ಬೆಂಗಳೂರು: ಆಧಾರ್ ಜತೆಗೆ ಪ್ಯಾನ್ ನಂಬರ್ ಅನ್ನು 2023ರ ಮಾರ್ಚ್ 31ರೊಳಗೆ ಲಿಂಕ್ ಮಾಡದಿದ್ದರೆ, ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ (PAN-Aadhaar link) ಈ ಹಿಂದೆ ತಿಳಿಸಿತ್ತು. ಆದರೆ, ಗಡುವು ವಿಸ್ತರಿಸುವಂತೆ ಸಾರ್ವಜನಿಕವಾಗಿ ತೀವ್ರ ಒತ್ತಡ ಎದುರಾದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಇಲಾಖೆ, ಪ್ಯಾನ್- ಆಧಾರ್ ಲಿಂಕ್ ಮಾಡುವ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಿದೆ. ಅಂದರೆ, ಈಗ ಸಾರ್ವಜನಿಕರು ಜೂನ್ 30ರೊಳಗೆ ಲಿಂಕ್ ಮಾಡಬೇಕಾಗುತ್ತದೆ.
ಬ್ಯಾಂಕ್ ಮೂಲಕ ಹಣಕಾಸು ವರ್ಗಾವಣೆಗಳನ್ನು ಯಾವುದೇ ಅಡಚಣೆ ಇಲ್ಲದೆ ನಡೆಸಲು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮುಖ್ಯವಾಗುತ್ತದೆ. ಎಲ್ಲ ನಾಗರಿಕರು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಸರ್ಕಾರ ಕೆಲವು ವರ್ಷಗಳ ಹಿಂದೆಯೇ ಕಡ್ಡಾಯಗೊಳಿಸಿತ್ತು.
ಪ್ಯಾನ್-ಆಧಾರ್ ಲಿಂಕ್ ಹೇಗೆ?
- ಆದಾಯ ತೆರಿಗೆ ಇಲಾಖೆಯು ಪ್ಯಾನ್ ಅನ್ನು ಆಧಾರ್ ಜತೆಗೆ ಲಿಂಕ್ ಮಾಡಲು ಹಲವು ವಿಧಾನಗಳನ್ನು ಕಲ್ಪಿಸಿದೆ.
- ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in ಮೂಲಕ ಲಿಂಕ್ ಮಾಡಬಹುದು.
- ಈ ವೆಬ್ ಸೈಟ್ನಲ್ಲಿ ರಿಜಿಸ್ಟರ್ ಆಗದಿದ್ದಲ್ಲಿ ರಿಜಿಸ್ಟರ್ ಆಗಿ. ನಿಮ್ಮ ಪ್ಯಾನ್ ನಂಬರ್ ಯೂಸರ್ ಐಡಿ ಆಗಿರುತ್ತದೆ. ಜನ್ಮ ದಿನಾಂಕ ಪಾಸ್ ವರ್ಡ್ ಆಗಿರುತ್ತದೆ.
- ಲಾಗಿನ್ ಆದ ಬಳಿಕ ಪೇಜ್‌ನಲ್ಲಿ ಲಿಂಕ್ ಯುವರ್ ಪ್ಯಾನ್ ವಿತ್ ಆಧಾರ್ ಲಭಿಸುತ್ತದೆ. ಸಿಗದಿದ್ದರೆ ಪ್ರೊಫೈಲ್ ಸೆಟ್ಟಿಂಗ್ಸ್ಗೆ ಹೋಗಿ ಲಿಂಕ್ ಆಧಾರ್ ಮೇಲೆ ಕ್ಲಿಕ್ಕಿಸಿ.
- ಪ್ಯಾನ್ ವಿವರಗಳನ್ನು ಪರಿಶೀಲಿಸಿ. ಹೊಂದಾಣಿಕೆ ಆಗದಿದ್ದರೆ ಸರಿಪಡಿಸಬೇಕಾಗುತ್ತದೆ. ಹೊಂದಾಣಿಕೆ ಆಗುವುದಿದ್ದರೆ ಲಿಂಕ್ ನೌ ಬಟನ್ ಒತ್ತಿರಿ.
- ಯಶಸ್ವಿಯಾಗಿ ಲಿಂಕ್ ಆದ ಬಳಿಕ ಮೆಸೇಜ್ ಸಿಗುತ್ತದೆ.
- NSDL/UTIIL ಕಚೇರಿಗೆ ತೆರಳಿ ಪ್ಯಾನ್- ಆಧಾರ್ ಲಿಂಕ್ ಮಾಡಬಹುದು.
- ಪ್ಯಾನ್ -ಆಧಾರ್ ಲಿಂಕ್ ಮಾಡಲು ಗಡುವು ತಪ್ಪಿದರೆ ಬಳಿಕ ಪ್ಯಾನ್ ನಿಷ್ಕ್ರಿಯ ಎನ್ನಿಸುವುದು
ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
ಆಧಾರ್ ಜತೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಆನ್‌ಲೈನ್ ಮೂಲಕ ಪರಿಶೀಲಿಸಬಹುದು. ಅದು ಹೀಗಿದೆ-
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ತೆರಳಿ ಈ ಲಿಂಕ್ ಕ್ಲಿಕ್ ಮಾಡಿ (www.incometax.gov.in)
ಲಿಂಕ್ ಆಧಾರ್ ಸ್ಟೇಟಸ್ ಆಯ್ಕೆ ಮಾಡಿಕೊಳ್ಳಿ. ಪ್ಯಾನ್ ಮತ್ತು ಆಧಾರ್ ಸಂಖ್ಯೆ ನಮೂದಿಸಿ.
ವ್ಯೂ ಲಿಂಕ್ ಆಧಾರ್ ಸ್ಟೇಟಸ್ ಕ್ಲಿಕ್ಕಿಸಿ. (view link aadhaar status)
ಆಧಾರ್-ಪ್ಯಾನ್ ಸ್ಟೇಟಸ್ ಪೇಜ್‌ನಲ್ಲಿ ಕಾಣಿಸುತ್ತದೆ. ಉದಾಹರಣೆಗೆ ಆಧಾರ್-ಪ್ಯಾನ್ ಲಿಂಕ್ ಆಗಿದ್ದರೆ Your PAN is linked to Aadhaar number. ಎಂಬ ಸಂದೇಶ ಕಾಣಿಸುತ್ತದೆ.