ನವ ದೆಹಲಿ: ನೀವು ಪ್ಯಾನ್ ಮತ್ತು ಆಧಾರ್ ನಡುವೆ ಲಿಂಕ್ ಮಾಡದಿದ್ದರೆ 2023ರ ಏಪ್ರಿಲ್ 1ರ ಬಳಿಕ ಎನ್‌ಪಿಎಸ್‌ನಲ್ಲಿ (National Pension System) ಹೂಡಿಕೆಗೆ ನಿರ್ಬಂಧ ಎದುರಾಗಲಿದೆ. ಆದ್ದರಿಂದ ಎನ್‌ಪಿಎಸ್ ಚಂದಾದಾರರು ತಪ್ಪದೆ 2023ರ ಮಾರ್ಚ್ 31ರೊಳಗೆ ಪ್ಯಾನ್ – ಆಧಾರ್ ಲಿಂಕ್ ಮಾಡುವುದು ಸೂಕ್ತ. ಈಗಾಗಲೇ ಪ್ಯಾನ್ – ಆಧಾರ್ ಲಿಂಕ್ ಮಾಡಿ (linking PAN-Aadhaar) ಆಗಿದ್ದರೆ ನಿಶ್ಚಿಂತೆಯಿಂದ ಇರಬಹುದು.
ಪ್ಯಾನ್ – ಆಧಾರ್ ಲಿಂಕ್ ಮಾಡದಿದ್ದರೆ ಅಂಥ ಎನ್‌ಪಿಎಸ್ ಖಾತೆ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿರುವ ಖಾತೆ ಎಂದು ಪರಿಗಣನೆಯಾಗುತ್ತದೆ. ಹಾಗೂ ಎನ್‌ಪಿಎಸ್ ಖಾತೆಯಲ್ಲಿ ವರ್ಗಾವಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಪಿಎಫ್‌ಆರ್‌ಡಿಎ ಪ್ರಕಟಣೆ ತಿಳಿಸಿದೆ.
ಪ್ಯಾನ್ ಒಂದು ಪ್ರಮುಖ ಗುರುತಿನ ಸಂಖ್ಯೆಯಾಗಿದ್ದು, ಎನ್‌ಪಿಎಸ್‌ನಲ್ಲಿ ಕೆವೈಸಿಯ ಭಾಗವಾಗಿದೆ. ಆದ್ದರಿಂದ ಹೂಡಿಕೆದಾರರು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಮರೆಯಬಾರದು ಎಂದು ತಿಳಿಸಿದೆ. ಜತೆಗೆ ಮಾರ್ಚ್ 31ರ ಬಳಿಕ ಲಿಂಕ್ ಮಾಡದಿದ್ದರೆ ಆದಾಯ ತೆರಿಗೆ ಕಾಯಿದೆ 1961 ಅಡಿಯಲ್ಲಿ ದಂಡವನ್ನೂ ಕಟ್ಟಬೇಕಾಗುತ್ತದೆ ಎಂದು ತಿಳಿಸಿದೆ.
ಆಧಾರ್-ಪ್ಯಾನ್ ಲಿಂಕ್ ಮಾಡಲು ಸರ್ಕಾರ ಗಡುವನ್ನು 2023ರ ಜೂನ್ 30ಕ್ಕೆ ವಿಸ್ತರಿಸಿದ್ದರೂ, ಎನ್‌ಪಿಎಸ್ ಹೂಡಿಕೆದಾರರಿಗೆ ಪ್ಯಾನ್ – ಆಧಾರ್ ಲಿಂಕ್ ಮಾಡಲು ಗಡುವು ಇದುವರೆಗೆ ಮುಂದೂಡಿಕೆಯಾಗಿಲ್ಲ.