Site icon Vistara News

Mudra loan‌ : ಮುದ್ರಾ ಸಾಲ ಪಡೆಯುವುದು ಹೇಗೆ? ಲಾಭವೇನು?

mudra loan

ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಥವಾ ಮುದ್ರಾ ( Mudra loan‌ ) ಎನ್ನುವುದು ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲೊಂದಾಗಿದೆ. ಮುದ್ರಾ ಎಂದರೆ ಮೈಕ್ರೊ ಯುನಿಟ್ಸ್‌ ಡೆವಲಪ್‌ಮೆಂಟ್‌ & ರಿಫೈನಾನ್ಸ್‌ ಏಜೆನ್ಸಿ ಲಿಮಿಟೆಡ್‌ ಅಂತ ಪೂರ್ಣ ಹೆಸರು. ಸಣ್ಣ ಉದ್ದಿಮೆ-ವ್ಯಾಪಾರಗಳ ಅಭಿವೃದ್ಧಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.

2023-24ರ ಮೊದಲಾರ್ಧದಲ್ಲಿ ಮುದ್ರಾ ಸಾಲದ ವಿತರಣೆಯಲ್ಲಿ 38% ಹೆಚ್ಚಳ ದಾಖಲಾಗಿದೆ. ಒಟ್ಟು 1,91,863 ಕೋಟಿ ರೂ. ಮುದ್ರಾ ಸಾಲವನ್ನು ಈ ಅವಧಿಯಲ್ಲಿ ವಿತರಿಸಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಹಾಗಾದರೆ ಮುದ್ರಾ ಲೋನ್‌ ಎಂದರೇನು? ಇದನ್ನು ಪಡೆಯುವುದು ಹೇಗೆ? ಇದರ ಲಾಭವೇನು ಎಂಬುದನ್ನು ಈ ಎಪಿಸೋಡ್‌ನಲ್ಲಿ ತಿಳಿಯೋಣ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2015ರ ಏಪ್ರಿಲ್‌ 8ರಂದು ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಣ್ಣ ವ್ಯಾಪಾರ, ಉದ್ದಿಮೆಗಳಿಗೆ 10 ಲಕ್ಷ ರೂ. ತನಕ ಸಾಲವನ್ನು ನೀಡಲಾಗುತ್ತದೆ. ಈ ಸಾಲ ಪಡೆಯಲು ಯಾವುದೇ ಅಡಮಾನ ಇಡಬೇಕಾಗಿರುವುದಿಲ್ಲ. ಇದುವರೆಗೆ 3 ಲಕ್ಷದ 76 ಸಾವಿರ ಕೋಟಿ ರೂ.ಗಳನ್ನು ಮುದ್ರಾ ಅಡಿಯಲ್ಲಿ ಮಂಜೂರು ಮಾಡಲಾಗಿದೆ. ಅದರಲ್ಲಿ 2 ಲಕ್ಷದ 92 ಸಾವಿರ ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಈ ಯೋಜನೆ ಬರುವ ತನಕ ಕಾರ್ಪೊರೇಟ್‌ ವಲಯದ ವ್ಯಾಪ್ತಿಗೆ ಬರದಿರುವ 90% ಸಣ್ಣ ಪುಟ್ಟ ಬಿಸಿನೆಸ್‌ಗಳಿಗೆ ಬ್ಯಾಂಕ್‌ಗಳಲ್ಲಿ ಅಥವಾ ಯಾವುದೇ ಔಪಚಾರಿಕ ಬ್ಯಾಂಕಿಂಗ್‌ನಲ್ಲಿ ಸಾಲ ಸಿಗುತ್ತಿರಲಿಲ್ಲ.

ಹಾಗಾದರೆ ಮುದ್ರಾ ಸಾಲವನ್ನು ಪಡೆಯುವುದು ಹೇಗೆ? ಸಾಲಗಾರರಿಗೆ ನೇರವಾಗಿ ಮುದ್ರಾ ಸಾಲ ವಿತರಣೆಯ ವ್ಯವಸ್ಥೆ ಇಲ್ಲ. ಆದರೆ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು ಅಥವಾ ಎನ್‌ಬಿಎಫ್‌ಸಿಗಳು ಮತ್ತು ಮೈಕ್ರೊ ಫೈನಾನ್ಸ್‌ ಇನ್ಸ್‌ ಟಿಟ್ಯೂಷನ್ಸ್‌ಗಳು ಮುದ್ರಾ ಸಾಲವನ್ನು ವಿತರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿವೆ. ಸಾಲ ಪಡೆಯಲು ಬಯಸುವವರು www.udyamimitra.in ( ಉದ್ಯಮಿ ಮಿತ್ರ ಡಾಟ್‌ ಇನ್)‌ ವೆಬ್‌ ಪೋರ್ಟಲ್‌ ಮೂಲಕ ಆನ್‌ಲೈನ್‌ ಮೂಲಕ ಅರ್ಜಿಸಲ್ಲಿಸಬಹುದು.

ಮುದ್ರಾ ಸಾಲ ಯೋಜನೆ ಪಡೆಯಲು ಇರುವ ಅರ್ಹತೆ ಏನು? ಭಾರತದ ನಾಗರಿಕನಾಗಿದ್ದು ಕೃಷಿಯೇತರ ಆದಾಯ ಸೃಷ್ಟಿಸುವ ಒಂದು ಬಿಸಿನೆಸ್‌ ಪ್ಲಾನ್‌ ಹೊಂದಿರುವವರು ಮುದ್ರಾ ಸಾಲ ಪಡೆಯಬಹುದು. ಹಾಗೂ 28ರಿಂದ 70 ವರ್ಷ ವಯೊಮಿತಿಯೊಳಗಿರಬೇಕು. ಉತ್ಪಾದನೆ, ಸಂಸ್ಕರಣೆ, ವ್ಯಾಪಾರ ಅಥವಾ ಸೇವಾ ಕ್ಷೇತ್ರದ ವಹಿವಾಟು ನಡೆಸುವವರು ಇದಕ್ಕೆ ಅರ್ಹತೆ ಪಡೆಯುತ್ತಾರೆ. ಇನ್ನೂ ಸರಳವಾಗಿ ಹೇಳುವುದಿದ್ದರೆ- ಸಣ್ಣ ಪುಟ್ಟ ವ್ಯಾಪಾರ ಮಾಡುವವರು, ಸೇವಾ ಕ್ಷೇತ್ರದ ವ್ಯಾಪಾರ ಮಾಡುತ್ತಿರುವವರು, ಹಣ್ಣು-ತರಕಾರಿ, ಜವಳಿ ಅಂಗಡಿ, ರಿಪೇರಿ ಶಾಪ್‌, ಮೆಶೀನ್‌ ಆಪರೇಟ್‌ ಮಾಡುವವರು, ಆಹಾರ ಸಂಸ್ಕರಣೆ ಮಾಡುವವರು ಮತ್ತು ಇತರರು ಮುದ್ರಾ ಸಾಲ ಪಡೆಯಬಹುದು. ಆದರೆ ಕ್ರೆಡಿಟ್‌ ಹಿಸ್ಟರಿ ಚೆನ್ನಾಗಿರಬೇಕು. ಲೋನ್‌ ಡಿಫಾಲ್ಟರ್‌ ಆಗಿರಬಾರದು. ಹೊಸತಾಗಿ ಬಿಸಿನೆಸ್‌ ಮಾಡಲು ಬಯಸುವವರೂ ಅರ್ಜಿ ಸಲ್ಲಿಸಬಹುದು. ಆದರೆ ಸೂಕ್ತ ಬಿಸಿನೆಸ್‌ ಪ್ಲಾನ್‌ ಅನ್ನು ಹೊಂದಿರಬೇಕು. ಫ್ರಾಂಚೈಸಿ ಮಾಡೆಲ್‌ನಲ್ಲಿ ವ್ಯಾಪಾರ ಮಾಡಲು ಬಯಸುವವರು ಕೂಡ ಮುದ್ರಾ ಸಾಲ ಗಳಿಸಬಹುದು.

ನೀವು ಐಸ್‌ ಕ್ರೀಂ ಪಾರ್ಲರ್‌ ಮಾಡಬೇಕು, ಸಣ್ಣ ರೆಡಿಮೇಡ್‌ ಬಟ್ಟೆಬರೆಗಳ ಶಾಪ್‌ ಶುರು ಮಾಡಬೇಕು, ಸ್ಕೂಟರ್‌, ಬೈಕ್‌ , ಸೈಕಲ್ ರಿಪೇರಿ ಅಂಗಡಿ ಮಾಡಬೇಕು, ಜರಿ ಅಂಗಡಿ ಇಡಲು ಬಯಸುವವರೂ ಮುದ್ರಾ ಲೋನ್‌ ಪಡೆಯಬಹುದು. ಸಲೂನ್‌, ಬ್ಯೂಟಿ ಪಾರ್ಲರ್‌, ಜಿಮ್ನಾಶಿಯಮ್‌, ಡ್ರೈ ಕ್ಲೀನಿಂಗ್‌, ಡಿಟಿಪಿ, ಮೆಡಿಸಿನ್‌ ಶಾಪ್‌, ಕೊರಿಯರ್‌ ಏಜೆನ್ಸಿ ಮಾಡುವುದಿದ್ದರೂ ಮುದ್ರಾ ಸಾಲ ಸಿಗುತ್ತದೆ. ಪದವಿ ಮುಗಿದ ಬಳಿಕ ನಿಮ್ಮದೇ ಫುಡ್‌ ಫ್ರೊಸೆಸಿಂಗ್‌ ಘಟಕ ಆರಂಭಿಸಲು ಬಯಸುತ್ತೀರಾ, ಅದಕ್ಕೂ 10 ಲಕ್ಷ ರೂ. ತನಕ ಮುದ್ರಾ ಲೋನ್‌ ಪಡೆಯಬಹುದು. ನೀವು ಕಾರ್ಪೆಂಟರಿ ಶಾಪ್‌ ಮಾಡುತ್ತೀರಾ? ಮಿನರಲ್‌ ವಾಟರ್‌ ಪ್ಲಾಂಟ್‌ ಬಿಸಿನೆಸ್‌ ಮಾಡುತ್ತೀರಾ? ಅದಕ್ಕೂ ಮುದ್ರಾ ಸ್ಕೀಮ್‌ ಅಡಿಯಲ್ಲಿ 10 ಲಕ್ಷ ರೂ. ತನಕ ಸಾಲ ಸಿಗುತ್ತದೆ.

ಆದಾಯ ಮತ್ತು ಉದ್ಯೋಗ ಸೃಷ್ಟಿಸುವ ಹಲವು ಉದ್ದೇಶಗಳಿಗೂ ಮುದ್ರಾ ಯೋಜನೆಯನ್ನು ವಿಸ್ತರಿಸಲಾಗಿದೆ. ಉದಾಹರಣೆಗೆ ಜೇನು ಸಾಕಣೆ, ಪೌಲ್ಟ್ರಿ ಫಾರ್ಮಿಂಗ್‌ಗೆ ಈ ಸಾಲ ಬಳಸಬಹುದು. ವಾಣಿಜ್ಯ ಉದ್ದೇಶಕ್ಕೆ ಬಳಸುವ ಟ್ರ್ಯಾಕ್ಟರ್‌, ಟಿಲ್ಲರ್‌, ದ್ವಿ ಚಕ್ರವಾಹನ, ಆಟೊ ರಿಕ್ಷಾ, ಸಣ್ಣ ಗೂಡ್ಸ್‌ ಟ್ರಾನ್ಸ್‌ಪೋರ್ಟ್‌ ವಾಹನಗಳನ್ನು ಮುದ್ರಾ ಸಾಲದ ಮೂಲಕ ಖರೀದಿಸಬಹುದು. ಯಾವುದು ಬೇಡ, ಒಂದು ಲಾರಿ ಅಥವಾ ಟೆಂಪೊ ಖರೀದಿಸಿ ಟ್ರಾನ್ಸ್‌ಪೋರ್ಟ್‌ ಬಿಸಿನೆಸ್‌ ಮಾಡುತ್ತೇನೆ ಎಂದರೂ, ಮುದ್ರಾ ಸಾಲ ಸಿಗುತ್ತದೆ. ಈಗ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ವಿಧಗಳ ಬಗ್ಗೆ ನೋಡೋಣ.

ಈ ಯೋಜನೆಯ ಅಡಿಯಲ್ಲಿ ಮೂರು ವಿಧದ ಸಾಲಗಳನ್ನು ವಿತರಿಸಲಾಗುತ್ತದೆ. ಅವುಗಳೆಂದರೆ ಶಿಶು- ಕಿಶೋರ್-‌ ತರುಣ್‌ ಎಂಬುದಾಗಿದೆ. ಶಿಶು ವಿಭಾಗದಲ್ಲಿ 50,000 ರೂ. ಸಾಲ ಸಿಗುತ್ತದೆ. ಕಿಶೋರ್‌ ವಿಭಾಗದಲ್ಲಿ 50,000 ರೂ.ಗಳಿಂದ 5 ಲಕ್ಷ ರೂ. ತನಕ ಸಾಲ ಸಿಗುತ್ತದೆ. ತರುಣ್‌ ವಿಭಾಗದಲ್ಲಿ 10 ಲಕ್ಷ ರೂ. ತನಕ ಸಾಲವನ್ನು ಕೊಡುತ್ತಾರೆ. ಮುದ್ರಾ ಕಾರ್ಡ್‌ ಎಂಬ ಡೆಬಿಟ್‌ ಕಾರ್ಡ್‌ ಕೂಡ ನಿಮಗೆ ಸಿಗುತ್ತದೆ. ಇದು ನಿಮ್ಮ ಮುದ್ರಾ ಲೋನ್‌ ಅಕೌಂಟ್‌ಗೆ ಲಿಂಕ್‌ ಆಗಿರುತ್ತದೆ. ಮುದ್ರಾ ಸಾಲವನ್ನು ತಮಗೆ ಅಗತ್ಯವಿರುವಾಗ ಸಣ್ಣ ಸಣ್ಣ ಮೊತ್ತದಲ್ಲಿ ಅಕೌಂಟ್‌ ನಿಂದ ವಿತ್‌ ಡ್ರಾವಲ್‌ ಮಾಡಲು ಹಾಗೂ ಹೆಚ್ಚುವರಿ ಆದಾಯ ಲಭಿಸಿದಾಗ ಅವಧಿಗೆ ಮುನ್ನ ಸಾಲ ಮರು ಪಾವತಿಗೂ ಮುದ್ರಾ ಕಾರ್ಡ್‌ ಅನ್ನು ಬಳಸಬಹುದು. ಎಟಿಎಂನಿಂದ ನಗದು ಪಡೆಯಲು ಹಾಗೂ ಪಿಒಎಸ್‌ ಮೆಶೀನ್‌ಗಳ ಮೂಲಕ ಪೇಮೆಂಟ್‌ ಮಾಡಲು ಕೂಡ ಮುದ್ರಾ ಕಾರ್ಡ್‌ ಬಳಸಬಹುದು. ಸಾಲದ ಮರು ಪಾವತಿಯ ಅವಧಿ 1 ರಿಂದ 5 ವರ್ಷದ ಶ್ರೇಣಿಯಲ್ಲಿ ಇರುತ್ತದೆ. ಬಡ್ಡಿ ದರಗಳು 1 %ರಿಂದ 12% ತನಕ ಇರುತ್ತದೆ.

ಮುದ್ರಾ ಸಾಲ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತರು www.udyamimitra.in ವೆಬ್‌ ಸೈಟ್‌ಗೆ ಲಾಗಿನ್‌ ಆಗಿ. ಹೋಮ್‌ ಸ್ಕ್ರೀನ್‌ನಲ್ಲಿ ಇರುವ ಅಪ್ಲೈ ನೌ ಆಪ್ಷನ್‌ ಅನ್ನು ಕ್ಲಿಕ್ಕಿಸಿ. ಬಳಿಕ ನ್ಯೂ ಎಂತ್ರೆಪ್ರೆನ್ಯೂರ್‌, ಎಕ್ಸಿಸ್ಟಿಂಗ್‌ ಎಂತ್ರೆಪ್ರೆನ್ಯೂರ್‌ ಮತ್ತು ಸೆಲ್ಫ್‌ – ಎಂಪ್ಲಾಯ್ಡ್‌ ಪೈಕಿ ನಿಮಗೆ ಸೂಕ್ತವಾಗಿರುವುದನ್ನು ಸಿಲೆಕ್ಟ್‌ ಮಾಡಿ. ಹೊಸ ರಿಜಿಸ್ಟ್ರೇಶನ್‌ ಆಗಿದ್ರೆ ನೇಮ್‌ ಆಫ್‌ ದಿ ಅಪ್ಲಿಕೆಂಟ್‌, ಇ-ಮೇಲ್‌ ಐಡಿ, ಮೊಬೈಲ್‌ ನಂಬರ್‌ ಕ್ಲಿಕ್ಕಿಸಿ. ಒಟಿಪಿ ಜನರೇಟ್‌ ಮಾಡಿ ನೋಂದಣಿಯಾಗಬಹುದು.

Exit mobile version