Site icon Vistara News

Bank FD vs KVP : ಬ್ಯಾಂಕ್‌ ಠೇವಣಿ, ಕಿಸಾನ್‌ ವಿಕಾಸ್‌ ಪತ್ರದಲ್ಲಿ ನಿಮ್ಮ ಹಣ ಡಬಲ್‌ ಆಗಲು ಎಷ್ಟು ವರ್ಷ ಬೇಕು?

cash

ದೀರ್ಘಕಾಲೀನ ಹಾಗೂ ಸುರಕ್ಷಿತ ಹೂಡಿಕೆಗೆ ಬ್ಯಾಂಕ್‌ಗಳಲ್ಲಿನ ನಿಶ್ಚಿತ ಠೇವಣಿಗಳು ಹಾಗೂ ಕಿಸಾನ್‌ ವಿಕಾಸ್‌ ಪತ್ರ (Kisan Vikas Patra) ಉತ್ತಮ ಸಾಧನಗಳಾಗಿದೆ. ಆದರೆ ಬ್ಯಾಂಕ್‌ ಠೇವಣಿಗಳಲ್ಲಿ ಅಥವಾ ಅಂಚೆ ಇಲಾಖೆಯಲ್ಲಿ ಸಿಗುವ ಸಣ್ಣ ಉಳಿತಾಯ ಯೋಜನೆಯಾದ ಕಿಸಾನ್‌ ವಿಕಾಸ್‌ ಪತ್ರದಲ್ಲಿ ಹೂಡಿಕೆ ಮಾಡುವುದೇ ಎಂಬ ಗೊಂದಲ ಇದೆಯೇ? ಹಾಗಾದರೆ ಇಲ್ಲಿದೆ ವಿವರ. ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌, ಪಿಎನ್‌ಬಿಯಲ್ಲಿ ನಿಶ್ಚಿತ ಠೇವಣಿಯ ಬಡ್ಡಿ ದರಗಳು ಏರಿಕೆಯಾಗಿವೆ. ಸರ್ಕಾರ ಕೂಡ ಪ್ರಸಕ್ತ ತ್ರೈಮಾಸಿಕದಲ್ಲಿ ಕಿಸಾನ್‌ ವಿಕಾಸ್‌ ಪತ್ರದ ಬಡ್ಡಿ ದರವನ್ನು ಹೆಚ್ಚಿಸಿದೆ. ಹಾಗಾದರೆ 10 ವರ್ಷಗಳಲ್ಲಿ ಬ್ಯಾಂಕ್‌ ಎಫ್‌ಡಿಗಳು ಮತ್ತು ಕಿಸಾನ್‌ ವಿಕಾಸ ಪತ್ರದಲ್ಲಿನ ಹೂಡಿಕೆ ಎಷ್ಟು ಹೆಚ್ಚಳವಾಗುತ್ತದೆ ಎಂಬುದನ್ನು ನೋಡೋಣ.

ಕಿಸಾನ್‌ ವಿಕಾಸ ಪತ್ರದಲ್ಲಿ ಹೂಡಿಕೆಗೆ ಆದಾಯ ಎಷ್ಟು?

ಕಿಸಾನ್‌ ವಿಕಾಸ ಪತ್ರದಲ್ಲಿ ನೀವು 1,00,000 ರೂ. ಹೂಡಿದರೆ 10 ವರ್ಷಗಳ ಬಳಿಕ 2,00,000 ರೂ. ಪಡೆಯಬಹುದು. ಅಂದರೆ ನಿಮ್ಮ ಹಣ ಆಗ ಇಮ್ಮಡಿಯಾಗುವುದು. (Kisan Vikas Patra) ಕಿಸಾನ್‌ ವಿಕಾಸ ಪತ್ರವು ಜನಪ್ರಿಯವಾದ ಸಣ್ಣ ಉಳಿತಾಯ ಯೋಜನೆಯಾಗಿದೆ. ಅಂಚೆ ಇಲಾಖೆ ಕಚೇರಿಯಲ್ಲಿ ಪಡೆಯಬಹುದು. 2023ರ ಜನವರಿ-ಮಾರ್ಚ್‌ ಅವಧಿಯಲ್ಲಿ 7.2% ಬಡ್ಡಿ ನಿಗದಿಯಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ. ಕೆವಿಪಿಯಲ್ಲಿ ಸಿಗುವ ಬಡ್ಡಿ ಆದಾಯ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿಲ್ಲ. ಆದರೆ ಇದಕ್ಕೆ ಟಿಡಿಎಸ್‌ನಿಂದ ಮುಕ್ತಿ ಇದೆ.

ಎಸ್‌ಬಿಐ (SBI) :

ಎಸ್‌ಬಿಐ 10 ವರ್ಷ ಅವಧಿಗೆ 6.8% ಬಡ್ಡಿ ನೀಡುತ್ತದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಡಿಪಾಸಿಟ್‌ಗೆ ಇದು ಅನ್ವಯ. ಎಸ್‌ಬಿಐ ಎಫ್‌ಡಿ ಕ್ಯಾಲ್ಕ್ಯುಲೇಟರ್‌ ಪ್ರಕಾರ, ನೀವು 1 ಲಕ್ಷ ರೂ. ಹೂಡಿದರೆ 10 ವರ್ಷಗಳ ಬಳಿಕ 1,90,555 ರೂ. ಗಳಿಸಬಹುದು.

ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank):

ಎಚ್‌ಡಿಎಫ್‌ಸಿ ಬ್ಯಾಂಕ್‌ ಎಫ್‌ಡಿ ಬಡ್ಡಿ ದರ 7% ಇದ್ದು, 2 ಕೋಟಿ ರೂ.ಗಿಂತ ಕೆಳಗಿನ ಮೊತ್ತಕ್ಕೆ ಅನ್ವಯ. 1 ಲಕ್ಷ ರೂ. ಹೂಡಿದರೆ 10 ವರ್ಷಗಳಲ್ಲಿ 2,00,160 ರೂ.ಗೆ ವೃದ್ಧಿಸುತ್ತದೆ.

ಪಿಎನ್‌ಬಿ (PNB):

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗೆ 10 ವರ್ಷಗಳ ಅವಧಿಗೆ 6.5% ಬಡ್ಡಿ ನೀಡುತ್ತದೆ. 1,00,000 ರೂ. ಹೂಡಿದರೆ 10 ವರ್ಷಗಳ ಬಳಿಕ 1,90,556 ರೂ. ಸಿಗುತ್ತದೆ.

ಬ್ಯಾಂಕ್‌ ಎಫ್‌ಡಿ ಮೇಲಿನ ತೆರಿಗೆ ಲೆಕ್ಕಾಚಾರ:

ನೀವು ಹೂಡಿಕೆ ಮಾಡುವ ಎಫ್‌ಡಿಯಿಂದ ಸಿಗುವ ಬಡ್ಡಿ 40,000 ರೂ. ದಾಟಿದರೆ ಪ್ಯಾನ್‌ ಇರುವವರು 10% ಟಿಡಿಎಸ್‌ ಕೊಡಬೇಕಾಗುತ್ತದೆ. ಅಂದರೆ 4,000 ರೂ. ಟಿಡಿಎಸ್‌ ಆಗುತ್ತದೆ. ಪ್ಯಾನ್‌ ಇಲ್ಲದಿದ್ದರೆ 20% ಟಿಡಿಎಸ್‌ ನೀಡಬೇಕಾಗುತ್ತದೆ.

Exit mobile version