ನವ ದೆಹಲಿ: ಭಾರತ ಮತ್ತು ಬ್ರಿಟನ್ ನಡುವಣ ಮುಕ್ತ ವ್ಯಾಪಾರ ಮಾತುಕತೆ ಪ್ರಗತಿಯಲ್ಲಿದ್ದು, ಮುಂದಿನ ಸುತ್ತಿನ ಮಾತುಕತೆ ಶೀಘ್ರ ನಡೆಯಲಿದೆ ಎಂದು ಬ್ರಿಟನ್ ಸಚಿವ ತಾರಿಖ್ ಅಹ್ಮದ್ (India-UK FTA) ತಿಳಿಸಿದ್ದಾರೆ.
ಬ್ರಿಟನ್‌ನ ವಿದೇಶಾಂಗ ಸಚಿವ (ದಕ್ಷಿಣ ಏಷ್ಯಾ ವಿಭಾಗ) ತಾರಿಖ್ ಅಹ್ಮದ್ ಅವರು ಉಭಯ ದೇಶಗಳ ಎಫ್‌ಟಿಎ ಶೀಘ್ರ ಏರ್ಪಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ತಾರಿಖ್ ಅಹ್ಮದ್ ವಿವರಣೆ ನೀಡಿದ್ದು, ಭಾರತದ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದ ನಿರ್ಣಾಯಕವಾಗಿದೆ ಎಂದು ತಿಳಿಸಿದ್ದಾರೆ.
ಭಾರತ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದು, ಒಪ್ಪಂದದ ಪರಿಣಾಮ ಬ್ರಿಟನ್ ಮೂಲದ ಕಂಪನಿಗಳಿಗೆ ಭಾರತದಲ್ಲಿ ವಹಿವಾಟು ನಡೆಸಲು ಹಾದಿ ಸುಗಮವಾಗಲಿದೆ. ಭಾರತಕ್ಕೂ ಅನುಕೂಲವಾಗಲಿದೆ ಎಂದರು. ಈಗ ಭಾರತ ಮತ್ತು ಬ್ರಿಟನ್ ನಡುವೆ 29.6 ಶತಕೋಟಿ ಡಾಲರ್ (2.39 ಲಕ್ಷ ಕೋಟಿ ರೂ.) ದ್ವಿಪಕ್ಷೀಯ ವ್ಯವಹಾರ ನಡೆಯುತ್ತಿದೆ.