Site icon Vistara News

Hindenburg: ಶೀಘ್ರದಲ್ಲೇ ಭಾರತದಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಯಾಗಲಿದೆ; ಹೊಸದೊಂದು ಬಾಂಬ್‌ ಸಿಡಿಸಿದ ಹಿಂಡನ್‌ಬರ್ಗ್‌

Hindenburg

ವಾಷಿಂಗ್ಟನ್‌: ಗೌತಮ್‌ ಅದಾನಿ (Gautam Adani)  ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ (Hindenburg) ಸಂಸ್ಥೆಯು 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ ದೇಶಾದ್ಯಂತ ಸಂಚಲ ಮೂಡಿಸಿತ್ತು. ಇದೀಗ ಮತ್ತೊಮ್ಮೆ ಭಾರತ ಕೇಂದ್ರೀತ ವರದಿ ಪ್ರಕಟಿಸುವುದಾಗಿ ಘೋಷಿಸಿದೆ. ಈ ಬಗ್ಗೆ ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸೂಚನೆ ನೀಡಿದೆ. ʼʼಶೀಘ್ರದಲ್ಲೇ ಭಾರತದಲ್ಲಿ ಏನೋ ಬಹುದೊಡ್ಡ ಬದಲಾವಣೆ ನಡೆಯಲಿದೆʼʼ (Something big soon India) ಎಂದು ಸಂಸ್ಥೆ ಬರೆದುಕೊಂಡಿದೆ. ಅದಾನಿ ಗ್ರೂಪ್ ಆಂತರಿಕ ವ್ಯಾಪಾರ ಮತ್ತು ಷೇರು ಮಾರುಕಟ್ಟೆಯಲ್ಲಿ ನಿಯಮ ಉಲ್ಲಂಘನೆಗಳನ್ನು ಮಾಡುತ್ತಿದೆ ಎಂದು ಆರೋಪಿಸಿ ಹಿಂಡನ್‌ಬರ್ಗ್‌ ವರದಿ ಪ್ರಕಟಿಸಿದ ಸುಮಾರು ಒಂದೂವರೆ ವರ್ಷದ ಬಳಿಕ ಮತ್ತೊಂದು ಬಾಂಬ್‌ ಸಿಡಿಸಲು ಸಜ್ಜಾಗಿದೆ.

2023ರ ಜನವರಿಯಲ್ಲಿ ಅದಾನಿ ಗ್ರೂಪ್ ಕುರಿತ ವರದಿ ಪ್ರಕಟವಾದ ಬಳಿಕ ಅದರ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದ್ದವು. ಆದಾಗ್ಯೂ ಅದಾನಿ ಗ್ರೂಪ್ ಈ ಆರೋಪಗಳನ್ನು ನಿರಾಕರಿಸಿತ್ತು.

ಹಿಂಡನ್‌ಬರ್ಗ್‌ ವರದಿಯಲ್ಲಿ ಏನಿತ್ತು?

ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. “ಹೂಡಿಕೆದಾರರಿಗೆ ಅದಾನಿ ಗ್ರೂಪ್‌ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಅದಾನಿ ಗ್ರೂಪ್‌ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಹಿಂಡನ್‌ಬರ್ಗ್‌ ವರದಿ ಕುರಿತು ತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಲವರು ಮೊರೆ ಹೋಗಿದ್ದರು. ಅಲ್ಲದೆ ಅದಾನಿ ಗ್ರೂಪ್‌ ಅಕ್ರಮ ಪತ್ತೆಹಚ್ಚುವಲ್ಲಿ ಸೆಬಿ ವಿಫಲವಾಗಿದೆ. ಹಾಗಾಗಿ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಸರ್ವೋಚ್ಚ ನ್ಯಾಯಾಲಯವು 2023ರ ಮಾರ್ಚ್‌ನಲ್ಲಿ ಸೆಬಿ ತನಿಖೆ ಮೇಲೆ ನಿಗಾ ಇರಿಸಲು, ತನಿಖೆಯಲ್ಲಿ ದೋಷ ಪತ್ತೆಹಚ್ಚಲು ಆರು ಸದಸ್ಯರ ತನಿಖಾ ಸಮಿತಿ ರಚಿಸಿತ್ತು. ಇದಾದ ಎರಡು ತಿಂಗಳ ಬಳಿಕ ಸೆಬಿಯು ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು. “ಅದಾನಿ ಗ್ರೂಪ್‌ ವಂಚನೆ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಈ ಹಂತದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ” ಎಂದು ಉಲ್ಲೇಖಿಸಿತ್ತು.

ಇದನ್ನೂ ಓದಿ: Gautam Adani : ಎನ್​ಡಿಟಿವಿ ಆಯ್ತು; ಈಗ ಸುದ್ದಿ ಸಂಸ್ಥೆ ಐಎಎನ್​ಎಸ್​ ಅದಾನಿ ಪಾಲು

ಗೌತಮ್‌ ಅದಾನಿ-ಹಿಂಡನ್‌ಬರ್ಗ್‌ ವರದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ನಡೆಸುತ್ತಿರುವ ತನಿಖೆಯ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು. “ಸೆಬಿಯು ತನಿಖೆ ಹಾಗೂ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ಅದರ ತನಿಖೆಯಲ್ಲಿ ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಮಾಡಲು ಆಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್‌ ತಿಳಿಸಿತ್ತು. ಇದರಿಂದಾಗಿ ಗೌತಮ್‌ ಅದಾನಿ ನೇತೃತ್ವದ ಗ್ರೂಪ್‌ಗೆ ರಿಲೀಫ್‌ ಸಿಕ್ಕಿತ್ತು.

Exit mobile version