Site icon Vistara News

ವಿಸ್ತಾರ Explainer |‌ ಏರ್‌ ಟಿಕೆಟ್‌ ದರದ ಮಿತಿ ತೆಗೆದರೆ ಬೆಲೆಗಳು ಇಳಿಯುವುದು ಹೇಗೆ?

air india

ಬೆಂಗಳೂರು: ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರಯಾಣಿಕರ ಅನುಕೂಲಕ್ಕಾಗಿ ಏರ್‌ ಟಿಕೆಟ್‌ ದರದ ಮೇಲೆ ಕನಿಷ್ಠ ಮತ್ತು ಗರಿಷ್ಠ ಮಿತಿಯನ್ನು ವಿಧಿಸಿತ್ತು. ಎರಡು ವರ್ಷಗಳ ಬಳಿಕ ನಿರ್ಬಂಧವನ್ನು ಆಗಸ್ಟ್‌ ೩೧ರಿಂದ ತೆರವುಗೊಳಿಸಲಾಗುತ್ತಿದೆ. ಈಗ ಏರ್‌ಲೈನ್‌ಗಳು ತಮ್ಮಿಷ್ಟದಂತೆ ದರಗಳನ್ನು ನಿಗದಿಪಡಿಸಬಹುದು. ಈ ಕನಿಷ್ಠ-ಗರಿಷ್ಠ ಮಿತಿಯನ್ನು ರದ್ದುಪಡಿಸಿರುವುದರಿಂದ ಏರ್‌ ಟಿಕೆಟ್‌ ದರಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಇದು ಹೇಗೆ? ಇದರಿಂದ ಏರ್‌ಲೈನ್‌ ಇಂಡಸ್ಟ್ರಿಗೆ ಏನು ಪ್ರಯೋಜನವಾಗಲಿದೆ? ಪ್ರಯಾಣಿಕರಿಗೆ ಲಾಭವೇನು?- ವಿಸ್ತಾರನ್ಯೂಸ್‌ನ ಬಿಸಿನೆಸ್‌ & ಎಕಾನಮಿ ವಿಭಾಗದ ಕನ್ಸಲ್ಟಿಂಗ್‌ ಎಡಿಟರ್‌ ಕೆ. ಗಿರಿ ಪ್ರಕಾಶ್‌ ಅವರು ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ದರದ ಮಿತಿ ರದ್ದುಪಡಿಸಿದ್ದೇಕೆ?

ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಸರ್ಕಾರವು ಪ್ರಯಾಣಿಕರಿಗೆ ಅನುಕೂಲವಾಗಲು ಏರ್‌ ಟಿಕೆಟ್‌ಗಳಿಗೆ ಕನಿಷ್ಠ ಮಿತಿ ೩,೫೦೦ ರೂ. ಹಾಗೂ ಗರಿಷ್ಠ ಮಿತಿ ೧೦,೦೦೦ ರೂ.ಗಳನ್ನು ನಿಗದಿಪಡಿಸಿತ್ತು. ಆಗ ವಿಮಾನಗಳಿಗೆ ಇಂಧನ ವೆಚ್ಚವೂ ಕಡಿಮೆಯಾಗಿತ್ತು. ಈ ನಿರ್ಬಂಧವನ್ನು ಈಗ ತೆಗೆದುಹಾಕಿದ್ದಾರೆ. ಇದರ ಅಗತ್ಯ ಇತ್ತು. ಏಕೆಂದರೆ ಕಳೆದ ಎರಡು ವರ್ಷಗಳಲ್ಲಿ ವೈಮಾನಿಕ ಇಂಧನ ಅಥವಾ ಎಟಿಎಫ್‌ ದರವು ಪ್ರತಿ ೧ ಕಿಲೋ ಲೀಟರ್‌ಗೆ ೧ ಲಕ್ಷ ರೂ. ಗೆ ಏರಿದ್ದರಿಂದ ಏರ್‌ಲೈನ್‌ಗಳಿಗೆ ಭಾರಿ ನಷ್ಟವಾಗುತ್ತಿತ್ತು. ಏರ್‌ ಟಿಕೆಟ್‌ ದರಕ್ಕೆ ಮಿತಿ ವಿಧಿಸಿದ್ದರಿಂದ, ಮಾರುಕಟ್ಟೆಯಲ್ಲಿ ೫೮% ಪಾಲನ್ನು ಹೊಂದಿದ್ದ ಇಂಡಿಗೊ ಏರ್‌ಲೈನ್ ಕೂಡ ನಷ್ಟಕ್ಕೀಡಾಗಿತ್ತು. ಇನ್ನು ಮುಂದೆ ಏರ್‌ಲೈನ್‌ಗಳ ನಷ್ಟ ಕಡಿಮೆಯಾಗಲಿದೆ. ಲಾಭದ ಹಳಿಗೆ ಮರಳುವ ಸಾಧ್ಯತೆ ಇದೆ.

ಏರ್‌ ಟಿಕೆಟ್‌ ದರ ಇಳಿಕೆ ಹೇಗೆ?

ಏರ್‌ ಟಿಕೆಟ್‌ ದರದ ಮೇಲೆ ೩,೫೦೦-೧೦,೦೦೦ ರೂ.ಗಳ ಮಿತಿ ಇದ್ದಾಗ, ಅತ್ಯಂತ ಬೇಡಿಕೆ ಇರುವ ಮತ್ತು ಬೇಡಿಕೆಯೇ ಇಲ್ಲದಿರುವ ಮಾರ್ಗಗಳು ಮತ್ತು ಅವಧಿಯಲ್ಲಿ ಒಂದೇ ರೀತಿಯ ದರವನ್ನು ಏರ್‌ಲೈನ್‌ಗಳು ನಿಗದಿಪಡಿಸಬೇಕಿರುತ್ತಿತ್ತು. ಆದರೆ ಇದರಿಂದ ಸ್ಪರ್ಧಾತ್ಮಕ ದರದಲ್ಲಿ ಏರ್‌ ಟಿಕೆಟ್‌ ಮಾರಾಟಕ್ಕೆ ಸಾಧ್ಯವಾಗುತ್ತಿರಲಿಲ್ಲ. ಜತೆಗೆ ಲಾಭ ಮಾಡಿಕೊಳ್ಳಬಹುದಾದ ಕಡೆಯೂ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ದರ ಇಳಿಸಬಹುದಾದ ಕಡೆಗಳಲ್ಲಿ ಕಡಿತಕ್ಕೂ ಸಾಧ್ಯವಾಗುತ್ತಿರಲಿಲ್ಲ. ಉದಾಹರಣೆಗೆ ಬೆಳಗ್ಗೆ ೬.೩೦-೭.೩೦ ಏರ್‌ಲೈನ್‌ಗಳಿಗೆ ಬಲು ಬೇಡಿಕೆಯ ಅವಧಿ. ಈ ಅವಧಿಯಲ್ಲಿ ಟಿಕೆಟ್‌ ದರವನ್ನು ೧೦,೦೦೦ ರೂ.ಗಿಂತ ಹೆಚ್ಚು ಮೊತ್ತಕ್ಕೆ ನಿಗದಿಪಡಿಸಲು ಆಗುತ್ತಿರಲಿಲ್ಲ. ಈಗ ದರ ನಿಗದಿಯ ಸ್ವಾತಂತ್ರ್ಯ ಏರ್‌ಲೈನ್‌ಗಳಿಗೆ ಸಿಕ್ಕಿರುವುದರಿಂದ ಏರಿಸಬಹುದು. ಅದೇ ರೀತಿ ಬೇಡಿಕೆ ಕಡಿಮೆ ಇರುವ ಮಾರ್ಗಗಳಲ್ಲಿ ದರವನ್ನು ಇಳಿಸಬಹುದು. ಅಂದರೆ ಬೇಡಿಕೆಗೆ ತಕ್ಕಂತೆ ಟಿಕೆಟ್‌ನ ದರವನ್ನು ನಿರ್ಣಯಿಸಬಹುದು. ಇದರಿಂದ ಸಿಗುವ ಲಾಭದಲ್ಲಿ ಒಂದು ಪಾಲನ್ನು ಏರ್‌ಲೈನ್‌ಗಳು ಪ್ರಯಾಣಿಕರಿಗೆ ದಾಟಿಸಿದರೆ ಏರ್‌ ಟಿಕೆಟ್‌ ದರ ಇಳಿಯಲಿದೆ.

ದರ ಸಮರ ಅಪಾಯಕರ

Online booking airplane tickets. 3d

ಭಾರತೀಯ ಏರ್‌ ಲೈನ್‌ ಇಂಡಸ್ಟ್ರಿಯನ್ನು ಡಿಸ್ಕೌಂಟ್‌ ಇಂಡಸ್ಟ್ರಿ ಎನ್ನಬಹುದು. ಅಷ್ಟರಮಟ್ಟಿಗೆ ದರಗಳು ಇಲ್ಲಿ ಸೂಕ್ಷ್ಮ ಸಂವೇದಿಯಾಗಿರುತ್ತದೆ. ಒಂದು ಮಾರ್ಗದಲ್ಲಿ ಒಂದು ಏರ್‌ಲೈನ್‌ ೪,೦೦೦ ರೂ. ಟಿಕೆಟ್‌ ಇಟ್ಟರೆ ಮತ್ತೊಂದು ೩,೫೦೦ ರೂ. ಟಿಕೆಟ್‌ ಇಡುತ್ತದೆ. ಆದರೆ ಇದರಿಂದ ಯಾರಿಗೂ ಪ್ರಯೋಜನ ಸಿಗುವುದಿಲ್ಲ. ಭಾರತದಲ್ಲಿ ಬಹುತೇಕ ಏರ್‌ ಲೈನ್‌ಗಳು ಲೋ ಕಾಸ್ಟ್‌ ಏರ್‌ಲೈನ್.‌ ಹೀಗಾಗಿ ಈಗಲಾದರೂ ಏರ್‌ಲೈನ್‌ಗಳು ದರ ಸಮರವನ್ನು ಕೈಬಿಡುವುದು ಸೂಕ್ತ.

ಜಿಎಸ್‌ಟಿಗೆ ಎಟಿಎಫ್‌ : ಏರ್‌ಲೈನ್‌ ಟಿಕೆಟ್‌ ನಲ್ಲಿ ೪೦% ಎಟಿಎಫ್‌ ( Aviation Turbine Fuel) ಪಾಲಾಗುತ್ತದೆ. ಜಿಎಸ್‌ಟಿಗೆ ಎಟಿಎಫ್‌ ತಂದರೆ ಅದರ ದರ ಇಳಿಕೆಯಾಗಲಿದೆ. ಭವಿಷ್ಯದಲ್ಲಿ ಇದನ್ನು ಮಾಡಲೇಬೇಕು. ಭಾರತೀಯ ವೈಮಾನಿಕ ವಲಯ ಉಳಿಯಬೇಕಿದ್ದರೆ ಎಟಿಎಫ್‌ ಅನ್ನು ಜಿಎಸ್‌ಟಿಗೆ ತರುವುದು ಅವಶ್ಯಕ.

ಖಾಸಗಿ ಏರ್‌ಪೋರ್ಟ್‌ಗಳ ನಿರ್ಮಾಣಕ್ಕೆ ಪ್ರಯಾಣಿಕರ ದುಡ್ಡು ಸಲ್ಲ: ದೇಶದಲ್ಲಿ ಖಾಸಗಿ ಏರ್‌ ಪೋರ್ಟ್‌ಗಳು ನಿರ್ಮಾಣವಾಗುತ್ತಿವೆ. ಆದರೆ ಇದಕ್ಕೆ ಪ್ರಯಾಣಿಕರಿಂದ ದುಡ್ಡು ತೆಗೆದುಕೊಳ್ಳುತ್ತಿವೆ. ಇದನ್ನು ಹೇಗಾದರೂ ಮಾಡಿ ಸರ್ಕಾರ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಕಷ್ಟ. ಏರ್‌ ಟಿಕೆಟ್‌ ರದ್ದತಿಯ ವೇಳೆ, ಏರ್‌ ಪೋರ್ಟ್‌ ತೆಗೆದುಕೊಳ್ಳುವ ಹಣ ಪ್ರಯಾಣಿಕರಿಗೆ ವಾಪಸ್‌ ಸಿಗುವುದಿಲ್ಲ. ಅಂದರೆ ಪ್ರಯಾಣಿಕರು ಏರ್‌ ಟಿಕೆಟ್‌ ಖರೀದಿಸಿದ ಬಳಿಕ ಪ್ರಯಾಣ ಮಾಡಿದರೂ, ಟಿಕೆಟ್‌ ಕ್ಯಾನ್ಸಲ್‌ ಮಾಡಿದರೂ, ಖಾಸಗಿ ಏರ್‌ಪೋರ್ಟ್‌ಗಳಿಗೆ ದುಡ್ಡು ಸಿಗುತ್ತದೆ.

ಟಿಕೆಟ್‌ ನಿಗದಿಯ ಸ್ವಾತಂತ್ರ್ಯ ಬೇಕು: ಏರ್‌ಪೋರ್ಟ್‌ನಿಂದ ನಗರಕ್ಕೆ ದೊಡ್ಡ ರಸ್ತೆ, ಹೋಟೆಲ್‌ ಸೌಲಭ್ಯ ಇರಬೇಕು ವಿಮಾನಯಾನ ವಲಯದ ಅಭಿವೃದ್ಧಿಗೆ ಇದು ಅತ್ಯಂತ ಅವಶ್ಯಕ. ಏರ್‌ ಲೈನ್‌ಗಳಿಗೆ ಟಿಕೆಟ್‌ ದರ ನಿಗದಿಯ ಸ್ವಾತಂತ್ರ್ಯ ಇರಬೇಕು. ಅದು ಬಹಳ ಮಹತ್ವದ್ದು, ಏಕೆಂದರೆ ಅವುಗಳಿಗೆ ಆರ್ಥಿಕವಾಗಿ ಲಾಭ ಮಾಡಬೇಕು ಎಂಬ ವಾಣಿಜ್ಯ ಉದ್ದೇಶ ಇರುತ್ತದೆ. ಅದರ ಮೇಲೆಯೇ ನಿರ್ಬಂಧ ಹೇರಿದರೆ ಉಳಿಯುವುದು ಕಷ್ಟ. ಈ ನಿಟ್ಟಿನಲ್ಲಿ ದರ ನಿಗದಿಯ ಮಿತಿಗಳನ್ನು ತೆರವುಗೊಳಿಸಿರುವುದು ಸ್ವಾಗತಾರ್ಹ.

Exit mobile version