ಸ್ಯಾನ್ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ ಶುಕ್ರವಾರದಿಂದ ತನ್ನ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿದೆ. ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು (Twitter) ಖರೀದಿಸಿದ ಒಂದು ವಾರದಲ್ಲೇ, ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಶುರುವಾಗಿದೆ.
ನೀವು ಕಚೇರಿಯಲ್ಲಿ ಇದ್ದರೂ, ಕಚೇರಿಗೆ ಬರುವ ದಾರಿಯಲ್ಲಿದ್ದರೂ, ದಯವಿಟ್ಟು ಮನೆಗೆ ಹಿಂತಿರುಗಿ ಎಂದು ಟ್ವಿಟರ್, ತನ್ನ ಸಿಬ್ಬಂದಿಗೆ ಇ-ಮೇಲ್ ಮೂಲಕ ಸೂಚಿಸಿದೆ. ಕಂಪನಿಯ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ವಜಾಗೊಂಡಿರುವ ಉದ್ಯೋಗಿಗಳು ಹಾಗೂ ಕಂಪನಿಯಲ್ಲಿ ಮುಂದುವರಿಯಲಿರುವವರಿಗೆ ಪ್ರತ್ಯೇಕವಾಗಿ ಇ-ಮೇಲ್ ಮೂಲಕ ತಿಳಿಸಲಾಗುವುದು ಎಂದು ಟ್ವಿಟರ್ ತಿಳಿಸಿದೆ.
ಟ್ವಿಟರ್‌ನಲ್ಲಿ ತೀವ್ರವಾದ ವೆಚ್ಚ ನಿಯಂತ್ರಣಕ್ಕೆ ಎಲಾನ್ ಮಸ್ಕ್ ಮುಂದಾಗಿದ್ದಾರೆ. ಕಂಪನಿಯ ಆರೋಗ್ಯಕರ ಬೆಳವಣಿಗೆಯ ದೃಷ್ಟಿಯಿಂದ ಉದ್ಯೋಗ ಕಡಿತದ ಅಗತ್ಯ ಇದೆ ಎಂದು ಟ್ವಿಟರ್ ಪ್ರತಿಪಾದಿಸಿದೆ. ಈಗಾಗಲೇ ಕಂಪನಿಯ ಹಿರಿಯ ಉದ್ಯೋಗಿಗಳನ್ನು ಎಲಾನ್ ಮಸ್ಕ್ ವಜಾಗೊಳಿಸಿದ್ದಾರೆ. ಸಿಇಒ ಹಾಗೂ ಜಾಹೀರಾತು, ಮಾರ್ಕೆಟಿಂಗ್ ಮತ್ತು ಎಚ್ ಆರ್ ವಿಭಾಗದ ಪ್ರಮುಖರನ್ನು ವಜಾಗೊಳಿಸಿದ್ದಾರೆ.
ಈ ನಡುವೆ ಟ್ವಿಟರ್‌ನ ಉದ್ಯೋಗಿಗಳು ಎಲಾನ್ ಮಸ್ಕ್ ವಿರುದ್ಧ ತಿರುಗಿ ಬಿದ್ದುದ್ದು, ಕ್ಯಾಲಿಫೋರ್ನಿಯಾ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಯಾವುದೇ ಪೂರ್ವಭಾವಿ ನೋಟಿಸ್ ಕೊಡದೆಯೇ, ಸೇವೆಯಿಂದ ದಿಢೀರ್ ವಜಾಗೊಳಿಸಲಾಗುತ್ತಿದೆ ಎಂದು ಉದ್ಯೋಗಿಗಳು ಆರೋಪಿಸಿರುವುದಾಗಿ ವರದಿಯಾಗಿದೆ. ಕಂಪನಿಯು 3,700 ಉದ್ಯೋಗಿಗಳನ್ನು ವಜಾಗೊಳಿಸಲು ಉದ್ದೇಶಿಸಿದೆ ಎಂದು ವರದಿಯಾಗಿದೆ.