Site icon Vistara News

Most populous nation : 142.86 ಕೋಟಿ ಜನರೊಂದಿಗೆ ಚೀನಾವನ್ನು ಮೀರಿಸಿದ ಭಾರತ: ವಿಶ್ವಸಂಸ್ಥೆ

population

ನವ ದೆಹಲಿ: ಭಾರತವು ಇದೀಗ 142.86 ಕೋಟಿ ಜನರೊಂದಿಗೆ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದೆ ( Most populous nation ) ಎಂದು ವಿಶ್ವಸಂಸ್ಥೆ ಬುಧವಾರ ಬಿಡುಗಡೆಗೊಳಿಸಿರುವ ವರದಿ ತಿಳಿಸಿದೆ. ಚೀನಾದ ಜನಸಂಖ್ಯೆ 142.57 ಕೋಟಿಯಾಗಿದ್ದರೆ, ಭಾರತದ ಜನಸಂಖ್ಯೆ ಅದಕ್ಕಿಂತ ತುಸು ಮೇಲಿದ್ದು, 142.866 ಕೋಟಿಗೆ ವೃದ್ಧಿಸಿದೆ. ಅಂದರೆ ಚೀನಾಕ್ಕಿಂತ 29 ಲಕ್ಷ ಹೆಚ್ಚಿನ ಜನಸಂಖ್ಯೆ ಭಾರತದಲ್ಲಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ಅಂಕಿ ಅಂಶಗಳನ್ನು ಉಲ್ಲೇಖಿಸಿ ಬ್ಲೂಮ್‌ ಬರ್ಗ್‌ ವರದಿ ಮಾಡಿದೆ.

ವಿಶ್ವಸಂಸ್ಥೆಯ UNFPA ವರದಿಯ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ 25% ಪಾಲು 0-14 ವರ್ಷದವರಾಗಿದ್ದಾರೆ. 10-19 ವರ್ಷ ವಯೋಮಿತಿಯವರು 18% ಮಂದಿ ಇದ್ದಾರೆ. 10ರಿಂದ 24 ವರ್ಷ ವಯೋಮಿತಿಯವರು 26% ಇದ್ದಾರೆ. 15-64 ವರ್ಷ ವಯೋಮಿತಿಯವರು 68% ಇದ್ದಾರೆ. 65 ವರ್ಷಕ್ಕಿಂತ ಮೇಲಿನವರು 7% ಇದ್ದಾರೆ.

ಭಾರತದ ಜನಸಂಖ್ಯೆ ಮುಂಬರುವ ಮೂರು ದಶಕಗಳಲ್ಲಿ 165 ಕೋಟಿಗೆ ಏರಿಕೆಯಾಗಲಿದ್ದು, ಬಳಿಕ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆಯಲ್ಲಿ ಅಮೆರಿಕ ಮೂರನೇ ಸ್ಥಾನದಲ್ಲಿದ್ದು, 34 ಕೋಟಿಯಷ್ಟಿದೆ.

ಚೀನಾವನ್ನು ಜನಸಂಖ್ಯೆಯಲ್ಲಿ ಭಾರತವು ಮೀರಿಸಿದ ನಿರ್ದಿಷ್ಟ ದಿನಾಂಕವನ್ನು ಹೇಳಲು ಅಸಾಧ್ಯ. ಭಾರತ ಮತ್ತು ಚೀನಾದ ಅಂಕಿ ಅಂಶಗಳಲ್ಲಿನ ಅನಿಶ್ಚಿತತೆ ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ. ಭಾರತದಲ್ಲಿ 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿತ್ತು. 2021ರಲ್ಲಿ ಹೊಸ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ವಿಳಂಬವಾಗಿದೆ.

ಏಷ್ಯಾದ ಮೂರನೇ ಅತಿ ದೊಡ್ಡ ಎಕಾನಮಿಯಾಗಿರುವ ಭಾರತವು ಜಗತ್ತಿನ ಜನಸಂಖ್ಯೆಯ ಐದನೇ ಒಂದರಷ್ಟು ಪಾಲನ್ನು ಹೊಂದಿದೆ. ಅಗಾಧ ಮಾನವ ಸಂಪನ್ಮೂಲದಿಂದಾಗಿ ಭಾರತ ವಿಶಾಲವಾದ ಮಾರುಕಟ್ಟೆಯನ್ನೂ ಸೃಷ್ಟಿಸಿದೆ. ವಿದೇಶಗಳಲ್ಲೂ ಭಾರತೀಯರು ದುಡಿದು ತವರಿಗೆ ರವಾನಿಸುತ್ತಿದ್ದಾರೆ. ಆದರೆ ಇದೇ ವೇಳೆ ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮ ಎಲ್ಲರಿಗೂ ಉದ್ಯೋಗಾವಕಾಶಗಳನ್ನು ನೀಡುವುದು ಸವಾಲಾಗಿ ಪರಿಣಮಿಸಿದೆ. ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ 30 ವರ್ಷ ವಯೋಮಿತಿಗಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಕೃಷಿ ವಲಯದಿಂದ ಅನೇಕ ಮಂದಿ ವಿಮುಖರಾಗುತ್ತಿದ್ದು, ಅವರಿಗೂ ಉದ್ಯೋಗಾವಕಾಶಗಳ ಸೃಷ್ಟಿ ಮುಖ್ಯವಾಗಿದೆ.

ಚೀನಾಕ್ಕೆ ಜನಸಂಖ್ಯೆ ಇಳಿಕೆಯ ಸವಾಲು:

ಚೀನಾದಲ್ಲಿ ಜನಸಂಖ್ಯೆ ಇಳಿಯುತ್ತಿದೆ. ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮ ದುಡಿಯುವ ವರ್ಗದ ಜನಸಂಖ್ಯೆ ತಗ್ಗುತ್ತಿದೆ. ಇದು ಆರ್ಥಿಕ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸವಾಲಾಗಿ ಪರಿಣಮಿಸಿದೆ. ಭಾರತ ಮತ್ತು ಚೀನಾದಲ್ಲಿ ಜನತೆ ದೊಡ್ಡ ನಗರಗಳಿಗೆ ಅವಕಾಶಗಳನ್ನು ಅರಸುತ್ತ ವಲಸೆ ಹೋಗುವುದು ಸಾಮಾನ್ಯವಾಗಿದೆ. ಹೀಗಿದ್ದರೂ, ಭಾರತದ ಗ್ರಾಮೀಣ ಭಾಗದಲ್ಲಿ ಈಗಲೂ ದೊಡ್ಡ ಜನಸಂಖ್ಯೆ ಇದೆ.

ಚೀನಾವು ಮಾವೋ ಕಾಲದ ಒಂದು ಕುಟುಂಬಕ್ಕೆ ಒಂದು ಮಗು ಸಾಕು ಎಂಬ ನೀತಿಯನ್ನು ಸಡಿಲಗೊಳಿಸಿ ಹಲವು ವರ್ಷಗಳಾಗಿವೆ. ಇತ್ತೀಚೆಗೆ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಹೀಗಿದ್ದರೂ, ಚೀನಾದ ಜನಸಂಖೆ ಇಳಿಯುತ್ತಿದೆ. ದೀರ್ಘಕಾಲೀನವಾಗಿ ಇದು ಪ್ರತಿಕೂಲ ಪ್ರಭಾವವನ್ನೂ ಬೀರಬಹುದು. ಜಾಗತಿಕ ಬ್ರಾಂಡ್‌ಗಳಿಗೆ ಚೀನಾದ ಮಾರುಕಟ್ಟೆಯಲ್ಲಿ ವ್ಯವಹಾರ ಕಡಿಮೆಯಾಗಬಹುದು.

Exit mobile version