Site icon Vistara News

India GDP Q4 Growth : 2022-23ರಲ್ಲಿ ಭಾರತದ ಜಿಡಿಪಿ 7.2%ಕ್ಕೆ ಏರಿಕೆ

cash

ನವ ದೆಹಲಿ: ಭಾರತದ ಜಿಡಿಪಿ ಬೆಳವಣಿಗೆ ಕಳೆದ 2022-23ರಲ್ಲಿ ನಿರೀಕ್ಷೆ ಮೀರಿ 7%ಕ್ಕೆ ಏರಿಕೆಯಾಗಿದೆ. ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ 6.1%ಕ್ಕೆ ವೃದ್ಧಿಸಿದೆ. 2022-23ರ ಸಾಲಿನಲ್ಲಿ ವಿತ್ತೀಯ ಕೊರತೆ ಜಿಡಿಪಿಯ 6.4%ರಷ್ಟಿದ್ದು, ಸರ್ಕಾರದ ವಿತ್ತೀಯ ನಿಯಂತ್ರಣ ಗುರಿಯ ಒಳಗೆಯೇ ಇದೆ. ವಿತ್ತೀಯ ಕೊರತೆ 1.34 ಲಕ್ಷ ಕೋಟಿ ರೂ.ಗಳಷ್ಟಿತ್ತು.

ಕಳೆದ 2021-22ರ ಸಾಲಿಗೆ ಹೋಲಿಸಿದರೆ ವಿತ್ತೀಯ ಕೊರತೆಯ ನಿಯಂತ್ರಣದಲ್ಲಿ ಸುಧಾರಣೆಯಾಗಿದೆ. ಆಗ ವಿತ್ತೀಯ ಕೊರತೆ 6.7% ಇತ್ತು. ಈಗ 6.4%ಕ್ಕೆ ಇಳಿಕೆಯಾಗಿದೆ. ವಿತ್ತೀಯ ಕೊರತೆಯನ್ನು 2025-26ರ ವೇಳೆಗೆ ಜಿಡಿಪಿಯ 4.5% ಒಳಗೆ ನಿಯಂತ್ರಿಸುವ ಗುರಿಯನ್ನು ಸರ್ಕಾರ ಹೊಂದಿದೆ. 2023-24ರಲ್ಲಿ 5.9%ಕ್ಕೆ ತಗ್ಗಿಸುವ ಉದ್ದೇಶ ಹೊಂದಿದೆ. ವಿತ್ತೀಯ ಕೊರತೆಯನ್ನು ಭರಿಸಲು ಸರ್ಕಾರ ಹಣಕಾಸು ಮಾರುಕಟ್ಟೆಯಿಂದ ಸಾಲ ಮಾಡಿದೆ. ಜಿಡಿಪಿ ಬೆಳವಣಿಗೆಯು 2020-21ರಲ್ಲಿ 8.7%, 2021-22ರಲ್ಲಿ 9.1% ಏರಿಕೆಯಾಗಿತ್ತು.

ಕಳೆದ ಏಪ್ರಿಲ್‌ನಲ್ಲಿ 8 ಮೂಲಸೌಕರ್ಯ ಉದ್ದಿಮೆಗಳ ಬೆಳವಣಿಗೆ 3.6%ರಿಂದ 3.5%ಕ್ಕೆ ಇಳಿಕೆಯಾಗಿದೆ. ಹೀಗಿದ್ದರೂ ಏಪ್ರಿಲ್‌ನಲ್ಲಿ ರಸಗೊಬ್ಬರ ಉತ್ಪಾದನೆ 23.5%, ಉಕ್ಕು ಉತ್ಪಾದನೆ 12.1%, ಸಿಮೆಂಟ್‌ ಉತ್ಪಾದನೆ 11.6% ಹೆಚ್ಚಳವಾಗಿದೆ. ಕಲ್ಲಿದ್ದಲು ಉತ್ಪಾದನೆ ಏಪ್ರಿಲ್‌ನಲ್ಲಿ 9% ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ: Congress Guarantee: ನೀವು ಹೇಳಿದಂತೆ ಗ್ಯಾರಂಟಿ ಯೋಜನೆ ಜಾರಿ ಆಗೋಲ್ಲ: ಸಿಎಂ ಸಿದ್ದರಾಮಯ್ಯಗೆ ಆರ್ಥಿಕ ಇಲಾಖೆ ಖಡಕ್‌ ಮಾತು

ವಿಶ್ವ ಬ್ಯಾಂಕ್‌ (world Bank) 2023-24ರ ಸಾಲಿಗೆ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು 6.6% ರಿಂದ 6.4%ಕ್ಕೆ ಇಳಿಸಿತ್ತು. ಹಣದುಬ್ಬರವನ್ನು ತಗ್ಗಿಸುವ ಸಲುವಾಗಿ ಆರ್‌ಬಿಐ ಕಳೆದ ಮೇಯಿಂದ ಬಡ್ಡಿ ದರದಲ್ಲಿ 2.50% ಏರಿಸಿದೆ. ಇದರ ಪರಿಣಾಮ ಸಾಲದ ಬಡ್ಡಿ ದರಗಳು ಏರಿಕೆಯಾಗಿದೆ. ಇದು ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು ಎಂದು ವಿಶ್ವಬ್ಯಾಂಕ್‌ ಅಭಿಪ್ರಾಯಪಟ್ಟಿತ್ತು. ಜನವರಿ-ಮಾರ್ಚ್‌ ಅವಧಿಯಲ್ಲಿ ಸೇವಾ ವಲಯ 6.3% ಪ್ರಗತಿ ದಾಖಲಿಸಿತ್ತು.

ಸಾಲದ ಬಡ್ಡಿ ದರ ಏರಿಕೆಯಾದಾಗ ಜನ ಖರ್ಚು ವೆಚ್ಚಗಳ ಮೇಲೆ ಹಿಡಿತ ಮಾಡುತ್ತಾರೆ. ಇದು ಬೇಡಿಕೆಯನ್ನು ತಗ್ಗಿಸಿ ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಆದರೆ ಇದೇ ಸಂದರ್ಭ ಆರ್ಥಿಕ ಚಟುವಟಿಕೆಗಳೂ ಮಂದಗತಿಯಲ್ಲಿರುವಂತೆ ಮಾಡುತ್ತದೆ. ಖಾಸಗಿ ವೆಚ್ಚದ ಮೇಲೆ ಪ್ರತಿಕೂಲ ಪ್ರಭಾವ ಬೀರುವುದರಿಂದ ಆರ್ಥಿಕ ಬೆಳವಣಿಗೆ ಕೂಡ ನಿಧಾನಗತಿ ಪಡೆಯಬಹುದು ಎಂದು ಬ್ಯಾಂಕ್‌ ತಿಳಿಸಿದೆ.

2022-23ರಲ್ಲಿ 6.9% ಜಿಡಿಪಿ ಬೆಳವಣಿಗೆಯನ್ನು ವರ್ಲ್ಡ್‌ ಬ್ಯಾಂಕ್‌ ಅಂದಾಜಿಸಿತ್ತು. ಪ್ರಸಕ್ತ ಸಾಲಿನಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ 2.1%ಕ್ಕೆ ಇಳಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಸಂಭವಿಸಿರುವ ಬ್ಯಾಂಕಿಂಗ್‌ ಬಿಕ್ಕಟ್ಟು ಭಾರತದ ಮೇಲೆ ಸೀಮಿತ ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು. ಆದರೆ ಭಾರತದ ಬ್ಯಾಂಕಿಂಗ್‌ ವಲಯ ಸುಭದ್ರವಾಗಿದೆ ಎಂದು ವಿಶ್ವಬ್ಯಾಂಕ್‌ ವಿವರಿಸಿತ್ತು.

Exit mobile version