Site icon Vistara News

RTI | ದುಡ್ಡು ಕಾಸು, ಆದಾಯ ವಿವರ ನೀಡದ ಪತಿ, ಆರ್‌ಟಿಐ ಮೂಲಕ ಪ್ರಶ್ನಿಸಿ ಉತ್ತರ ಪಡೆದ ಪತ್ನಿ!

RBI

ನವ ದೆಹಲಿ: ವ್ಯಕ್ತಿಯೊಬ್ಬ ತನ್ನ ಆದಾಯದ ವಿವರಗಳನ್ನು ಕೊಡಲು ಒಪ್ಪದಿದ್ದಾಗ, ಪತ್ನಿ ಮಾಹಿತಿ ಹಕ್ಕು ಕಾಯಿದೆಯ (RTI) ಅಡಿಯಲ್ಲಿ ಪ್ರಶ್ನಿಸಿ ಉತ್ತರವನ್ನು ಪಡೆದ ಘಟನೆ ನಡೆದಿದೆ!

ದಂಪತಿಯ ನಡುವೆ ವಿರಸ ತಲೆದೋರಿದ್ದರಿಂದ ಪತಿ ಮಹಾಶಯ ತೆರಿಗೆಗೆ ಅರ್ಹ ತನ್ನ ಆದಾಯದ ಸಾಮಾನ್ಯ ವಿವರಗಳನ್ನೂ ಪತ್ನಿಗೆ ನೀಡಲು ನಿರಾಕರಿಸಿದ್ದ. ಈ ಪ್ರಕರಣದಲ್ಲಿ ಕೇಂದ್ರ ಮಾಹಿತಿ ಆಯೋಗವು (CIC) ಪತಿಯ ತೆರಿಗೆಗೆ ಅರ್ಹ ಆದಾಯದ ವಿವರಗಳನ್ನು ಪತ್ನಿಗೆ 15 ದಿನಗಳೊಳಗೆ ನೀಡುವಂತೆ ಆದಾಯ ತೆರಿಗೆ ಇಲಾಖೆಗೆ ಆದೇಶಿಸಿದೆ.

ಆರ್‌ಟಿಐ ಕಾಯಿದೆಯ ಸೆಕ್ಷನ್‌ 8(1) (j) ಅಡಿಯಲ್ಲಿ ಆಸ್ತಿ ವಿವರ, ಉತ್ತರದಾಯಿತ್ವಗಳು, ಐಟಿಆರ್‌, ಹೂಡಿಕೆ ಮತ್ತು ಸಾಲದ ವಿವರಗಳು ವೈಯಕ್ತಿಕ ವಿವರಗಳ ಅಡಿಯಲ್ಲಿ ಬರುತ್ತವೆ. ಹೀಗಿದ್ದರೂ ಸುಪ್ರೀಂಕೋರ್ಟ್‌ ಸುಭಾಷ್‌ ಚಂದ್ರ ಅಗ್ರವಾಲ್‌ ಕೇಸ್‌ನಲ್ಲಿ ನೀಡಿದ ತೀರ್ಪಿನ ಪ್ರಕಾರ, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ವಿವರಗಳನ್ನು ಪಡೆದುಕೊಳ್ಳಲು ಅವಕಾಶ ಇದೆ.

ಏನಿದು ಪ್ರಕರಣ? : ಸಂಜು ಗುಪ್ತ ಅವರು 2018-19 ಮತ್ತು 2019-20ರ ಸಾಲಿನಲ್ಲಿ ತಮ್ಮ ಪತಿಯ ತೆರಿಗೆಗೆ ಅರ್ಹ ಸಂಪತ್ತಿನ ವಿವರಗಳನ್ನು ತಿಳಿದುಕೊಳ್ಳಲು ಬಯಸಿದ್ದರು. ಹೀಗಿದ್ದರೂ ಬರೇಲಿಯ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಕೇಂದ್ರ ಮಾಹಿತಿ ಹಕ್ಕು ಆಯೋಗದ ಅಧಿಕಾರಿಗಳು (CPIO) ನಿರಾಕರಿಸಿದ್ದರು. ಇದಕ್ಕೆ ಪತಿಯ ಒಪ್ಪಿಗೆ ಬೇಕು ಎಂದಿದ್ದರು. ಪತಿ ಒಪ್ಪದಿದ್ದಾಗ ಸಿಪಿಐಒ ಸಂಜು ಗುಪ್ತಾ ಅವರ ಪತಿಗೆ, ವಿವರಗಳನ್ನು ಬಹಿರಂಗಪಡಿಸಬಹುದೇ ಎಂದು ತಿಳಿಸಿತ್ತು. ಸಿಪಿಐಒ ನಿರ್ಧಾರಕ್ಕೆ ಅಸಂತುಷ್ಟರಾದ ಸಂಜು ಗುಪ್ತಾ ಅವರು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ (FAA) ಮನವಿ ಸಲ್ಲಿಸಿದರು. ಆದರೆ ಪ್ರಾಧಿಕಾರವು ಸಿಪಿಐಒ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಸಂಜು ಗುಪ್ತಾ ಅವರು ಎರಡನೇ ಮೇಲ್ಮನವಿಯನ್ನು ಕೇಂದ್ರ ಮಾಹಿತಿ ಆಯೋಗಕ್ಕೆ (CIC) ಸಲ್ಲಿಸಿದರು.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿಐಸಿ, ಈ ಹಿಂದಿನ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ಆದೇಶಗಳನ್ನು ಮತ್ತು ತೀರ್ಪುಗಳನ್ನು ಮತ್ತು ತನ್ನದೇ ಪ್ರಕರಣಗಳನ್ನು ಪರಿಶೀಲಿಸಿತು. ಆಗ ರಹಮತ್‌ ಬಾನು ಪ್ರಕರಣದಲ್ಲಿ ಸಿಐಸಿಯು ಕುಟುಂಬದ ಜೀವನೋಪಾಯ ನಿರ್ವಹಣೆಯ ಪ್ರಶ್ನೆಯಾದ್ದರಿಂದ ಪತಿಯು ತನ್ನ ಪತ್ನಿಗೆ ಸಂಪತ್ತಿನ ವಿವರ ನೀಡಬೇಕು ಎಂದು ಆದೇಶಿಸಿತ್ತು. ಇವೆಲ್ಲವನ್ನು ಪರಿಗಣಿಸಿದ ಸಿಐಸಿ, ಅಂತಿಮವಾಗಿ 15 ದಿನಗಳೊಳಗೆ ಸಂಜು ಗುಪ್ತಾ ಅವರಿಗೆ ಪತಿ ಆದಾಯ ವಿವರ ನೀಡಬೇಕು ಎಂದು ಆದೇಶಿಸಿತು.

Exit mobile version