ಮುಂಬಯಿ: ಐಸಿಐಸಿಐ ಬ್ಯಾಂಕ್ (ICICI Bank) ತನ್ನ ವಿಶೇಷ ಠೇವಣಿ ಯೋಜನೆಯನ್ನು (Fixed deposit scheme) ವಿಸ್ತರಿಸಿದ್ದು, ಇದರಡಿಯಲ್ಲಿ ಹಿರಿಯ ನಾಗರಿಕರಿಗೆ 7.5% ಬಡ್ಡಿ ಸಿಗಲಿದೆ. ಐಸಿಐಸಿಐ ಬ್ಯಾಂಕ್ ತನ್ನ ICICI Bank Golden Years FD ಯೋಜನೆಯನ್ನು ಈ ಹಿಂದೆ 2023ರ ಏಪ್ರಿಲ್ 7 ತನಕ ವಿಸ್ತರಿಸಿತ್ತು. ಇದೀಗ 2023ರ ಅಕ್ಟೋಬರ್ ತನಕ, ಅಂದರೆ 6 ತಿಂಗಳು ವಿಸ್ತರಿಸಿದೆ.
ಐಸಿಐಸಿಐ ಬ್ಯಾಂಕಿನ ಗೋಲ್ಡನ್ ಇಯರ್ಸ್ ಎಫ್‌ಡಿ ಯೋಜನೆಯಡಿಯಲ್ಲಿ ಹಿರಿಯ ನಾಗರಿಕರು ರಿಟೇಲ್ ಟರ್ಮ್ ಡೆಪಾಸಿಟ್‌ಗಳ ಮೇಲೆ (retail term deposit) 10 ವರ್ಷಗಳ ತನಕದ ಅವಧಿಗೆ 7.5% ಬಡ್ಡಿ ಪಡೆಯಬಹುದು. ಈ ಎಫ್‌ಡಿಗಳ ಮೆಚ್ಯೂರಿಟಿ ಅವಧಿ 5-10 ವರ್ಷಗಳಾಗಿವೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗೆ ಇದು ಅನ್ವಯಿಸುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಅವಧಿಗೆ ಮುನ್ನ ವಿತ್‌ಡ್ರಾವಲ್:
ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್‌ಡಿಯಡಿಯಲ್ಲಿ ಅವಧಿಗೆ ಮುನ್ನ ವಿತ್‌ಡ್ರಾವಲ್ಸ್‌ಗೂ ಅವಕಾಶ ಇದೆ. ಐದು ವರ್ಷಗಳ ಬಳಿಕ ವಿತ್ ಡ್ರಾವಲ್ಸ್ ಮಾಡಿದರೆ 2023ರ ಮಾರ್ಚ್ 14ರ ನಂತರ 1% ದಂಡ ಅನ್ವಯವಾಗುತ್ತದೆ. ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ವಿವರ ನೀಡಲಾಗಿದೆ.
ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್‌ಡಿಯನ್ನು ಮೂಲತಃ 2020ರಲ್ಲಿ ಆರಂಭಿಸಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಬ್ಯಾಂಕ್ ಈ ಯೋಜನೆಯನ್ನು ವಿಸ್ತರಿಸಿದೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರ ವಿಶೇಷ ಠೇವಣಿ ಯೋಜನೆಯ ಅವಧಿಯನ್ನು 2023ರ ಜೂನ್ 30 ತನಕ ವಿಸ್ತರಿಸಿತ್ತು.
ಹಿರಿಯ ನಾಗರಿಕರಿಗೆ ನಿಶ್ಚಿಂತೆಯಿಂದ ಹೂಡಿಕೆ ಮಾಡಲು ಫಿಕ್ಸೆಡ್ ಡೆಪಾಸಿಟ್‌ಗಳು ಸಹಕಾರಿಯಾಗಿವೆ. ಸಾಂಪ್ರದಾಯಿಕ ಹೂಡಿಕೆದಾರರಿಗೆ ಇತ್ತೀಚಿನ ಬಡ್ಡಿ ದರ ಏರಿಕೆ ಆಕರ್ಷಕವೆನಿಸಿದೆ. ಗ್ರಾಹಕರು ಬ್ಯಾಂಕಿನ ಇಂಟರ್‌ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಪ್ಲಾಟ್ ಫಾರ್ಮ್ ಬಳಸಿಕೊಂಡು ಹೂಡಿಕೆ ಮಾಡಬಹುದು. ಅಥವಾ ಸಮೀಪದ ಐಸಿಐಸಿಐ ಬ್ಯಾಂಕ್ ಶಾಖೆಗೂ ತೆರೆಳಬಹುದು.