ಇತ್ತೀಚೆಗೆ ಸ್ಪೈಸ್‌ಜೆಟ್ ಏರ್‌ಲೈನ್‌ನಲ್ಲಿ ಕೇವಲ ೧೮ ದಿನಗಳಲ್ಲಿ ಸಂಭವಿಸಿದ ೮ ಅಹಿತಕರ ಘಟನೆಗಳು ದೇಶದ ಜನತೆಯನ್ನು ಬೆಚ್ಚುವಂತೆ ಮಾಡಿವೆ. ಸಾವಿರಾರು ಅಡಿ ಎತ್ತರದಲ್ಲಿ ಹಾರಾಟ ನಡೆಸುವ ವಿಮಾನದ ಕ್ಯಾಬಿನ್‌ನಿಂದ ಇದ್ದಕ್ಕಿಂದ್ದಂತೆ ಹೊಗೆ ಬರುತ್ತಿರುವುದು ಕಂಡರೆ, ಪ್ರಯಾಣಿಕರ ಫಜೀತಿ ಹೇಗಾಗಬೇಡ? ನಿಸ್ಸಂದೇಹವಾಗಿ ಇದು ಕಳವಳಕಾರಿ ಘಟನೆ. ಸ್ಪೈಸ್‌ಜೆಟ್ ಒಂದೇ ಅಲ್ಲ, ವಿಸ್ತಾರ ಏರ್‌ಲೈನ್‌ನಲ್ಲೂ ಇತ್ತೀಚೆಗೆ ತಾಂತ್ರಿಕ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಗಳು ದೊಡ್ಡ ದುರಂತಗಳಿಗೆ ಎಡೆ ಮಾಡಿಕೊಡಲಿಲ್ಲ. ಆದರೆ ಈ ವಿದ್ಯಮಾನ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆತಂಕಕ್ಕೆ ಕಾರಣವಾಗಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ಸಂಬಂಧ ಸ್ಪೈಸ್‌ಜೆಟ್‌ಗೆ ವಿವರಣೆ ಕೋರಿ ನೋಟಿಸ್ ಕಳಿಸಿದೆ. ಹಾಗಾದರೆ ಏನಾಗುತ್ತಿದೆ ಭಾರತದ ಏರ್‌ಲೈನ್ ಇಂಡಸ್ಟ್ರಿಯಲ್ಲಿ? ಯಾಕಿಂಥ ಆತಂಕ ಸೃಷ್ಟಿಯಾಗಿದೆ? ಇದಕ್ಕೇನು ಪರಿಹಾರ?
ಸ್ಪೈಸ್‌ಜೆಟ್‌ನಲ್ಲಿ ಆಗಿದ್ದೇನು?
ಸ್ಪೈಸ್ ಜೆಟ್‌ನಲ್ಲಿ ೨೦೨೨ರ ಜೂನ್ ೧೭ರ ಬಳಿಕ ೧೮ ದಿನಗಳಲ್ಲಿ ೮ ಸಲ ತಾಂತ್ರಿಕ ದೋಷಗಳು ಪತ್ತೆಯಾಗಿವೆ!
ಕೋಲ್ಕೊತಾದಿಂದ ೨೦೨೨ರ ಜುಲೈ ೫ರಂದು ಚೀನಾಕ್ಕೆ ಹಾರಾಟ ಆರಂಭಿಸಿದ್ದ ಸ್ಪೈಸ್‌ಜೆಟ್ ಬೋಯಿಂಗ್ ೭೩೭ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾದ್ದರಿಂದ, ವಿಮಾನ ಮತ್ತೆ ಕೋಲ್ಕತಾಗೆ ಹಿಂತಿರುಗಿತು. ಟೇಕಾಫ್ ಆದ ಬಳಿಕ ವಿಮಾನದಲ್ಲಿ ಹವಾಮಾನ ತಿಳಿಸುವ ರಾಡಾರ್ ಸ್ಥಗಿತವಾಗಿರುವುದನ್ನು ಗಮನಿಸಿದ ಪೈಲಟ್‌ಗಳು ವಿಮಾನವನ್ನು ಕೋಲ್ಕತಾಗೆ ಹಿಂತಿರುಗಿಸಿದರು. ಸರಕು ಸಾಗಣೆ ಮಾಡುವ ವಿಮಾನ ಇದಾಗಿತ್ತು. ಕೋಲ್ಕತಾದಿಂದ ಚೀನಾದ ಚೊಂಗ್‌ಕಿಂಗ್‌ಗೆ ವಿಮಾನ ಹಾರಾಟ ಆರಂಭಿಸಿತ್ತು.
ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ
2022ರಂದು ಮತ್ತೊಂದು ಅಹಿತಕರ ಘಟನೆ ನಡೆದಿತ್ತು. ಅದೂ ಸ್ಪೈಸ್‌ಜೆಟ್‌ನಲ್ಲಿಯೇ. ದಿಲ್ಲಿಯಿಂದ ಮುಂಬಯಿಗೆ ಹೊರಟಿದ್ದ ವಿಮಾನ, ದಾರಿ ಮಧ್ಯೆ ತಾಂತ್ರಿಕ ಅಡಚಣೆ ಕಾಣಿಸಿದ್ದರಿಂದ ಕರಾಚಿ ಏರ್‌ಪೋರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ೧೩೦ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ವಿಮಾನದ ಇಂಧನ ವಿಭಾಗದಲ್ಲಿಯೇ ಸಮಸ್ಯೆ ಉಂಟಾಗಿತ್ತು.
ವಿಮಾನದ ಕ್ಯಾಬಿನ್‌ನೊಳಗೆ ಹೊಗೆ!
೨೦೨೨ರ ಜುಲೈ ೨ರಂದು ದಿಲ್ಲಿಯಿಂದ ಜಬಲ್ಪುರಕ್ಕೆ ಹಾರಾಟ ನಡೆಸುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿತ್ತು. ೫,೦೦೦ ಅಡಿ ಎತ್ತರದಲ್ಲಿ ಹಾರಾಟದಲ್ಲಿದ್ದ ವಿಮಾನವನ್ನು ಮತ್ತೆ ದಿಲ್ಲಿಗೆ ಹಿಂತಿರುಗಿಸಲಾಯಿತು.
ವಿಮಾನಕ್ಕೆ ಹಕ್ಕಿ ಬಡಿದು ಅವಘಡ
೨೦೨೨ರ ಜೂನ್ ೨೦ರಂದು ಸ್ಪೈಸ್‌ಜೆಟ್‌ನ ಬೋಯಿಂಗ್ ೭೩೭ ವಿಮಾನ ಪಟನಾದಿಂದ ದಿಲ್ಲಿಗೆ ಹೊರಟಿತ್ತು. ಟೇಕಾಫ್ ಆದ ಕೆಲ ಹೊತ್ತಿನಲ್ಲೇ ಹಕ್ಕಿ ಬಡಿದಿತ್ತು. ಬಳಿಕ ಒಂದು ಎಂಜಿನ್‌ನಲ್ಲಿ ಬೆಂಕಿಯ ಕಿಡಿ ಕಾಣಿಸಿತ್ತು. ಕೂಡಲೇ ಪೈಲಟ್ ಆ ಎಂಜಿನ್ ಅನ್ನು ಆಫ್ ಮಾಡಿ, ಮತ್ತೊಂದು ಎಂಜಿನ್ ನೆರವಿನಿಂದ ವಿಮಾನವನ್ನು ಸುರಕ್ಷಿತವಾಗಿ ನಿಲ್ದಾಣದಲ್ಲಿ ಇಳಿಸಿದ. ಆ ವಿಮಾನದಲ್ಲಿ ೧೯೧ ಪ್ರಯಾಣಿಕರು ಇದ್ದರು. ೨೦೨೨ರ ಜೂನ್ ೧೯ರಂದು ಪಟನಾದಲ್ಲಿ ದಿಲ್ಲಿಗೆ ತೆರಳುತ್ತಿದ್ದ, ೧೮೫ ಪ್ರಯಾಣಿಕರನ್ನು ಒಳಗೊಂಡಿದ್ದ ಸ್ಪೈಸ್ ಜೆಟ್ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿತ್ತು. ಆಗಲೂ ವಿಮಾನಕ್ಕೆ ಹಕ್ಕಿ ಢಿಕ್ಕಿಯಾಗಿತ್ತು.
ಏಕಕಾಲಕ್ಕೆ 2 ವಿಮಾನಗಳ ಟೇಕಾಫ್
ಬೆಂಗಳೂರಿನಲ್ಲಿ ೨೦೨೨ರ ಜನವರಿ 7 ರಂದು ಒಂದು ಪ್ರಮಾದ ಸಂಭವಿಸಿತ್ತು. ಏಕಕಾಲಕ್ಕೆ ಎರಡು ಇಂಡಿಗೊ ವಿಮಾನಗಳ ಟೇಕಾಫ್‌ಗೆ ಅನುಮತಿ ನೀಡಿದ ಪರಿಣಾಮ, ಕನಿಷ್ಠ 1000 ಅಡಿ ಅಂತರ ಇರಬೇಕಿದ್ದಲ್ಲಿ 100 ಅಡಿಗೆ ವಿಮಾನಗಳು ಸಮೀಪಿಸಿತ್ತು. ರಾಡಾರ್ ಮಧ್ಯಪ್ರವೇಶದಿಂದ ದುರಂತ ತಪ್ಪಿತ್ತು. ಈ ಘಟನೆಗೆ ಸಂಬಂಧಿಸಿ ನಾಗರಿಕ ವಿಮಾನ ನಿರ್ದೇಶನಾಲಯವು ಒಬ್ಬ ಏರ್ ಟ್ರಾಫಿಕ್ ಕಂಟ್ರೋಲರ್‌ನ (ಎಟಿಸಿ) ಲೈಸೆನ್ಸ್ ಅನ್ನು ಮೂರು ತಿಂಗಳಿನ ಮಟ್ಟಿಗೆ ಸಸ್ಪೆಂಡ್ ಮಾಡಿತ್ತು.
ಎರಡೂ ವಿಮಾನಗಳಲ್ಲಿ ನೂರಾರು ಮಂದಿ ಪ್ರಯಾಣಿಕರು ಇದ್ದರು. ಬೆಂಗಳೂರಿನಿಂದ ಕೋಲ್ಕೊತಾಗೆ ತೆರಳುತ್ತಿದ್ದ ಇಂಡಿಗೊ ವಿಮಾನ 6ಇ 455ಕ್ಕೆ ಟೇಕಾಫ್ ಆಗಲು ಏರ್‌ಪೋರ್ಟ್‌ನ ಸೌತ್ ಟವರ್‌ನಿಂದ ಕಂಟ್ರೋಲರ್ ಅನುಮತಿ ನೀಡಿದ. ಇದೇ ವೇಳೆಗೆ ನಾರ್ತ್ ಟವರ್‌ನಲ್ಲಿದ್ದ ಕಂಟ್ರೋಲರ್, ಇಂಡಿಗೊ 6ಇ 246 ವಿಮಾನಕ್ಕೆ (ಬೆಂಗಳೂರು-ಭುವನೇಶ್ವರ) ಕೂಡ ಟೇಕಾಫ್ ಆಗಲು ಅನುಮತಿ ನೀಡಿದ. ಇದಕ್ಕೂ ಮುನ್ನ ಈ ಕಂಟ್ರೋಲರ್, ಸೌತ್ ಟವರ್ ಅನ್ನು ಸಂಪರ್ಕಿಸಿರಲಿಲ್ಲ. ರಾಡಾರ್ ಕಂಟ್ರೋಲರ್ ಅನ್ನೂ ಕೇಳಿರಲಿಲ್ಲ !
ಎರಡೂ ವಿಮಾನಗಳು ಏಕಕಾಲಕ್ಕೆ ಹೊರಟು ಪರಸ್ಪರ ಸಮೀಪಿಸುತ್ತಿದ್ದಂತೆಯೇ, ರಾಡಾರ್ ಕಂಟ್ರೋಲರ್, ವಿರುದ್ಧ ದಿಕ್ಕಿಗೆ ಚಲಿಸಲು ಸೂಚಿಸಿತು. ಆ ಹೊತ್ತಿಗೆ ಉಭಯ ವಿಮಾನಗಳ ಕೇವಲ 100 ಅಡಿಗೆ ಸಮೀಪಿಸಿತ್ತು. ಈ ಘಟನೆಯನ್ನು “ಗಂಭೀರ ಪ್ರಕರಣʼ ಎಂದು ಡಿಜಿಸಿಎ ಪರಿಗಣಿಸಿತ್ತು. ನಾರ್ತ್ ಟವರ್‌ನ ಕಂಟ್ರೋಲರ್‌ನ ಲೈಸೆನ್ಸ್ ಅನ್ನು ಮೂರು ತಿಂಗಳಿಗೆ ಸಸ್ಪೆಂಡ್ ಮಾಡಿತ್ತು.ಒಂದು ವೇಳೆ ರಾಡಾರ್ ಕಂಟ್ರೋಲರ್ ಸಕಾಲದಲ್ಲಿ ಮಧ್ಯಪ್ರವೇಶಿಸದಿರುತ್ತಿದ್ದರೆ ಎರಡೂ ವಿಮಾನಗಳು ಆಕಾಶದಲ್ಲಿ ಢಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸುವ ಅಪಾಯ ಇತ್ತು. ಇಂಥ ಹಲವಾರು ಅವಘಡಗಳು ಸಹಜವಾಗಿ ವಿಮಾನಯಾನದ ಸುರಕ್ಷತೆ ಬಗ್ಗೆ ಕಳವಳ ಮೂಡಿಸಿದೆ. ಯಾಕೆ ಹೀಗಾಗುತ್ತಿದೆ ಎಂಬ ಕಳವಳವನ್ನು ಮೂಡಿಸಿವೆ. ಮಾತ್ರವಲ್ಲದೆ ಈ ಆತಂಕವನ್ನು ದೂರಮಾಡಬೇಕಾದ ತುರ್ತು ಕೂಡ ಇದೆ.
ವಿಶ್ವದ ನಂ.೩ ಏವಿಯೇಶನ್ ಮಾರುಕಟ್ಟೆ ಭಾರತ!
ಭಾರತವು ಅಮೆರಿಕ ಮತ್ತು ಚೀನಾ ಹೊರತುಪಡಿಸಿದರೆ ಅತಿ ದೊಡ್ಡ ವೈಮಾನಿಕ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎನ್ನುತ್ತಾರೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ. ಪ್ರತಿ ನಿತ್ಯ ಲಕ್ಷಾಂತರ ಮಂದಿ ದೇಶದಲ್ಲಿ ವಿಮಾನದಲ್ಲಿ ಸಂಚರಿಸುತ್ತಾರೆ.
ಇವತ್ತಿನ ಜಾಗತೀಕರಣ ಯುಗದಲ್ಲಿ ದೇಶದ ಮೂಲ ಸೌಕರ್ಯಗಳಲ್ಲಿ ವಿಮಾನಯಾನ ನಿರ್ಣಾಯಕವಾಗುತ್ತಿದೆ. ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತದೆ. ವಿಪತ್ತುಗಳ ಸಂದರ್ಭದಲ್ಲೂ ಇದು ನಿರ್ಣಾಯಕವಾಗುತ್ತದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಇದು ಸಾಬೀತಾಗಿದೆ. ಪಿಪಿಇ ಕಿಟ್, ಮಾಸ್ಕ್, ಔಷಧಗಳನ್ನು ವಿತರಿಸಲು ಬಳಕೆಯಾಗಿದೆ. ರಷ್ಯಾ-ಉಕ್ರೇನ್ ಸಂಘರ್ಷದ ವೇಳೆ ಉಕ್ರೇನ್‌ನ ರಣಭೂಮಿಯಲ್ಲಿ ಸಿಲುಕಿದ್ದ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಿಸಲು ವಿಮಾನ ಸಾರಿಗೆ ನಿರ್ಣಾಯಕವಾಗಿತ್ತು ಎನ್ನುತ್ತಾರೆ ತಜ್ಞರು.
ಭಾರತದ ದೇಶೀಯ ಏರ್ ಟ್ರಾಫಿಕ್, 2022, ಜುಲೈ ೬ಕ್ಕೆ
ನಿರ್ಗಮಿಸಿದ ವಿಮಾನಗಳು 2,562 | ನಿರ್ಗಮಿಸಿದ ಪ್ರಯಾಣಿಕರು 319,267 |
ಆಗಮಿಸಿದ ವಿಮಾನಗಳು 2,547 | ಆಗಮಿಸಿದ ಪ್ರಯಾಣಿಕರು 321,461 |
ವಿಮಾನಗಳ ಹಾರಾಟ 5,109 | ಏರ್‌ಪೋರ್ಟ್‌ಗೆ ಒಟ್ಟು ಪ್ರವೇಶ 640,728 |
ಭಾರತದ ಅಂತಾರಾಷ್ಟ್ರೀಯ ಏರ್ ಟ್ರಾಫಿಕ್, 2022, ಜುಲೈ ೬ಕ್ಕೆ
ನಿರ್ಗಮಿಸಿದ ವಿಮಾನಗಳು 428 | ನಿರ್ಗಮಿಸಿದ ಪ್ರಯಾಣಿಕರು 64,268 |
ಆಗಮಿಸಿದ ವಿಮಾನಗಳು 441 | ಆಗಮಿಸಿದ ಪ್ರಯಾಣಿಕರು 84,324 |
ವಿಮಾನಗಳ ಹಾರಾಟ 869 | ಏರ್‌ಪೋರ್ಟ್‌ಗೆ ಒಟ್ಟು ಪ್ರವೇಶ 148,592 |
ಭಾರತೀಯ ವಿಮಾನಯಾನದ ಹೈಲೈಟ್ಸ್
- ಭಾರತದಲ್ಲಿರುವ ಏರ್ಪೋರ್ಟ್ಗಳು: ೧೩೦
- ಅಂತಾರಾಷ್ಟ್ರೀಯ ಏರ್ಪೋರ್ಟ್ಗಳು: ೨೯
- ೨೦೨೦ರಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆ: ೬.೩೦ ಕೋಟಿ
- ೨೦೨೧ರಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆ: ೮.೩೮ ಕೋಟಿ
- 2019ರಲ್ಲಿ: ೧೪.೪೧ ಕೋಟಿ (ಕೋವಿಡ್ ಬಿಕ್ಕಟ್ಟಿಗೆ ಮುನ್ನ)
ಭಾರತದ ಏವಿಯೇಶನ್ ಮುಂದಿರುವ ಸವಾಲುಗಳೇನು?
- ಜನಸಂಖ್ಯೆ ಮತ್ತು ಬೇಡಿಕೆಯ ದೃಷ್ಟಿಯಿಂದ ಏರ್ಪೋರ್ಟ್ಗಳ ಸಂಖ್ಯೆ ಹೆಚ್ಚಬೇಕು. 20೩೫ರ ವೇಳೆಗೆ ೪೫೦ ಏರ್ಪೋರ್ಟ್ಗಳನ್ನು ಹೊಂದುವ ಗುರಿಯನ್ನು ಭಾರತ ಹೊಂದಿದೆ.
- ಮುಂದಿನ ೨೦ ವರ್ಷಗಳಲ್ಲಿ ಏರ್ಪೋರ್ಟ್ಗಳ ಅಭಿವೃದ್ಧಿಗೆ ಭಾರತ ೫೦ ಶತಕೋಟಿ ಡಾಲರ್ ಹೂಡಿಕೆ ಮಾಡಬೇಕಾದ ಅಗತ್ಯ ಇದೆ ಎನ್ನುತ್ತಿದೆ ಕೆಪಿಎಂಜಿ ವರದಿ. (ಅಂದಾಜು ೩.೯ ಲಕ್ಷ ಕೋಟಿ ರೂ.)
- ಭಾರತಕ್ಕೆ ಪ್ರತಿ ವರ್ಷ ೧,೦೦೦ದಿಂದ ೧೨೦೦ ಪೈಲಟ್ಗಳ ಅವಶ್ಯಕತೆ ಇದೆ. ಏರ್ಪೋರ್ಟ್ಗಳಲ್ಲಿ ನುರಿತ ಸಿಬ್ಬಂದಿಯ ಅಗತ್ಯವೂ ಇದೆ.
- ಕಚ್ಚಾ ತೈಲ ದರದ ಏರಿಕೆ ವಿಮಾನಯಾನಕ್ಕೆ ಬಹು ದೊಡ್ಡ ಸವಾಲು
- ತಾಂತ್ರಿಕ ಸವಾಲುಗಳು ಕೂಡ ಸವಾಲಾಗಿವೆ.
ವಿಮಾನಗಳ ಅವಘಡಗಳಿಗೆ ಕಾರಣಗಳೇನು?
- ವಿಮಾನಗಳ ಅವಘಡಗಳಿಗೆ ಹಲವಾರು ಕಾರಣಗಳಿರುತ್ತವೆ. ಅವುಗಳನ್ನು ಹೀಗೆ ಪಟ್ಟಿ ಮಾಡಬಹುದು.
- ಪೈಲಟ್‌ಗಳು ಮಾಡುವ ಪ್ರಮಾದಗಳು
- ಏರ್ ಟ್ರಾಫಿಕ್ ಕಂಟ್ರೋಲರ್ ವೈಫಲ್ಯ
- ವಿಮಾನದ ವಿನ್ಯಾಸ, ತಾಂತ್ರಿಕ ದೋಷ
- ವಿಮಾನದ ನಿರ್ವಹಣೆಯ ವೈಫಲ್ಯ
- ಪ್ರತಿಕೂಲ ಹವಾಮಾನ
- ಭಯೋತ್ಪಾದಕರ ಕೃತ್ಯ