ನವ ದೆಹಲಿ: ಭಾರತವು 2022-23ರ ಅಂತ್ಯದ ವೇಳೆಗೆ 3.5 ಟ್ರಿಲಿಯನ್ ಡಾಲರ್ (3.5 ಲಕ್ಷ ಕೋಟಿ ಡಾಲರ್) ಆರ್ಥಿಕತೆಯಾಗಲಿದೆ. ಹಾಗೂ ಮುಂದಿನ 7 ವರ್ಷಗಳಲ್ಲಿ 7 ಟ್ರಿಲಿಯನ್ ಡಾಲರ್ (7 ಲಕ್ಷ ಕೋಟಿ ಡಾಲರ್) ಆರ್ಥಿಕತೆಯಾಗಲಿದೆ (Economy growth ) ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ತಿಳಿಸಿದ್ದಾರೆ.
2025ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಸರ್ಕಾರ ಈ ಹಿಂದೆ ತಿಳಿಸಿತ್ತು. ಎಂಸಿಸಿಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಷ್ಯಾ-ಉಕ್ರೇನ್ ಸಂಘರ್ಷದೊಂದಿಗೆಯೇ 2023 ಆರಂಭವಾಗಿದೆ. ಇದು ಆರ್ಥಿಕತೆ ಕುರಿತ ಅನಿಶ್ಚಿತತೆಯನ್ನು ಮುಂದುವರಿಸಿದೆ ಎಂದರು.
ಎರಡು ವರ್ಷಗಳ ಕೋವಿಡ್ ಬಿಕ್ಕಟ್ಟಿನ ಬಳಿಕ ಚೀನಾ, ವಿಶ್ವ ಆರ್ಥಿಕತೆಗೆ ತೆರೆದುಕೊಳ್ಳುತ್ತಿದೆ. ತೈಲ ಮತ್ತು ಸರಕುಗಳ ಬೆಳವಣಿಗೆ ಇದನ್ನು ಬಿಂಬಿಸಿದೆ. ಅಮೆರಿಕದಲ್ಲಿ 2024 ಅಥವಾ 2025ರಲ್ಲಿ ಬಡ್ಡಿ ದರಗಳು ಇಳಿಮುಖವಾಗಲಿದೆ. ಅದು ಭಾರತದ ರೂಪಾಯಿ ಮೇಲೆ ಪ್ರಭಾವ ಬೀರಲಿದೆ ಎಂದರು.