕ್ಕೆ ಅರ್ಹರಲ್ಲ. ಅರ್ಹತೆ ಇರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಹತೆ ಇದ್ದರೆ ನಿಗದಿತ ದಾಖಲೆ ಸಲ್ಲಿಸಿ ಅರ್ಜಿ ದಾಖಲಿಸಬಹುದು. ಮೂಲ ವೇತನವು ನಿರ್ದಿಷ್ಟ ಮಿತಿಗಿಂತ ಮೇಲಿದ್ದರೆ ಅರ್ಹತೆ ಸಿಗಲಿದೆ. ಇಪಿಎಸ್ ಅಡಿಯಲ್ಲಿ ಪಿಂಚಣಿಗೆ ಅರ್ಹತೆಯಲ್ಲಿ ಮೂಲ ವೇತನದ ಮಿತಿ ಮಾಸಿಕ 15,000 ರೂ. ಇದೆ. ಇದಕ್ಕಿಂತಲೂ ಹೆಚ್ಚು ಮೂಲ ವೇತನ ಇರುವವರು ಹೆಚ್ಚಿನ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಪಿಂಚಣಿ ಬೇಕಿದ್ದರೆ ಏನು ಮಾಡಬೇಕಾಗುತ್ತದೆ?
ನಿಮಗೆ ಇಪಿಎಫ್‌ಒ ಅಡಿಯಲ್ಲಿ ಹೆಚ್ಚು ಪಿಂಚಣಿ ಸಿಗಬೇಕಿದ್ದರೆ, ನಿಮ್ಮ ಇಪಿಎಫ್ ಖಾತೆಯಿಂದ ಇಪಿಎಸ್ ಖಾತೆಗೆ ಹೆಚ್ಚು ಹಣ ವರ್ಗಾವಣೆ ಆಗಬೇಕಾಗುತ್ತದೆ.
ಪ್ರಸ್ತುತ ಉದ್ಯೋಗಿಗಳು ಮತ್ತು ಉದ್ಯೋಗದಾತರು ಉದ್ಯೋಗಿಗಳ ಮೂಲವೇತನ, ತುಟ್ಟಿಭತ್ಯೆಯ 12%ರಷ್ಟನ್ನು ಇಪಿಎಫ್‌ಗೆ ಸಲ್ಲಿಸಲಾಗುತ್ತದೆ. ಉದ್ಯೋಗಿಗಳ 12% ದೇಣಿಗೆ ಪೂರ್ಣವಾಗಿ ಇಪಿಎಫ್‌ಗೆ ಸಂದಾಯವಾಗುತ್ತದೆ. ಉದ್ಯೋಗಿಗಳ 12% ಪಾಲಿನಲ್ಲಿ 3.67% ಇಪಿಎಫ್‌ಗೆ ಹೋಗುತ್ತದೆ. ಉಳಿದ 8.33% ಇಪಿಎಸ್‌ಗೆ ಹೋಗುತ್ತದೆ. ಸರ್ಕಾರ ಉದ್ಯೋಗಿಯ ಪಿಂಚಣಿಗೆ 1.6% ನೀಡುತ್ತದೆ. ಆದರೆ ಇದೀಗ ಉದ್ಯೋಗಿಗಳೂ ಇಪಿಎಸ್‌ಗೆ ಹೆಚ್ಚುವರಿ ದೇಣಿಗೆ ನೀಡುವ ಮೂಲಕ ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶ ಸೃಷ್ಟಿಯಾಗಿದೆ.