ಬೆಂಗಳೂರು: ದೇಶದ ಮೂರನೇ ಬ್ಯುಸಿ ಏರ್‌ಪೋರ್ಟ್ ಎನಿಸಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 10ರಂದು ಎರಡನೇ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ಇದರ ಆವರಣದಲ್ಲೇ ನಿರ್ಮಾಣವಾಗಿರುವ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಕೂಡ ಪ್ರಧಾನಿಯವರು (ವಿಸ್ತಾರ Explainer) ಅನಾವರಣಗೊಳಿಸಲಿದ್ದಾರೆ.
ಬೆಂಗಳೂರು ನಗರದ ಉತ್ತರಕ್ಕೆ 30 ಕಿ.ಮೀ ದೂರದಲ್ಲಿರುವ ದೇವನಹಳ್ಳಿಯಲ್ಲಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏಷ್ಯಾದಲ್ಲೇ 29ನೇ ದೊಡ್ಡ ಏರ್‌ಪೋರ್ಟ್ ಎನ್ನಿಸಿದೆ. 4,000 ಎಕರೆ ಪ್ರದೇಶಗಳಲ್ಲಿ ವ್ಯಾಪಿಸಿದೆ. ಪ್ರಯಾಣಿಕರು ಮತ್ತು ಬಂದು ಹೋಗುವ ವಿಮಾನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೊಸ ಟರ್ಮಿನಲ್ ರಚನೆಯಾಗಿದೆ. ಇಷ್ಟು ಬ್ಯುಸಿ ಏರ್‌ಪೋರ್ಟ್ ಆಗಿದ್ದರೂ, 2019ರ ತನಕ ಒಂದೇ ರನ್ ವೇ ಇತ್ತು. ಎರಡನೇ ರನ್‌ವೇ ಆಗಿದ್ದರೂ, ಪ್ರಯಾಣಿಕರ ಸಾಂದ್ರತೆ ಹೆಚ್ಚುತ್ತಿರುವುದರಿಂದ ಎರಡನೇ ಟರ್ಮಿನಲ್ ನಿರ್ಮಾಣವಾಗಿದೆ.
ಒಟ್ಟು 13,000 ಕೋಟಿ ರೂ. ವೆಚ್ಚ
ಟರ್ಮಿನಲ್ 2 ಅಥವಾ T2 ಅನ್ನು 13,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಒಟ್ಟು ಎರಡು ಹಂತಗಳಲ್ಲಿ ನಿರ್ಮಾಣವಾಗುತ್ತಿದೆ. 2.54 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ಟರ್ಮಿನಲ್ 2ರ ಮೊದಲ ಹಂತ ನಿರ್ಮಾಣವಾಗುತ್ತಿದೆ. ಇದನ್ನೇ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರು ಟರ್ಮಿನಲ್ 2 ಅನ್ನು ಬಳಸಬಹುದು.
ಎರಡನೇ ಹಂತ 4.41 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ಮುಂದೆ ನಿರ್ಮಾಣವಾಗಲಿದೆ. ಎರಡನೇ ಟರ್ಮಿನಲ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾರ್ಷಿಕ ಸಾಮರ್ಥ್ಯ 2.5 ಕೋಟಿ ಪ್ರಯಾಣಿಕರ ನಿರ್ವಹಣೆಗೆ ಏರಿಕೆಯಾಗಲಿದೆ. ಕೋವಿಡ್-19ಗೆ ಮುನ್ನ ಭಾರತದ ಮೂರನೇ ಅತಿ ದೊಡ್ಡ ಏರ್‌ಪೋರ್ಟ್ ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿತ್ತು.
ಅತ್ಯಾಧುನಿಕ ರನ್‌ವೇ: ಎರಡನೇ ಟರ್ಮಿನಲ್‌ನಲ್ಲಿ ಮೇಲ್ದರ್ಜೆಯ CAT IIIB ರನ್‌ವೇ ನಿರ್ಮಾಣವಾಗಿದೆ. ಇದರಲ್ಲಿ ಪ್ರತಿಕೂಲ ಹವಾಮಾನದ ಸಂದರ್ಭದಲ್ಲೂ ವಿಮಾನವನ್ನು ನಿರ್ವಹಿಸಬಹುದು.
ಹೆರಿಟೇಜ್ ಪಾರ್ಕ್ ನಿರ್ಮಾಣ: ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರ ಗೌರವಾರ್ಥ 23 ಎಕರೆ ಪ್ರದೇಶದಲ್ಲಿ ಹೆರಿಟೇಜ್ ಪಾರ್ಕ್ ಕೂಡ ನಿರ್ಮಾಣವಾಗುತ್ತಿದೆ. ವರದಿಗಳ ಪ್ರಕಾರ 85 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣವಾಗುತ್ತಿದೆ. ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಇದು ಬಿಂಬಿಸಲಿದೆ. ಎರಡನೇ ಟರ್ಮಿನಲ್‌ನಲ್ಲಿ ಒಳಾಂಗಣ ಉದ್ಯಾನವೂ ಇರಲಿದೆ. ಶಾಪಿಂಗ್ ಏರಿಯಾ ಕೂಡ ಇರಲಿದೆ.
ಒಳಾಂಗಣ ಸೌಕರ್ಯಗಳು ಹಲವು
ಚೆಕ್ ಇನ್ ಕೌಂಟರ್‌ಗಳು, ಸೆಕ್ಯುರಿಟಿ ಚೆಕ್ ಲೇನ್ಸ್, ಎಮಿಗ್ರೇಶನ್ ಕೌಂಟರ್ಸ್, ಕಸ್ಟಮ್ಸ್ ಹ್ಯಾಂಡ್ ಬ್ಯಾಗ್ ತಪಾಸಣೆ ವ್ಯವಸ್ಥೆ, ಬ್ಯಾಗೇಕ್ ಕ್ಲೇಮ್ ಬೆಲ್ಟ್ಸ್, ಕಸ್ಟಮ್ಸ್ ರೆಡ್ ಲೇನ್ ಇನ್ಸ್‌ಪೆಕ್ಷನ್ ಕೌಂಟರ್‌ಗಳು ಇರಲಿವೆ. ಅರ್ಥ್ ವಾಲ್ಸ್, ವಾಟರ್ ಫಾಲ್ಸ್ ಜನರನ್ನು ಆಕರ್ಷಿಸಲಿದೆ. ಒಳಾಂಗಣದ ಹಸಿರೀಕರಣವನ್ನು ಇಲ್ಲಿ ಗಮನಿಸಬಹುದು. ಮೊದಲ ಟರ್ಮಿನಲ್‌ಗೆ ಸಂಪರ್ಕ ಕೂಡ ಇರಲಿದೆ. ಬಹು ಅಂತಸ್ತುಗಳ ಕಾರು ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿದೆ. ಏರ್‌ಪೋರ್ಟ್ ಹೋಟೆಲ್ ಕೂಡ ವ್ಯವಸ್ಥೆಯಾಗಿದೆ. ಹೊಸ ಟರ್ಮಿನಲ್ ಅನ್ನು ಸ್ಕಿಡ್‌ಮೋರ್, ಓವಿಂಗ್ಸ್ & ಮೆರಿಲ್ ವಿನ್ಯಾಸಗೊಳಿಸಿದೆ. ಲಾರ್ಸನ್ &ಟೂಬ್ರೊ ನಿರ್ಮಿಸುತ್ತಿದೆ.
ಪ್ರಯಾಣಿಕರಿಗೆ ಅನುಕೂಲವೇನು?
ಟರ್ಮಿನಲ್ 2 ನಿರ್ಮಾಣದಿಂದ ವಿಮಾನಗಳ ಆಗಮನ-ನಿರ್ಗಮನಗಳನ್ನು ನಿರ್ವಹಿಸುವ ಬೆಂಗಳೂರು ಏರ್‌ಪೋರ್ಟ್‌ನ ಸಾಮರ್ಥ್ಯ ಹೆಚ್ಚಲಿದೆ. ಪ್ರಸ್ತುತ ದೇಶದ ಮೂರನೇ ಅತ್ಯಂತ ಬ್ಯುಸಿ ಏರ್‌ಪೋರ್ಟ್ ಎನ್ನಿಸಿರುವುದರಿಂದ, ವಿಸ್ತರಣೆ ಅಗತ್ಯವಾಗಿದೆ. ಏರ್‌ಪೋರ್ಟ್‌ನಲ್ಲಿ ಇಮಿಗ್ರೇಶನ್ ವಿಭಾಗದಲ್ಲಿ ಸರದಿಯ ಒತ್ತಡ ಕಡಿಮೆಯಾಗಲಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ, ಬೇಡಿಕೆಗೆ ತಕ್ಕಂತೆ ಸುಸಜ್ಜಿತ ಹಾಗೂ ವಿಶಾಲ ವಿಮಾನ ನಿಲ್ದಾಣ ಅನಿವಾರ್ಯ.