ನವದೆಹಲಿ: ಗೌತಮ್ ಅದಾನಿ (Gautam Adani) ನೇತೃತ್ವದ ಅದಾನಿ ಗ್ರೂಪ್ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್ (Hindenburg) ಸಂಸ್ಥೆಯು 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ ದೇಶಾದ್ಯಂತ ಸಂಚಲ ಮೂಡಿಸಿದ ಬೆನ್ನಲ್ಲೇ ಹಿಂಡನ್‌ಬರ್ಗ್ ಮತ್ತೊಂದು ಸ್ಫೋಟಕ ವರದಿ ಬಹಿರಂಗಪಡಿಸಿದೆ. ವಿದೇಶದಲ್ಲಿ ಗೌತಮ್ ಅದಾನಿ ಹೊಂದಿರುವ ಕಂಪನಿಗಳಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರ ಪಾಲಿದೆ ಎಂದು ಸ್ಫೋಟಕ ವರದಿ ಬಹಿರಂಗಪಡಿಸಿದೆ.
ಅದಾನಿ ಗ್ರೂಪ್ ವಿದೇಶದಲ್ಲಿ ಹೊಂದಿರುವ ಕಂಪನಿಗಳ ಹಗರಣಗಳಲ್ಲಿ ಸೆಬಿ ಅಧ್ಯಕ್ಷೆಯಾಗಿರುವ ಮಾಧಬಿ ಪುರಿ ಬುಚ್ ಹಾಗೂ ಅವರ ಪತಿ ಧವಳ್ ಬುಚ್ ಅವರ ಪಾಲೂ ಇದೆ. ಕಂಪನಿಗಳಲ್ಲೂ ಇವರು ಷೇರುಗಳನ್ನು ಹೊಂದಿದ್ದಾರೆ. ವಿದೇಶದಲ್ಲಿ ಕಂಪನಿಗಳಿಂದ ಅಕ್ರಮವಾಗಿ ಪಡೆದುಕೊಂಡ ಹಣದಲ್ಲಿ ಇವರದ್ದೂ ಪಾಲಿದೆ. ಬರ್ಮುಡಾ ಹಾಗೂ ಮಾರಿಷಸ್ ಫಂಡ್‌ಗಳಲ್ಲಿ ಮಾಧಬಿ ಪುರಿ ಬುಚ್ ಹಾಗೂ ಧವಳ್ ಬುಚ್ ಅವರ ಪಾಲು ಇದೆ ಎಂಬುದಾಗಿ ಹಿಂಡನ್‌ಬರ್ಗ್ ಸಂಸ್ಥೆಯು ಸ್ಫೋಟಕ ವರದಿ ಬಯಲು ಮಾಡಿದೆ.
NEW FROM US:
— Hindenburg Research (@HindenburgRes) August 10, 2024
Whistleblower Documents Reveal SEBI’s Chairperson Had Stake In Obscure Offshore Entities Used In Adani Money Siphoning Scandalhttps://t.co/3ULOLxxhkU
ಸೆಬಿ ಮುಖ್ಯಸ್ಥೆಯಾಗಿರುವ ಮಾಧಬಿ ಪುರಿ ಬುಚ್ ಅವರು 2015ರಿಂದಲೂ ಗೌತಮ್ ಅದಾನಿ ಕಂಪನಿಗಳಲ್ಲಿ ತಮ್ಮ ವೈಯಕ್ತಿಕ ಹಣವನ್ನು ಹೂಡಿಕೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಗೌತಮ್ ಅದಾನಿ ಸಹೋದರ ವಿನೋದ್ ಅದಾನಿ ಅವರು ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳಿಂದ ಸೈಫೊನಿಂಗ್ (ಕಂಪನಿಗಳಿಂದ ಅಕ್ರಮವಾಗಿ ಹಣ ಪಡೆಯುವುದು) ಮೂಲಕ ಹಣ ಪಡೆದಿದ್ದಾರೆ. ಇದರಲ್ಲಿ ಮಾಧಬಿ ಪುರಿ ಬುಚ್ ಅವರ ಪಾಲೂ ಇದೆ ಎಂದು ವರದಿ ಉಲ್ಲೇಖಿಸಿದೆ.
2023ರ ಹಿಂಡನ್‌ಬರ್ಗ್ ವರದಿಯಲ್ಲಿ ಏನಿತ್ತು?
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. “ಹೂಡಿಕೆದಾರರಿಗೆ ಅದಾನಿ ಗ್ರೂಪ್ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಅದಾನಿ ಗ್ರೂಪ್ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ ಅದಾನಿ ಗ್ರೂಪ್ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.
ಹಿಂಡನ್‌ಬರ್ಗ್ ವರದಿ ಕುರಿತು ತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಲವರು ಮೊರೆ ಹೋಗಿದ್ದರು. ಅಲ್ಲದೆ ಅದಾನಿ ಗ್ರೂಪ್ ಅಕ್ರಮ ಪತ್ತೆಹಚ್ಚುವಲ್ಲಿ ಸೆಬಿ ವಿಫಲವಾಗಿದೆ. ಹಾಗಾಗಿ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಸರ್ವೋಚ್ಚ ನ್ಯಾಯಾಲಯವು 2023ರ ಮಾರ್ಚ್‌ನಲ್ಲಿ ಸೆಬಿ ತನಿಖೆ ಮೇಲೆ ನಿಗಾ ಇರಿಸಲು, ತನಿಖೆಯಲ್ಲಿ ದೋಷ ಪತ್ತೆಹಚ್ಚಲು ಆರು ಸದಸ್ಯರ ತನಿಖಾ ಸಮಿತಿ ರಚಿಸಿತ್ತು. ಇದಾದ ಎರಡು ತಿಂಗಳ ಬಳಿಕ ಸೆಬಿಯು ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು. “ಅದಾನಿ ಗ್ರೂಪ್ ವಂಚನೆ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಈ ಹಂತದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ” ಎಂದು ಉಲ್ಲೇಖಿಸಿತ್ತು.
ಅದಾನಿ ಗ್ರೂಪ್, ವಿದೇಶಗಳಲ್ಲಿ ನಕಲಿ ಕಂಪನಿಗಳ ಮೂಲಕ ತನ್ನ ಕಂಪನಿಗಳ ಷೇರು ದರವನ್ನು ಕೃತಕವಾಗಿ ಏರಿಸಿದೆ ಎಂದು ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ತನ್ನ ವರದಿಯಲ್ಲಿ ಆರೋಪಿಸಿತ್ತು. ಆದರೆ ಅದಾನಿ ಗ್ರೂಪ್ ಮಾರುಕಟ್ಟೆ ನಿಯಮಗಳನ್ನು ಉಲ್ಲಂಘಿಸಿರುವುದು ಹಾಗೂ ಮಾರುಕಟ್ಟೆ ನಿಯಂತ್ರಜ ಸೆಬಿ ಅದನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ಸಮಿತಿಯ ವರದಿ ತಿಳಿಸಿದೆ.
ಗೌತಮ್ ಅದಾನಿ-ಹಿಂಡನ್‌ಬರ್ಗ್ ವರದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ನಡೆಸುತ್ತಿರುವ ತನಿಖೆಯ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು. “ಸೆಬಿಯು ತನಿಖೆ ಹಾಗೂ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ಅದರ ತನಿಖೆಯಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಲು ಆಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಇದರಿಂದಾಗಿ ಗೌತಮ್ ಅದಾನಿ ನೇತೃತ್ವದ ಗ್ರೂಪ್‌ಗೆ ರಿಲೀಫ್ ಸಿಕ್ಕಿತ್ತು.
ಇದನ್ನೂ ಓದಿ: Gautam Adani: ಅಧಿಕಾರ ತೊರೆದು ನಿವೃತ್ತರಾಗಲಿದ್ದಾರಾ ಗೌತಮ್ ಅದಾನಿ? ಈ ಬಗ್ಗೆ ಅವರು ಹೇಳಿದ್ದೇನು?