ನವದೆಹಲಿ: ರಷ್ಯಾದಿಂದ ರೂಪಾಯಿ ಲೆಕ್ಕದಲ್ಲಿ ವಹಿವಾಟು ನಡೆಸಲು ಭಾರತ ಪ್ರಸ್ತಾಪಿಸಿದೆ. ರಷ್ಯಾದಿಂದ ಕಚ್ಚಾ ತೈಲ ಮತ್ತು ಶಸ್ತ್ರಾಸ್ತ್ರಗಳ ಖರೀದಿಯನ್ನು ಗಣನೀಯವಾಗಿ ಏರಿಸಿರುವ ಭಾರತ, ಇದೀಗ ರೂಪಾಯಿ ಮೂಲಕ ವಹಿವಾಟು ನಡೆಸಲು ಉದ್ದೇಶಿಸಿದೆ. ಈ ಮೂಲಕ ಡಾಲರ್ ಮೇಲಿನ ಅವಲಂಬನೆಯನ್ನೂ ಇಳಿಸಬಹುದು.
ಭಾರತದ ಮಾಸ್ಟರ್ ಪ್ಲಾನ್
ಭಾರತವು ರಷ್ಯಾದ ಜತೆಗೆ ರೂಪಾಯಿ ಮೂಲಕ ವಹಿವಾಟು ನಡೆಸುವ ಸಲುವಾಗಿ ಮೊದಲಿಗೆ ರಷ್ಯಾದ ಸಾರ್ವಜನಿಕ ವಲಯದ ಬ್ಯಾಂಕ್ ವಿಟಿಬಿ ಬ್ಯಾಂಕ್, ಪಿಜೆಎಸ್‌ಸಿ ಮತ್ತು ಎಸ್ಬರ್‌ಬ್ಯಾಂಕ್‌ನಲ್ಲಿ 200 ಕೋಟಿ ಡಾಲರ್‌ಗೆ ಸಮಾನವಾದ ರೂಪಾಯಿಯನ್ನು ಠೇವಣಿ ಇಡಲಿದೆ. ಇದು ರೂಪಾಯಿ ಮೂಲಕ ವ್ಯವಹರಿಸಲು ಸಹಕರಿಸಲಿದೆ.
ರಷ್ಯಾದ ಅಧಿಕಾರಿಗಳು ಈ ವಾರ ಭಾರತಕ್ಕೆ ಭೇಟಿ ನೀಡಲಿದ್ದು, ರೂಪಾಯಿ-ರುಬೆಲ್ ವ್ಯಹಾರದ ಬಗ್ಗೆ ಒಪ್ಪಂದ ಅಂತಿಮವಾಗುವ ನಿರೀಕ್ಷೆ ಇದೆ.
ರಷ್ಯಾದ ರುಬೆಲ್ ಕರೆನ್ಸಿ ಡಾಲರ್ ಎದುರು ತೀವ್ರ ಕುಸಿದಿದ್ದು, ಪರ್ಯಾಯ ಮಾರ್ಗೋಪಾಯವನ್ನು ರಷ್ಯಾ ಕೂಡ ಹುಡುಕುತ್ತಿದೆ. ರೂಪಾಯಿ ಮೂಲಕ ವ್ಯವಹರಿಸಿದರೆ ರಷ್ಯಾಕ್ಕೂ ಅನುಕೂಲವಾಗಲಿದೆ. ಜತೆಗೆ ಡಾಲರ್ ಮೇಲಿನ ಅವಲಂಬನೆ ತಪ್ಪಿಸಬಹುದು.