Site icon Vistara News

ವಿಸ್ತಾರ Explainer | ಡಾಲರ್‌ಗೆ ಭಾರತ-ರಷ್ಯಾ ಡೋಂಟ್‌ ಕೇರ್, ಇನ್ಮುಂದೆ ರೂಪಾಯಿ-ರುಬೆಲ್‌ ದರ್ಬಾರ್!

rupee rebel

ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳಲ್ಲಿ ಡಾಲರ್‌ ಪ್ರಾಬಲ್ಯವನ್ನು ಹತ್ತಿಕ್ಕಲು ಹಾಗೂ ರೂಪಾಯಿ-ರುಬೆಲ್‌ ಕರೆನ್ಸಿಯಲ್ಲಿ ವ್ಯವಹರಿಸಲು ಭಾರತ ಮತ್ತು ರಷ್ಯಾ ತಮ್ಮ ಕಾರ್ಯತಂತ್ರವನ್ನು ಜಾರಿಗೊಳಿಸಿವೆ. ಹಾಗಾದರೆ ಏನಿದು ಕಾರ್ಯತಂತ್ರವೇನು? ಇದರಿಂದ ಉಭಯ ರಾಷ್ಟ್ರಗಳಿಗೆ ಲಾಭವೇನು? ಈ ಕ್ರಾಂತಿಕಾರಕ ಪದ್ಧತಿಯ ( ವಿಸ್ತಾರ Explainer) ಒಳನೋಟವನ್ನು ನೋಡೋಣ.

ಯೆಸ್‌ ಬ್ಯಾಂಕ್‌ನಲ್ಲಿ ರಷ್ಯಾದ ಖಾತೆ ಆರಂಭ

ರಷ್ಯಾದ ಪೀಟರ್ಸ್‌ ಬರ್ಗ್‌ ಸೋಶಿಯಲ್‌ ಕಮರ್ಶಿಯಲ್‌ ಬ್ಯಾಂಕ್‌ (PSCB), ಭಾರತದ ಯೆಸ್‌ ಬ್ಯಾಂಕ್‌ನಲ್ಲಿ ತನ್ನ ರೂಪಾಯಿ-ರುಬೆಲ್ ಖಾತೆಯನ್ನು ತೆರೆದಿದೆ. ಈ ಮೂಲಕ ಹಣಕಾಸು ವ್ಯವಹಾರಗಳಲ್ಲಿ ಡಾಲರ್‌ ಅನ್ನು ದೂರವಿಟ್ಟು, ರೂಪಾಯಿ-ರುಬೆಲ್‌ ಅನ್ನು ವಿನಿಮಯಯ ಮಾಡಿಕೊಳ್ಳಲು ಹಾದಿ ಸುಗಮವಾಗಿದೆ.‌

ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳಲು ರಷ್ಯಾಕ್ಕೂ ಇದು ಸಹಕಾರಿಯಾಗಲಿದೆ. ಭಾರತಕ್ಕೂ ಡಾಲರ್‌ನ ಹಂಗಿಲ್ಲದೆ, ರೂಪಾಯಿನಲ್ಲೇ ರಷ್ಯಾ ಜತೆಗೆ ವ್ಯವಹರಿಸಲು ಸಾಧ್ಯವಾಗಲಿದೆ. ರಷ್ಯಾದ ಮೂರು ಡಜನಿಗೂ ಹೆಚ್ಚು ಕಂಪನಿಗಳು ಭಾರತದ ಜತೆಗಿನ ವ್ಯವಹಾರವನ್ನು ರೂಪಾಯಿಯ ಮೂಲಕ ನಡೆಸಲಿವೆ. ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌ (ಐಬಿಎ) ಈ ರಷ್ಯಾ-ಭಾರತ ಕಾರ್ಯತಂತ್ರಕ್ಕೆ ಸಹಕರಿಸಿವೆ.

ಏನಿದು ರುಪಾಯಿ-ರುಬೆಲ್‌ ಕಾರ್ಯತಂತ್ರ?

ರಾಷ್ಟ್ರಗಳು ಪರಸ್ಪರ ಒಪ್ಪಿಗೆಯ ಮೇರೆಗೆ ಕರೆನ್ಸಿಯ ವಿನಿಮಯ ದರವನ್ನು ನಿರ್ಧರಿಸಿ, ಕೊಡು-ಕೊಳ್ಳುವಿಕೆಯ ವ್ಯವಹಾರಗಳಲ್ಲಿ ಬಳಸುವುದು ರೂಪಾಯಿ-ರುಬೆಲ್‌ ಕಾರ್ಯತಂತ್ರದಲ್ಲೂ ಅನ್ವಯವಾಗುತ್ತದೆ. ಈಗಾಗಲೇ ಭಾರತ-ರಷ್ಯಾ ಪರಸ್ಪರ ಸಮಾಲೋಚಿಸಿ ರೂಪಾಯಿ-ರುಬೆಲ್‌ ಕರೆನ್ಸಿಯಲ್ಲಿ ವ್ಯವಹರಿಸಲು ನಿರ್ಧರಿಸಿವೆ. ಇದುವರೆಗೆ ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆಗಳಲ್ಲಿ ಡಾಲರ್‌ ಅನ್ನು ಬಳಸಲಾಗುತ್ತಿತ್ತು.

ಈ ವಿಧಾನದಲ್ಲಿ ರಷ್ಯಾದ ಬ್ಯಾಂಕ್‌ಗಳು ಭಾರತೀಯ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬೇಕಾಗುತ್ತದೆ. ಅದೇ ರೀತಿ ಭಾರತದ ಬ್ಯಾಂಕ್‌ಗಳು ರಷ್ಯಾದ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬೇಕಾಗುತ್ತದೆ. ಉಭಯ ರಾಷ್ಟ್ರಗಳೂ ತಮ್ಮ ಖಾತೆಗಳಲ್ಲಿ ತಮ್ಮದೇ ಕರೆನ್ಸಿಯನ್ನು ಹೊಂದಿರುತ್ತವೆ. ಉಭಯ ರಾಷ್ಟ್ರಗಳು ನಿರ್ದಿಷ್ಟ ವಿನಿಮಯ ದರವನ್ನು ಕೂಡ ನಿಗದಿಪಡಿಸುತ್ತವೆ. ಬಳಿಕ ಭಾರತೀಯ ರಫ್ತುದಾರರು ರಷ್ಯಾದ ರಫ್ತುದಾರರಿಗೆ ರೂಪಾಯಿಯಲ್ಲೇ ವ್ಯವಹರಿಸುತ್ತಾರೆ. ರಷ್ಯಾದ ರಫ್ತುದಾರರು ಭಾರತೀಯ ರಫ್ತುದಾರರ ಜತೆಗಿನ ವ್ಯವಹಾರದಲ್ಲಿ ರುಬೆಲ್‌ನಲ್ಲೇ ವ್ಯವಹರಿಸುತ್ತಾರೆ.

ಭಾರತ-ರಷ್ಯಾಕ್ಕೇನು ಲಾಭ? ಭಾರತವು ರಷ್ಯಾದಿಂದ ಹೇರಳ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತದೆ. ಅದನ್ನು ಡಾಲರ್‌ ಬದಲಿಗೆ ರೂಪಾಯಿ ಕೊಟ್ಟು ಖರೀದಿಸಬಹುದು. ಮತ್ತೊಂದು ಕಡೆ ರಷ್ಯಾಕ್ಕೆ ಭಾರತದ ದೊಡ್ಡ ಮಾರುಕಟ್ಟೆ ದೊರೆಯುತ್ತದೆ. ಮಾತ್ರವಲ್ಲದೆ ರಷ್ಯಾಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ನಿರ್ಬಂಧಗಳನ್ನು ಬೈಪಾಸ್‌ ಮಾಡಲು ಸಾಧ್ಯವಾಗಲಿದೆ. ಹೀಗಾಗಿ ಉಭಯ ದೇಶಗಳಿಗೂ ಇದು ಅನುಕೂಲಕರ.

ರಷ್ಯಾದ ಡಿಸ್ಕೌಂಟ್‌ ದರದ ತೈಲ, ಭಾರತಕ್ಕೆ 35,000 ಕೋಟಿ ರೂ. ಉಳಿತಾಯ

ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಜಿಗಿತದಿಂದ ಭಾರತಕ್ಕೆ ಭಾರಿ ಸವಾಲು ಉಂಟಾಗಿದೆ. ಹೀಗಿದ್ದರೂ, ರಷ್ಯಾದಿಂದ ಡಿಸ್ಕೌಂಟ್‌ ದರದಲ್ಲಿ ಕಚ್ಚಾ ತೈಲ ಪೂರೈಕೆ ಆದ್ದರಿಂದ 35,000 ಕೋಟಿ ರೂ. ಉಳಿತಾಯವಾಗಿದೆ.

ರಷ್ಯಾ-ಉಕ್ರೇನ್‌ ಸಂಘರ್ಷ ತೀವ್ರವಾದ ಬಳಿಕ ಅದರ ಸಾಂಪ್ರದಾಯಿಕ ಖರೀದಿದಾರರು ದೂರ ಸರಿದ ಪರಿಣಾಮ ರಷ್ಯಾ ಹೊರ ಮಾರುಕಟ್ಟೆಯನ್ನು ಆಶ್ರಯಿಸಬೇಕಾದ ಹುಡುಕಾಟದಲ್ಲಿತ್ತು. ಭಾರತಕ್ಕೂ ಕಚ್ಚಾ ತೈಲ ದರವನ್ನು ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಪಡೆಯಬೇಕಾದ ಅನಿವಾರ್ಯತೆ ಇತ್ತು. ಈ ಸಂದರ್ಭ ರಷ್ಯಾವು ಡಿಸ್ಕೌಂಟ್‌ ದರದಲ್ಲಿ ತೈಲವನ್ನು ಭಾರತಕ್ಕೆ ಮಾರಾಟ ಮಾಡಲು ಮುಂದಾಯಿತು. ಇದು ಉಭಯ ದೇಶಕ್ಕೂ ಅನುಕೂಲಕರವಾಗಿತ್ತು. ಇದೀಗ ರೂಪಾಯಿ-ರುಬೆಲ್‌ ಕಾರ್ಯತಂತ್ರ ಜಾರಿಯಾಗಿರುವುದರಿಂದ ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಅನುಕೂಲವನ್ನು ನಿರೀಕ್ಷಿಸಲಾಗಿದೆ.

ಡಾಲರ್‌ಗೆ ಪರ್ಯಾಯ ಕರೆನ್ಸಿ ಬಳಕೆ ಸಾಧ್ಯವೇ?

ಕಳೆದೊಂದು ದಶಕದಿಂದೀಚೆಗೆ ಡಾಲರ್‌ಗೆ ಪರ್ಯಾಯವಾಗಿ ಇತರ ಕರೆನ್ಸಿಗಳನ್ನು ಬಲಪಡಿಸಲು ಸಾಧ್ಯವೇ ಎಂಬ ಜಿಜ್ಞಾಸೆ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ನ ಏಕಸ್ವಾಮ್ಯದ ಪರಿಣಾಮ ಭಾರತ ಸೇರಿದಂತೆ ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಮಸ್ಯೆ ಉಂಟಾಗಿದೆ. ಇತ್ತೀಚಿನ ಉದಾಹರಣೆ ಎಂದರೆ ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಉಂಟಾಗಿರುವ ಪರಿಸ್ಥಿತಿ. ನ್ಯಾಟೊ ಪಡೆಯ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿವೆ. ಇದರ ಪರಿಣಾಮ ರಷ್ಯಾಕ್ಕೆ ಕಚ್ಚಾ ತೈಲ ಮಾರಾಟ, ಡಾಲರ್‌ಗಳಲ್ಲಿ ವ್ಯವಹಾರಕ್ಕೆ ತೊಡಕು ಉಂಟಾಗಿದೆ. ಇಂಥ ಸಂದರ್ಭದಲ್ಲಿ ಡಾಲರ್‌ಗೆ ಬದಲು ಪರ್ಯಾಯ ಕರೆನ್ಸಿಗಳ ಬಳಕೆಗೆ ಆಲೋಚನೆ ಮತ್ತು ಕಾರ್ಯತಂತ್ರ ಚುರುಕಾಗಿದೆ. ಭಾರತ ಮತ್ತು ರಷ್ಯಾ ಇದೀಗ ರುಪಾಯಿ-ರುಬೆಲ್‌ ಕಾರ್ಯತಂತ್ರವನ್ನು ಅನುಸರಿಸಲೂ ಇದುವೇ ಕಾರಣ.

ಡಾಲರ್‌ ಪ್ರಾಬಲ್ಯಕ್ಕೆ ಕಾರಣವೇನು?

ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಮೂಲಭೂತ ಸಮಸ್ಯೆ ಏನೆಂದರೆ ಅದು ಅತಿಯಾಗಿ ಅಮೆರಿಕದ ಡಾಲರ್‌ ಮೇಲೆಯೇ ಕೇಂದ್ರೀಕೃತವಾಗಿರುವುದು. ಅಮೆರಿಕ ಜಗತ್ತಿನ ದೊಡ್ಡ ಎಕಾನಮಿ ಆಗಿರಬಹುದು. ಆದರೆ ಜಾಗತಿಕ ವಿದೇಶಿ ವಿನಿಮಯ ಸಂಗ್ರಹದ 60% ಪಾಲನ್ನು ಹೊಂದಿದೆ! ಅಂತಾರಾಷ್ಟ್ರೀಯ ವ್ಯಾಪಾರಗಳಲ್ಲಿ 40% ಗೂ ಹೆಚ್ಚು ಡಾಲರ್‌ನಲ್ಲಿ ನಡೆಯುತ್ತದೆ. ಇದು ಭಾರಿ ಅಸಮತೋಲನವನ್ನು ಸೃಷ್ಟಿಸಿದೆ. ಅಮೆರಿಕದ ಜಿಡಿಪಿ ಜಗತ್ತಿನ ಐದನೇ ಒಂದರಷ್ಟು ಮಾತ್ರವಾಗಿದ್ದರೂ, ಡಾಲರ್‌ ಪ್ರಾಬಲ್ಯ ಅತಿಯಾಗಿರುವುದು ಸ್ಪಷ್ಟ.

ರಾಷ್ಟ್ರಗಳು ಪರಸ್ಪರ ಸಮಾಲೋಚನೆ ಮತ್ತು ಸಹಮತಕ್ಕೆ ಬಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್‌ ಪ್ರಾಬಲ್ಯವನ್ನು ಸೀಮಿತ ಪ್ರಮಾಣದಲ್ಲಿ ಮುರಿಯಬಹುದು. ಆದರೆ ಇದಕ್ಕೆ ರಾಷ್ಟ್ರಗಳ ನಡುವೆ ಪರಸ್ಪರ ಒಪ್ಪಂದ ಅಥವಾ ಸಹಮತ ಮುಖ್ಯ.

ಎರಡನೆಯದಾಗಿ ಸ್ವತಃ ಅಮೆರಿಕವೇ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಡಾಲರ್‌ ಬಳಕೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ ಇದುವರೆಗೂ ಅಮೆರಿಕವು ತನ್ನ ಡಾಲರ್‌ ಪ್ರಾಬಲ್ಯವನ್ನು ಅಂತ್ಯಗೊಳಿಸಲು ಕ್ರಮ ಕೈಗೊಂಡಿಲ್ಲ.

ರುಬೆಲ್-ರೂಪಾಯಿ ಕ್ರಾಂತಿಕಾರಕ ಏಕೆ?

ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಡಾಲರ್‌ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದಕ್ಕೆ ಕಾರಣಗಳೂ ಇವೆ. ಪ್ರಬಲ ರಾಷ್ಟ್ರ ಚೀನಾಕ್ಕೂ ಡಾಲರ್‌ಗೆ ಪರ್ಯಾಯ ಕರೆನ್ಸಿಯನ್ನು ಬಲಪಡಿಸಲು ಸಾಧ್ಯವಾಗಿಲ್ಲ ಎಂಬುದನ್ನು ಗಮನಿಸಬಹುದು. ಅಮೆರಿಕದ ಹಣಕಾಸು ಮಾರುಕಟ್ಟೆ ಹೊಂದಾಣಿಕೆಗೆ ಮುಕ್ತವಾಗಿರುವಂಥದ್ದು, ಕಾರ್ಪೊರೇಟ್‌ ಆಡಳಿತ ಪಾರದರ್ಶಕ. ಒಂದು ವೇಳೆ ಚೀನಾದ ಕರೆನ್ಸಿ ರೆನ್‌ಮಿನ್‌ಬಿ (Renminbi) ಅಮೆರಿಕದ ಡಾಲರ್‌ ವಿರುದ್ಧ ಪೈಪೋಟಿ ನಡೆಸಬೇಕಿದ್ದರೆ, ಡಾಲರ್‌ ಮೂಲಕ ಸಿಗುವ ಅನುಕೂಲಗಳನ್ನು ಅದೂ ನೀಡಬೇಕಾಗುತ್ತದೆ. ಚೀನಾ ಕೂಡ ತನ್ನ ಕ್ಯಾಪಿಟಲ್‌ ಅಕೌಂಟ್‌ ಮತ್ತು ಕರೆಂಟ್‌ ಅಕೌಂಟ್‌ಗಳ ಮೇಲಿನ ನಿಯಂತ್ರಣವನ್ನು ಸಡಿಲಗೊಳಿಸಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಭಾರತ ಮತ್ತು ರಷ್ಯಾ ಜಂಟಿಯಾಗಿ ಆರಂಭಿಸಿರುವ ರೂಪಾಯಿ-ರುಬೆಲ್‌ ಕಾರ್ಯತಂತ್ರ ಕ್ರಾಂತಿಕಾರಕವಾಗಿ ಪರಿಣಮಿಸಿದೆ.

Exit mobile version