Site icon Vistara News

PM Vishwakarma Scheme : ಕಾರ್ಪೆಂಟರ್‌, ಕ್ಷೌರಿಕರು, ಕಮ್ಮಾರರು ಹೇಗೆ ಸಾಲ ಪಡೆಯಬಹುದು?

ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ದಿಮೆ ಇಲಾಖೆಯು 2023ರ ಸೆಪ್ಟೆಂಬರ್‌ನಲ್ಲಿ ಜಾರಿಗೊಳಿಸಿದ ಪಿಎಂ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಎರಡೂವರೆ ( PM Vishwakarma Scheme ) ತಿಂಗಳಿನಲ್ಲಿಯೇ 21 ಲಕ್ಷಕ್ಕೂ ಹೆಚ್ಚು ಮಂದಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಭಾರತದಲ್ಲಿ ಸಾಮಾನ್ಯವಾಗಿರುವ ಒಟ್ಟು 18 ಬಗೆಯ ವೃತ್ತಿ ಅಥವಾ ಕಸುಬುಗಳಲ್ಲಿ ತೊಡಗಿಸಿಕೊಂಡವರು ಈ ವಿಶ್ವ ಕರ್ಮ ಯೋಜನೆಯ ಅಡಿಯಲ್ಲಿ ಸಾಲ ಪಡೆಯಬಹುದು.

ಪಿಎಂ ವಿಶ್ವಕರ್ಮ ಸಾಲ ಯೋಜನೆ: ಫಲಾನುಭವಿಗಳಿಗೆ ಐಡಿ ಕಾರ್ಡ್‌ ಸಹಿತ ಮಾನ್ಯತೆ, ಕೌಶಲ ಅಭಿವೃದ್ಧಿಗೆ ತರಬೇತಿ, ಟೂಲ್‌ ಕಿಟ್‌ ನೆರವು, ಸಾಲದ ವಿತರಣೆ, ಡಿಜಿಟಲ್‌ ಟ್ರಾನ್ಸಕ್ಷನ್‌ ಗೆ ಇನ್ಸೆಂಟಿವ್‌, ಮಾರ್ಕೆಟಿಂಗ್‌ ಸಪೋರ್ಟ್‌ ಈ ಯೋಜನೆಯ ವಿಶೇಷತೆಯಾಗಿದೆ. ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌, ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌, ಕೋಪರೇಟಿವ್‌ ಬ್ಯಾಂಕ್‌, ನಾನ್‌ ಬ್ಯಾಂಕಿಂಗ್‌ ಫೈನಾನ್ಸ್‌ ಕಂಪನಿಗಳು, ಮೈಕ್ರೊ ಫೈನಾನ್ಸ್‌ ಇನ್‌ ಸ್ಟಿಟ್ಯೂಷನ್‌ಗಳು ಈ ಯೋಜನೆಯಡಿ ಸಾಲ ವಿತರಿಸುತ್ತವೆ.

ಕಾರ್ಪೆಂಟರ್‌, ದೋಣಿ ತಯಾರಕರು, ಕಮ್ಮಾರರು (ಕತ್ತಿ, ಚೂರಿ ಇತ್ಯಾದಿಗಳನ್ನು ತಯಾರಿಸುವವರು), ಕಬ್ಬಿಣ, ತಾಮ್ರದ ದಿನ ಬಳಕೆಯ ಉತ್ಪನ್ನಗಳ ಉತ್ಪಾದಕರು, ಲೋಹಗಳಿಂದ ಕಲಾಕೃತಿಗಳನ್ನು ತಯಾರಿಸುವ ಕಲಾವಿದರು, ರಸ್ತೆ ಬದಿಯಲ್ಲಿ ಬೀಗಗಳನ್ನು ರಿಪೇರಿ ಮಾಡುವವರು, ಶಿಲ್ಪ ಮತ್ತು ಮೂರ್ತಿಗಳನ್ನು ಕೆತ್ತುವವರು, ಅಕ್ಕ ಸಾಲಿಗರು, ಕುಂಬಾರರು, ರಸ್ತೆ ಬದಿ ಪಾದರಕ್ಷೆಗಳನ್ನು ರಿಪೇರಿ ಮಾಡುವವರು, ಪ್ಲಾಸ್ಟರಿಂಗ್‌ ಹಾಗೂ ಇಟ್ಟಿಗೆ ತಯಾರಕರು, ಬುಟ್ಟಿಗಳನ್ನು ಹೆಣೆಯುವವರು, ಸಾಂಪ್ರದಾಯಿಕ ಆಟಿಕೆಗಳನ್ನು ತಯಾರಿಸುವವರು, ಕ್ಷೌರಿಕರು, ಹೂಮಾಲೆಗಳನ್ನು ತಯಾರಿಸುವವರು, ಧೋಬಿ, ಟೈಲರ್‌, ಮೀನಿನ ಬಲೆಗಳನ್ನು ತಯಾರಿಸುವವರು ಈ ಪಿಎಂ ವಿಶ್ವಕರ್ಮ ಯೋಜನೆಯಡಿ ಸಾಲ ಪಡೆಯಬಹುದು. ಇದು ಸಂಪೂರ್ಣ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ.

3 ಲಕ್ಷ ರೂ. ತನಕ ಸಾಲ: ಈ ಯೋಜನೆಯ ವಿಶೇಷ ಏನೆಂದರೆ, ಅಸಂಘಟಿತ ವಲಯದಲ್ಲಿ ಇದುವರೆಗೆ ಯಾವುದೇ ಸಾಲ ಸಿಗದೆ ಪರದಾಡುತ್ತಿದ್ದ ಕಾರ್ಪೆಂಟರ್‌, ಕುಂಬಾರರು, ಬುಟ್ಟಿಗಳನ್ನು ಹೆಣೆಯುವವರು ಮೊದಲಾದವರು, ಪಿಎಂ ವಿಶ್ವ ಕರ್ಮ ಯೋಜನೆಯ ಅಡಿಯಲ್ಲಿ 3 ಲಕ್ಷ ರೂ. ತನಕ ಕೊಲಾಟರಲ್‌ ಫ್ರೀ ಸಾಲವನ್ನು ಪಡೆಯಬಹುದು. ಅಂದರೆ ಯಾವುದೇ ಅಡಮಾನ ಇಡಬೇಕಾಡ ಅವಶ್ಯಕತೆ ಇಲ್ಲದೆಯೇ ಸಾಲವನ್ನು ಪಡೆದು, ತಮ್ಮ ಬಿಸಿನೆಸ್‌ ಅನ್ನು ವಿಸ್ತರಿಸಬಹುದು. ಆ ಮೂಲಕ ಹೆಚ್ಚು ಆದಾಯ ಮತ್ತು ಲಾಭ ಗಳಿಸಬಹುದು. ಮೊದಲ ಹಂತದಲ್ಲಿ 1 ಲಕ್ಷ ರೂ. ಸಾಲ ಸಿಗಲಿದೆ. ಇದರ ಮರು ಪಾವತಿಯ ಅವಧಿ 18 ತಿಂಗಳು. ಲೋನ್‌ ಅಕೌಂಟ್‌ ಅನ್ನು ಸರಿಯಾಗಿ ನಿರ್ವಹಿಸಿದವರಿಗೆ ಹಾಗೂ ತರಬೇತಿ ಪಡೆದವರಿಗೆ ಎರಡನೇ ಕಂತಿನಲ್ಲಿ 2 ಲಕ್ಷ ರೂ. ತನಕ ಸಾಲ ಸಿಗುತ್ತದೆ. ಇದರ ಮರು ಪಾವತಿಯ ಅವಧಿ 30 ತಿಂಗಳು. ಸಾಲದ ಬಡ್ಡಿ ದರ 5% ಆಗಿದೆ. ಅವಧಿಗೆ ಮುನ್ನವೇ ಸಾಲವನ್ನು ಮರು ಪಾವತಿಸುವವರಿಗೆ ಯಾವುದೇ ದಂಡ ಇರುವುದಿಲ್ಲ.

15 ದಿನಗಳ ತರಬೇತಿ: ಎರಡನೇ ವಿಶೇಷ ಏನೆಂದರೆ ಇಲ್ಲಿ ಕೇವಲ ಸಾಲ ಕೊಟ್ಟು ಕಳಿಸುವುದಿಲ್ಲ. ಫಲಾನುಭವಿಗಳನ್ನು ಉದ್ಯಮಿಗಳಾಗಿ ಬೆಳೆಸುವ ನಿಟ್ಟಿನಲ್ಲಿ 5-7 ದಿನಗಳ ಬೇಸಿಕ್‌ ಟ್ರೈನಿಂಗ್‌ ಹಾಗೂ 15 ದಿನಗಳ ಅಡ್ವಾನ್ಸ್ಡ್‌ ಟ್ರೈನಿಂಗ್‌ ನೀಡಲಾಗುವುದು. ಈ ತರಬೇತಿಯ ಅವಧಿಯಲ್ಲಿ ದಿನಕ್ಕೆ 500 ರೂ. ಸ್ಟೈಫಂಡ್‌ ಕೊಡುತ್ತಾರೆ. ಜತೆಗೆ 15,000 ರೂ. ಮೌಲ್ಯದ ಟೂಲ್‌ ಕಿಟ್‌ ಕೂಡ ಸಿಗಲಿದೆ. ಡಿಜಿಟಲ್‌ ಟ್ರಾನ್ಸಕ್ಷನ್‌ ಮೇಲೆ ಪ್ರತಿ ಟ್ರಾನ್ಸಕ್ಷನ್‌ಗೆ 1 ರೂ. ಸಿಗಲಿದೆ. ಮಾಸಿಕ ಗರಿಷ್ಠ 100 ಟ್ರಾನ್ಸಕ್ಷನ್‌ಗಳಿಗೆ ಇದು ಅನ್ವಯ.

ಮತ್ತೊಂದು ವಿಶೇಷ ಏನೆಂದರೆ ಕರ ಕುಶಲ ಕರ್ಮಿಗಳು ಹಾಗೂ ಕಲಾವಿದರಿಗೆ ಮಾರುಕಟ್ಟೆ ಸಪೋರ್ಟ್‌ ಕೂಡ ಸಿಗಲಿದೆ. ಕ್ವಾಲಿಟಿ ಸರ್ಟಿಫಿಕೇಶನ್‌, ಬ್ರಾಂಡಿಂಗ್‌, ಇ-ಕಾಮರ್ಸ್‌ ವಿಷಯದಲ್ಲಿ ಸಪೋರ್ಟ್‌ ಸಿಗಲಿದೆ. ಪಿಎಂ ವಿಶ್ವಕರ್ಮ ಸರ್ಟಿಫಿಕೇಟ್‌ ಮತ್ತು ಐಡಿ ಕಾರ್ಡ್‌ ಕೂಡ ವಿತರಣೆಯಾಗಲಿದೆ. ನ್ಯಾಶನಲ್‌ ಕಮಿಟಿ ಫಾರ್‌ ಮಾರ್ಕೆಟಿಂಗ್‌ (ಎನ್‌ ಸಿಎಂ) ವತಿಯಿಂದ ಫಲಾನುಭವಿಗಳಿಗೆ ಬ್ರಾಂಡಿಂಗ್‌ ಮತ್ತು ಮಾರ್ಕೆಟಿಂಗ್‌ ಸಪೋರ್ಟ್‌ ಸಿಗಲಿದೆ. ಜಿಇಎಂ, ಓಎನ್‌ಡಿಸಿ, ಖಾದಿ ಇಂಡಿಯಾ, ಎಂಎಸ್‌ಎಂಇ ಮಾರ್ಟ್‌ ಇತ್ಯಾದಿಗಳ ಮೂಲಕ ಮಾರುಕಟ್ಟೆ ನೆರವು ಸಿಗಲಿದೆ.

ಸಾಂಪ್ರದಾಯಿಕ ಬಳುವಳಿಯಾಗಿ ಬಂದಿರುವ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವರು, ಕೈಗಳು ಹಾಗೂ ಸಲಕರಣೆಗಳನ್ನು ಬಳಸಿ ಕಸುಬುಗಳಲ್ಲಿ ಸಕ್ರಿಯರಾದವರು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು. 18 ವರ್ಷ ಮೇಲ್ಪಟ್ಟವರಾಗಿರಬೇಕು. ಈ ಯೋಜನೆಯಡಿ ಪ್ರಯೋಜನ ಪಡೆಯಲು ಬಯಸುವವರು www. pmvishwakarma.gov.in ವೆಬ್‌ ಪೋರ್ಟಲ್‌ನಲ್ಲಿ ತಮ್ಮ ಹೆಸರು ಮತ್ತು ವಿವರಗಳನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ: Money Guide: ಹೋಮ್‌ಲೋನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

ಇನ್ನು ಕೆಲವು ನಿಯಮಗಳನ್ನು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ಪಿಎಂ ವಿಶ್ವಕರ್ಮ ಸ್ಕೀಮ್‌ಗೆ ಅರ್ಜಿ ಸಲ್ಲಿಸಬಹುದು. ಸರ್ಕಾರಿ ನೌಕರರು ಅಥವಾ ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ಸರ್ಕಾರಿ ಹುದ್ದೆಯಿಂದ್ದರೆ ಅಂಥ ಕುಟುಂಬದವರು ಅರ್ಜಿ ಸಲ್ಲಿಸುವಂತಿಲ್ಲ. ಈಗಾಗಲೇ ಪಿಎಂಇಜಿಪಿ, ಪಿಎಂ ಸ್ವಾನಿಧಿ, ಮುದ್ರಾ ಲೋನ್‌ ಪಡೆದಿರುವವರು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ. ಹೀಗಿದ್ದರೂ ಸ್ವಾನಿಧಿ ಅಥವಾ ಮುದ್ರಾ ಸಾಲವನ್ನು ಮರು ಪಾವತಿ ಮಾಡಿದವರು ಪಿಎಂ ವಿಶ್ವಕರ್ಮ ಸ್ಕೀಮ್‌ ಅಡಿಯಲ್ಲಿ ಸಾಲ ಪಡೆಯಬಹುದು.

Exit mobile version