Site icon Vistara News

Economy | ಭಾರತ 2030ಕ್ಕೆ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ: ಮೋರ್ಗಾನ್‌ ಸ್ಟಾನ್ಲಿ

morgan stanly

ನವ ದೆಹಲಿ: ಭಾರತವು 2030ರ ವೇಳೆಗೆ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ (Economy) ಹೊರಹೊಮ್ಮಲಿದೆ ಎಂದು ಮೋರ್ಗಾನ್‌ ಸ್ಟಾನ್ಲಿಯ ವರದಿ ತಿಳಿಸಿದೆ.

ಭಾರತದಲ್ಲಿ ಹೂಡಿಕೆಗೆ ಮತ್ತು ಉತ್ಪಾದನೆಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ. ಡಿಜಿಟಲ್‌ ಮೂಲಸೌಕರ್ಯ ವಿಸ್ತರಣೆಯಾಗುತ್ತಿದೆ. ಇಂಧನ ಉತ್ಪಾದನೆಯಲ್ಲೂ ಭಾರತ ದಾಪುಗಾಲಿಡುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮೋರ್ಗಾನ್‌ ಸ್ಟಾನ್ಲಿ ಶ್ಲಾಘಿಸಿದೆ.

ಯಾಕೆ ಇದು ಭಾರತದ ದಶಕ (Why This is India’s Decade) ಎಂಬ ಶೀರ್ಷಿಕೆಯ ವರದಿಯಲ್ಲಿ ಮೋರ್ಗಾನ್‌ ಸ್ಟಾನ್ಲಿ, ದೇಶದ ಪ್ರಸಕ್ತ ಟ್ರೆಂಡ್‌ ಮತ್ತು ಭವಿಷ್ಯವನ್ನು ಬಣ್ಣಿಸಿದೆ.

ಭಾರತದ ಆರ್ಥಿಕ ನೀತಿಯ ಸುಧಾರಣೆಗಳ ಪರಿಣಾಮ ವಿಶ್ವ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಹೂಡಿಕೆದಾರರಿಗೆ ಮತ್ತು ಕಂಪನಿಗಳಿಗೆ ಅತಿ ದೊಡ್ಡ ಅವಕಾಶವನ್ನು ಭಾರತ ನೀಡಲಿದೆ ಎಂದಿದೆ.

ಭಾರತದ ಅಗಾಧ ಜನಸಂಖ್ಯೆ, ಡಿಜಿಟಲೀಕರಣ, ಡಿಗ್ಲೋಬಲೈಸೇಶನ್‌ ಪರಿಣಾಮ ನವ ಭಾರತ ಉದಯಿಸುತ್ತಿದೆ ಎಂದು ಮೋರ್ಗಾನ್‌ ಸ್ಟಾನ್ಲಿ ತಿಳಿಸಿದೆ.

ಭಾರತದಲ್ಲಿ ವಾರ್ಷಿಕ 35,000 ಡಾಲರ್‌ಗಿಂತ ( ೨೮ ಲಕ್ಷ ರೂ.) ಹೆಚ್ಚು ವಾರ್ಷಿಕ ಆದಾಯ ಗಳಿಸುವ ಕುಟುಂಬಗಳ ಸಂಖ್ಯೆ ಮುಂದಿನ ಹತ್ತು ವರ್ಷದಲ್ಲಿ ಗಣನೀಯ ಹೆಚ್ಚಲಿದೆ. ಹಾಗೂ ವಾರ್ಷಿಕ ೨೪ ದಶಲಕ್ಷ ಡಾಲರ್‌ ( 205 ಕೋಟಿ ರೂ.) ಆದಾಯವಿರುವ ಕುಟುಂಬಗಳ ಸಂಖ್ಯೆಯೂ ಹೆಚ್ಚಲಿದೆ ಎಂದು ವರದಿ ತಿಳಿಸಿದೆ.

ಮೋರ್ಗಾನ್‌ ಸ್ಟಾನ್ಲಿಯ ಪ್ರಕಾರ 2030ರ ವೇಳೆಗೆ ಭಾರತದ ಷೇರು ಮಾರುಕಟ್ಟೆ 6.5 ಲಕ್ಷ ಕೋಟಿ ಡಾಲರ್‌ ಮಾರುಕಟ್ಟೆ ಮೌಲ್ಯ ಇರುವ ಬೃಹತ್‌ ಷೇರು ವಿನಿಮಯ ಕೇಂದ್ರವಾಗಲಿದೆ.

Exit mobile version