ಬೆಂಗಳೂರು: ನನ್ನ ಬಳಿ ಬಂಡವಾಳವೇ ಇಲ್ಲ. ಶ್ರೀಮಂತನಾಗುವುದು ಅಸಾಧ್ಯ ಎಂದು ನಂಬಿರುವವರೇ ಹೆಚ್ಚು. ಅದರಲ್ಲೂ ಮಾಲೀಕರ ಕೈ ಕೆಳಗೆ ದುಡಿದು ಅದನ್ನೇ ರೂಢಿ ಮಾಡಿಕೊಂಡವರಿಗೆ ಶ್ರೀಮಂತನಾಗುವುದು ಎಂದರೆ ಮಿಷನ್ ಇಂಪಾಸಿಬಲ್. ವಾಸ್ತವದಲ್ಲಿ ಶ್ರೀಮಂತರು ಮಾತ್ರ ಇನ್ನಷ್ಟು ಶ್ರೀಮಂತರಾಗುತ್ತಾರೆ ಎಂಬುದು ಶುದ್ಧ ಸುಳ್ಳು. ಶೂನ್ಯದಿಂದಲೂ ಸಂಪಾದನೆ ಮಾಡಿಕೊಂಡು ಸಿರಿವಂತನಾಗುವುದಕ್ಕೆ ಸಾಧ್ಯವಿದೆ ಎಂಬುವ ನೂರಾರು ಉದಾಹಣೆಗಳು ನಮ್ಮ ಮುಂದಿವೆ. ವೆಲ್ತ್-ಎಕ್ಸ್ ಸಂಸ್ಥೆಯು 2019ರಲ್ಲಿ ಮಾಡಿದ ವರದಿ ಪ್ರಕಾರ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ (248 ಕೋಟಿ ರೂಪಾಯಿಗೂ ಅಧಿಕ ಸಂಪತ್ತು ಹೊಂದಿರುವವರು) ಶೇಕಡಾ 67.7% ಮಂದಿ ಶೂನ್ಯದಿಂದ ಆರಂಭಿಸಿ ಧನಿಕರಾದವರು. ಇನ್ಯಾಕೆ ತಡ, ನೀವೂ ಶ್ರೀಮಂತರಾಗುವ ದಾರಿ ಕಂಡುಕೊಳ್ಳಿ. ಅದಕ್ಕೆ ಬೇಕಾಗುವ ಉಪಾಯಗಳು ಇಲ್ಲಿವೆ.
ಹಣದ ಕುರಿತು ಮೊದಲು ಅರಿಯಿರಿ
ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗಬೇಕಾದರೆ ನಮ್ಮ ಮನಸ್ಥಿತಿ ಮೊದಲು ಬದಲಾಗಬೇಕು. ಅಂದರೆ ಹಣ ಮಾಡಬೇಕು ಎಂದು ಅನಿಸಿದಾಗ ಅದರ ಕುರಿತು ನಿಮ್ಮ ತಿಳಿವಳಿಕೆ ಹೆಚ್ಚಬೇಕು. ಹೀಗಾಗಿ ಶ್ರೀಮಂತರಾಗುವ ಮೊದಲ ಹೆಜ್ಜೆ ಎಂದರೆ ಆರ್ಥಿಕ ಶಿಕ್ಷಣ ಪಡೆಯುವುದು. ನಿಮ್ಮ ಆದಾಯ, ನಿಮ್ಮ ವೆಚ್ಚಗಳು, ನಿವ್ವಳ ಮೌಲ್ಯ, ಹೂಡಿಕೆ ಮೇಲಿನ ಆದಾಯ, ಪರೋಕ್ಷ ಆದಾಯ ಮತ್ತು ಆರ್ಥಿಕ ಸ್ವಾತಂತ್ರ್ಯದಂತಹ ವಿಚಾರಗಳನ್ನು ಕಲಿತುಕೊಳ್ಳಬೇಕು.
ಆರ್ಥಿಕ ಶಿಕ್ಷಣಕ್ಕಾಗಿ ಪುಸ್ತಕಗಳನ್ನು ಓದಬೇಕು ಮತ್ತು ಪಾಡ್ಕಾಸ್ಟ್ಗಳನ್ನು ಮತ್ತು ಸಂದರ್ಶನಗಳನ್ನು ಆಲಿಸಬೇಕು. ಅಗತ್ಯ ಕೋರ್ಸ್ಗಳನ್ನು ತೆಗೆದುಕೊಳ್ಳಬೇಕು. ಉಳಿದೆಲ್ಲ ಕಲಿಕೆಯಂತೆ ಆರ್ಥಿಕ ಶಿಕ್ಷಣವೂ ನಿರಂತರ ಚಟುವಟಿಕೆಯಾಗಿರಬೇಕು.
ಇಲ್ಲಿ ಗಮನದಲ್ಲಿಡಬೇಕಾದ ವಿಷಯ ಏನೆಂದರೆ ತಪ್ಪು ಹಾದಿಗೆ ಎಳೆಯುವವರ ಬಗ್ಗೆ ಎಚ್ಚರ ವಹಿಸಲೇಬೇಕು. ಬೋಗಸ್ ಕಂಪನಿಗಳು ಮತ್ತು ಸುಳ್ಳು ಮಾಹಿತಿ ನೀಡುವವರ ಬಗ್ಗೆ ಕಟ್ಟೆಚ್ಚರ ಇರಬೇಕು . ನಿಜವಾದ ಮಾಹಿತಿಯನ್ನು ಒದಗಿಸುವ ಮತ್ತು ವಿಶ್ವಾಸಾರ್ಹ ಮತ್ತು ಯಶಸ್ವಿ ಹೂಡಿಕೆದಾರರು, ಹಣಕಾಸು ಸಲಹೆಗಾರರನ್ನು ಮಾತ್ರ ಅನುಸರಿಸಬೇಕು.
ನಿಯಮಿತ ಆದಾಯದ ಮೂಲಕ ಕಂಡುಕೊಳ್ಳಬೇಕು
ನಿಯಮಿತ ಆದಾಯದ ಮೂಲವಿಲ್ಲದೆ ಸಂಪತ್ತನ್ನು ನಿರ್ಮಿಸುವುದು ಕಷ್ಟ. ಹಣವನ್ನು ಉಳಿಸದೆ ಹೂಡಿಕೆ ಮಾಡಲು ಸಾಧ್ಯವಿಲ್ಲ ಮತ್ತು ನಿರಂತರ ಆದಾಯವಿಲ್ಲದೆ ಹಣವನ್ನು ಉಳಿಸಲೂ ಸಾಧ್ಯವಿಲ್ಲ. ಹಾಗೆಂದು ಏಕಾಏಕಿ ದುಡ್ಡು ಮಾಡುವ ಆಮಿಷ ತೋರುವ ಪೋಂಜಿ ಸ್ಕೀಮ್ಗಳು ಅಥವಾ ಬೆಟ್ಟಿಂಗ್ ಕಡೆಗೆ ವಾಲಬಾರದು. ಸುಸ್ಥಿರ ಸಂಪತ್ತು ಹಾಗೂ ದೀರ್ಘಾವಧಿಯಲ್ಲಿ ಮೌಲ್ಯ ಸೃಷ್ಟಿಸುವ ಯೋಜನೆಗಳನ್ನು ಪತ್ತೆ ಹಚ್ಚಿ ಹೂಡಿಕೆ ಮಾಡಬೇಕು.
ಉದಾಹರಣೆಗೆ, ನೀವು ಸಣ್ಣ ವ್ಯಾಪಾರಿಯಾಗಿದ್ದರೆ ದೀರ್ಘಕಾಲದಲ್ಲಿ ಮೌಲ್ಯ ಹೆಚ್ಚಿಸುವತ್ತ ಕಡೆಗೆ ಗಮನ ಹರಿಸಿ. ನಿಮ್ಮ ವ್ಯಾಪಾರದ ಮೌಲ್ಯವನ್ನು ಹೆಚ್ಚಿಸುತ್ತಾ ಹೋದಂತೆ ಸಂಪತ್ತು ಬರುತ್ತದೆ ಎಂಬುದು ಆರ್ಥಿಕ ಪರಿಣತರ ಅಭಿಪ್ರಾಯ. ಅಂದರೆ ಇತರರಿಗಿಂತ ಹೆಚ್ಚು ಉತ್ತಮ, ಕಡಿಮೆ ವೆಚ್ಚದ, ವೇಗದ ಮತ್ತು ಸುಲಭವಾಗಿ ದೊರೆಯುವ ವ್ಯಾಪಾರಕ್ಕೆ ಹೂಡಿಕೆ ಮಾಡಬೇಕು.
ಆಯವ್ಯಯ (ಬಜೆಟ್) ರಚಿಸಿ
ಶೂನ್ಯದಿಂದ ಸಂಪತ್ತು ಮಾಡಬೇಕಾದರೆ ಮೊದಲು ಉತ್ತಮ ಬಜೆಟ್ ರೆಡಿ ಮಾಡಿಕೊಳ್ಳಬೇಕು. ನಿಯಮಿತ ಆದಾಯದ ಮೂಲವನ್ನು ಬಳಸಿಕೊಂಡು ಹಣವನ್ನು ಹೇಗೆ ಖರ್ಚು ಮಾಡುತ್ತಿದ್ದೀರಿ ಎಂಬುದನ್ನು ಅರಿತುಕೊಳ್ಳಬೇಕು. ಮಾಸಿಕ ಆಯವ್ಯಯ ರಚನೆ ಉತ್ತಮ. ನಿರೀಕ್ಷಿತ ಆದಾಯ ಮತ್ತು ಅಂದಾಜು ವೆಚ್ಚವನ್ನು ಸಮತೋಲನದಲ್ಲಿಡುವುದಕ್ಕೆ ಇದು ಬೇಕೇ ಬೇಕು. ಬಜೆಟ್ ಇಲ್ಲದ ಜೀವನ ದಿಕ್ಸೂಚಿಯಿಲ್ಲದ ನೌಕೆಯಂತೆ. ತಪ್ಪು ಲೆಕ್ಕದಲ್ಲಿ ಕಳೆದು ಹೋಗುವುದು ಗ್ಯಾರಂಟಿ.
ಜನಪ್ರಿಯ ಬಜೆಟ್ ತಂತ್ರವೆಂದರೆ 50:30:20 ಸೂತ್ರ. ಇಲ್ಲಿ ಆದಾಯದ 50% ಅಗತ್ಯ ವೆಚ್ಚಗಳಿಗೆ (ಬಾಡಿಗೆ, ಅಡಮಾನ, ಆಹಾರ, ಆರೋಗ್ಯ ರಕ್ಷಣೆ), 30% ಶಾಪಿಂಗ್, ರಜೆ, ಮನರಂಜನೆಯಂತಹ ಅಗತ್ಯವಲ್ಲದ ವಸ್ತುಗಳಿಗೆ ಮತ್ತು 20% ಉಳಿತಾಯ ಮತ್ತು ಹೂಡಿಕೆಗೆ ಹೋಗಬೇಕು. ಈ ಸೂತ್ರವನ್ನು ಯಾವತ್ತೂ ಮುರಿಯಬಾರದು. ಹೆಚ್ಚಾಯಿತು ಎಂದಾದರೆ ತಕ್ಷಣವೇ ನಿಯಂತ್ರಣಕ್ಕೆ ತರಬೇಕು. ಅನಗತ್ಯ ಮತ್ತು ತಪ್ಪಿಸಬಹುದಾದ ವೆಚ್ಚಗಳನ್ನು ಗುರುತಿಸಿ ಸಂಪತ್ತು ಕ್ರೋಡೀಕರಣ ಮಾಡಬಹುದು.
ಸಾಕಷ್ಟು ವಿಮೆಯನ್ನು ಹೊಂದಿರಿ (ಆದರೆ ಅತಿಯಾಗಿ ವಿಮೆ ಮಾಡಬೇಡಿ)
ಬಜೆಟ್ನಲ್ಲಿ ವಿಮೆಗಾಗಿ ಹಣ ಮೀಸಲಿಡಲೇಬೇಕು. ನಿಮಗೆ ಮತ್ತು ನಿಮ್ಮ ಸೊತ್ತುಗಳಿಗೆ (ಆಸ್ತಿಗಳು, ಕಾರುಗಳು, ಇತ್ಯಾದಿ) ವಿಮೆ ಮಾಡುವುದರಿಂದ ಅನಪೇಕ್ಷಿತ ಸಂದರ್ಭದಲ್ಲಿ ಭಾರಿ ನಷ್ಟ ಎದುರಾಗುವುದನ್ನು ತಪ್ಪಿಸಬಹುದು. ಕನಿಷ್ಠ ಪಕ್ಷ, ನೀವು ಆರೋಗ್ಯ ವಿಮೆಯನ್ನಾದರೂ ಹೊಂದಿರಬೇಕು. ದುರದೃಷ್ಟಕರ ಸಂದರ್ಭದಲ್ಲಿ ನೀವು ಸಾಲಗಾರರಾಗುವುದನ್ನು ಇದು ತಪ್ಪಿಸುತ್ತದೆ. ಮನೆ ಮತ್ತು ಕಾರನ್ನು ಹೊಂದಿದ್ದರೆ ಮನೆ ಮಾಲೀಕತ್ವ ಮತ್ತು ವಾಹನ ವಿಮೆ ಮಾಡಿಸಿ. ಅವಲಂಬಿತರ ಸಂಖ್ಯೆ ಹೆಚ್ಚಿದ್ದರೆ ಟರ್ಮ್ ಇನ್ಶೂರೆನ್ಸ್ ಮಾಡಿಸಿ.
ಇಲ್ಲೊಂದು ಕಿವಿ ಮಾತು. ಅತಿಯಾದ ವಿಮೆ ಮಾಡಬೇಡಿ. ನಿಷ್ಪ್ರಯೋಜಕ ವಿಮೆಗಳು ಮಾರುಕಟ್ಟೆಯಲ್ಲಿವೆ. ಸೂಕ್ತ ಕಾರಣವಿಲ್ಲದೇ ಅದನ್ನು ಪಡೆಯಬೇಡಿ. ವಿಮೆ ಖರೀದಿಸುವುದರಿಂದ ನಿಮ್ಮ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಅದು ನಿಮ್ಮ ಜೀವನವನ್ನು ಬದಲಾಯಿಸದಂತೆ ತಡೆಯುತ್ತದೆ.
ಹೆಚ್ಚಿನ ಉಳಿತಾಯ ಅಭ್ಯಾಸ ಮಾಡಿ
50:30:20 ನಿಯಮವು ಉತ್ತಮವಾಗಿದ್ದರೂ ಇನ್ನೂ ಹೆಚ್ಚಿನದನ್ನು ಉಳಿಸುವುದರಿಂದಲೂ ಅನುಕೂಲವಿದೆ. ಸಂಪತ್ತು ಮಾಡಬೇಕು ಎಂದು ಅನಿಸಿದರೆ ನಿಮ್ಮ ಬಜೆಟ್ನಲ್ಲಿ ಕಡಿತ ಮಾಡಬಹುದಾದ ವೆಚ್ಚವನ್ನು ಕಂಡುಕೊಳ್ಳಬೇಕು. ಅಲ್ಲದೆ ಉಳಿತಾಯದ ಪ್ರಮಾಣ ಹೆಚ್ಚಿಸಬೇಕು. ಅಂದರೆ ಮಾಸಿಕ ವೇತನದ ದೊಡ್ಡ ಪಾಲನ್ನು ಉಳಿತಾಯದ ಕಡೆಗೆ ಮೀಸಲಿಟ್ಟರೆ ಹೆಚ್ಚು ಅನುಕೂಲ. ನಿಮ್ಮ ಆದಾಯದ 60% ರಿಂದ 80% ನಷ್ಟು ಉಳಿಸಬೇಕು ಎಂದಾರೆ ವೆಚ್ಚಕ್ಕೆ ದೊಡ್ಡ ಗಾತ್ರದ ಕತ್ತರಿ ಹಾಕಬೇಕು.
ಖರ್ಚು ಕಡಿಮೆ ಮಾಡುವ ತಂತ್ರ ಇಲ್ಲಿದೆ
- ಸಾಧ್ಯವಾದಷ್ಟು ಮನೆಯಲ್ಲಿ ಅಡುಗೆ ಮಾಡಿ ಮತ್ತು ಅಗತ್ಯಕ್ಕೆ ತಕ್ಕಷ್ಟು ಮಾತ್ರ ದಿನಸಿ ವಸ್ತುಗಳನ್ನು ಖರೀದಿಸಿ
- ರೆಸ್ಟೋರೆಂಟ್ ಬಜೆಟ್ ಅನ್ನು ಕಡಿಮೆ ಮಾಡಿ. ರಿಯಾಯಿತಿಗಳ ಲಾಭವನ್ನು ಪಡೆಯಲು ಆಹಾರ ವಿತರಣಾ ಅಪ್ಲಿಕೇಶನ್ ಗಳನ್ನು ಬಳಸಿ
- ಯುಟಿಲಿಟಿ (ಕರೆಂಟ್, ಗ್ಯಾಸ್) ಬಿಲ್ಗಳನ್ನು ಕಡಿಮೆ ಮಾಡಿ.
- ಅನಗತ್ಯ ಶಾಪಿಂಗ್ ಬೇಡ. ಅನಿವಾರ್ಯವಾದರೆ ಮಿತಿ ಇರಲಿ.
- ನಿಮ್ಮ ಮನೆ ಬಾಡಿಗೆ ನಿಮ್ಮ ಆದಾಯದ 30% ಕ್ಕಿಂತ ಹೆಚ್ಚಿದ್ದರೆ ಮನೆಯನ್ನು ಬದಲಾಯಿಸಿ.
- ನಿಮ್ಮ ಅಡಮಾನದ ಮೇಲಿನ ಬಡ್ಡಿಯನ್ನು ಮರುಪರಿಶೀಲಿಸಿ
ತುರ್ತು ನಿಧಿಯನ್ನು ನಿರ್ಮಿಸಿ
ತುರ್ತು ನಿಧಿಯು ಸ್ವಯಂ-ಧನಸಹಾಯದ ವಿಮೆಯಂತೆ. ಇದು ಕಾರು ರಿಪೇರಿ ಮತ್ತು ಉದ್ಯೋಗ ನಷ್ಟ ಅಥವಾ ಸಾಂಕ್ರಾಮಿಕ-ಪ್ರೇರಿತ ಲಾಕ್ಡೌನ್ನಂತ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಅನುಕೂಲಕರ. ಕಷ್ಟಕರ ಸನ್ನಿವೇಶಗಳನ್ನು ಎದುರಿಸಲು ತುರ್ತು ನಿಧಿ ಎತ್ತಿಟ್ಟುಕೊಳ್ಳಬೇಕು. ತುರ್ತು ನಿಧಿಯು ನಿಮ್ಮ ಮಾಸಿಕ ವೆಚ್ಚದ ಮೊತ್ತವು ಮೂರರಿಂದ ಆರು ತಿಂಗಳವರೆಗೆ ಇರಬೇಕು. ಆ ನಿಧಿಗಳು ಉಳಿತಾಯ ಖಾತೆಯಲ್ಲಿರಬೇಕು ಹಾಗೂ ಸುಲಭದಲ್ಲಿ ಕೈಗೆ ಸಿಗುವಂತಾಗಬೇಕು. ತುರ್ತು ನಿಧಿ ಶ್ರೀಮಂತರನ್ನಾಗಿ ಮಾಡುವುದಿಲ್ಲ, ಆದರೆ, ಆಸ್ತಿಗಳನ್ನು ಮಾರಾಟ ಮಾಡದಂತೆ ತಡೆಯುತ್ತದೆ.
ಹೆಚ್ಚುವರಿ ಆದಾಯದ ಕಲ್ಪನೆಗಳನ್ನು ಅನ್ವೇಷಿಸಿ
ನಿಮ್ಮ ಉದ್ಯೋಗ ಅಥವಾ ವ್ಯವಹಾರದಿಂದ ಆದಾಯವನ್ನು ಹೆಚ್ಚಿಸುವುದರ ಜೊತೆಗೆ, ಹೆಚ್ಚುವರಿ ಆದಾಯವನ್ನು ಗಳಿಸಲು ನೀವು ವಿವಿಧ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಅದು ಹೆಚ್ಚು ಶ್ರಮವಿಲ್ಲದೆ ಗಳಿಸುವ ಆದಾಯವಾಗಿದೆ.
ನೀವು ಮಲಗಿರುವಾಗ ಹಣ ಸಂಪಾದಿಸುವ ಮಾರ್ಗವನ್ನು ಕಂಡುಕೊಳ್ಳದಿದ್ದರೆ, ನೀವು ಸಾಯುವವರೆಗೂ ಕೆಲಸ ಮಾಡುತ್ತೀರಿ ಎಂಬ ಮಾತಿದೆ. ಇಂದಿನ ಜಾಗತಿಕ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ, ಹಣವನ್ನು ಗಳಿಸಲು ಅನೇಕ ಅವಕಾಶಗಳಿವೆ. ಡಿಜಿಟಲ್ ಉತ್ಪನ್ನಗಳ ಮಾರಾಟ, ಬ್ಲಾಗ್ ಮಾಡುವ ಮೂಲಕ ಹಣ ಸಂಪಾದನೆ, ಆರ್ಟಿಫಿಶಿಯನ್ ಮಾರ್ಕೆಂಟಿಂಗ್ ಕೆಲಸ ಮಾಡುವ ಮೂಲಕ ಹಣ ಗಳಿಕೆ ಮಾಡಬಹುದು.