Site icon Vistara News

Indian billionaires: ಭಾರತದಲ್ಲಿ 200 ಬಿಲಿಯನೇರ್‌ಗಳು! ಅತಿ ಶ್ರೀಮಂತರ ಸಂಖ್ಯೆಯಲ್ಲಿ ಭಾರತ ನಂ.3

Indian billionaires

ಹೊಸದಿಲ್ಲಿ: ಭಾರತದ 200 ಬಿಲಿಯನೇರ್‌ಗಳು (Indian billionaires) ಫೋರ್ಬ್ಸ್‌ನ 2024ರ (forbs) ವಿಶ್ವದ ಬಿಲಿಯನೇರ್‌ಗಳ ಪಟ್ಟಿ (billionaires list) ಸೇರಿದ್ದಾರೆ. ಇವರು ಒಟ್ಟು 954 ಶತಕೋಟಿ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.

ಭಾರತವು ಈ ವರ್ಷ ದಾಖಲೆಯ 200 ಬಿಲಿಯನೇರ್‌ಗಳನ್ನು ಕಂಡಿದೆ. ಕಳೆದ ವರ್ಷ 675 ಶತಕೋಟಿ ಡಾಲರ್ ಇದ್ದ ಒಟ್ಟು ಸಂಪತ್ತಿನ ಮೌಲ್ಯದಲ್ಲಿ ಶೇ. 40ರಷ್ಟು ಹೆಚ್ಚಳವಾಗಿದೆ.

ಮುಖೇಶ್ ಅಂಬಾನಿ (mukesh ambani) ವಿಶ್ವದ 9ನೇ ಶ್ರೀಮಂತ ವ್ಯಕ್ತಿಯಾಗಿದ್ದು, ಇವರ ಸಂಪತ್ತು 116 ಬಿಲಿಯನ್ ಡಾಲರ್, ಗೌತಮ್ ಅದಾನಿ (Gautam Adani) 17ನೇ ಶ್ರೀಮಂತ ವ್ಯಕ್ತಿಯಾಗಿದ್ದು ಇವರ ಸಂಪತ್ತಿನ ಒಟ್ಟು ಮೌಲ್ಯ 84 ಬಿಲಿಯನ್ ಡಾಲರ್ .

ಇದನ್ನೂ ಓದಿ: Mukesh Ambani: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿಯನ್ನು ಹಿಂದಿಕ್ಕಿದ ಅಂಬಾನಿ; ಉಳಿದ ಸಿರಿವಂತರು ಯಾರು?

ಹೆಚ್ಚು ಶ್ರೀಮಂತರಿರುವ ದೇಶ

ಯುಎಸ್ (US) ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿದ ರಾಷ್ಟ್ರವಾಗಿದ್ದು, ಇಲ್ಲಿನ ಶ್ರೀಮಂತರ ಒಟ್ಟು ಸಂಪತ್ತಿನ ಮೌಲ್ಯ 813 ಬಿಲಿಯನ್ ಡಾಲರ್. ಎರಡನೇ ಸ್ಥಾನದಲ್ಲಿರುವ ಚೀನಾದ (china) ಶ್ರೀಮಂತರು 406 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದಾರೆ.

ಫೋರ್ಬ್ಸ್ 2024ರ ವಿಶ್ವ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ ಭಾರತವು 200 ಬಿಲಿಯನೇರ್‌ಗಳ ದಾಖಲೆಯ ಸಂಖ್ಯೆಯನ್ನು ಹೊಂದಿದೆ. ಅತಿ ಶ್ರೀಮಂತರನ್ನು ಹೊಂದಿರುವ ಕಾರಣದಿಂದ ಜಾಗತಿಕವಾಗಿ ಭಾರತ ಮೂರನೇ ಸ್ಥಾನದಲ್ಲಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾದ ಭಾರತ ಕಳೆದ ವರ್ಷ 169 ಬಿಲಿಯನೇರ್‌ಗಳನ್ನು ಹೊಂದಿತ್ತು.

ರಿಲಯನ್ಸ್ ಇಂಡಸ್ಟ್ರೀಸ್ ಸಂಘಟಿತ ಷೇರುಗಳ ಬೆಳವಣಿಗೆಯೊಂದಿಗೆ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು 83 ಬಿಲಿಯನ್‌ ಡಾಲರ್ ನಿಂದ 116 ಶತಕೋಟಿ ಡಾಲರ್‌ಗೆ ಏರಿದ್ದು, ಅವರು ಪಟ್ಟಿಯಲ್ಲಿನ ವಿಶೇಷ 100 ಶತಕೋಟಿ ಡಾಲರ್ ಕ್ಲಬ್‌ಗೆ ಪ್ರವೇಶಿಸಿದ ಮೊದಲ ಏಷ್ಯದ ಶ್ರೀಮಂತ ವ್ಯಕ್ತಿ ಆಗಿದ್ದಾರೆ ಎಂದು ಫೋರ್ಬ್ಸ್ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ವಿಶ್ವದ ಶ್ರೀಮಂತರ ನಿವ್ವಳ ಮೌಲ್ಯವನ್ನು ಲೆಕ್ಕಾಚಾರ ಮಾಡಲು ಮಾರ್ಚ್ 8 ರಿಂದ ಸ್ಟಾಕ್ ಬೆಲೆಗಳು ಮತ್ತು ವಿನಿಮಯ ದರಗಳನ್ನು ಬಳಸಲಾಗಿದೆ. ಅಂಬಾನಿ ಜಾಗತಿಕವಾಗಿ ಒಂಬತ್ತನೇ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದು, ಭಾರತ ಮತ್ತು ಏಷ್ಯಾದ ಹೆಚ್ಚು ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಮೂಲಸೌಕರ್ಯ ಮತ್ತು ಸರಕುಗಳ ಉದ್ಯಮಿ ಗೌತಮ್ ಅದಾನಿ ಅವರು ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಯುಎಸ್ ಆಧಾರಿತ ಕಿರು-ಮಾರಾಟಗಾರ ಹಿಂಡೆನ್‌ಬರ್ಗ್ ರಿಸರ್ಚ್‌ನಿಂದ ವಂಚನೆಯ ಆರೋಪದ ಬಳಿಕ ಅದಾನಿ ಗ್ರೂಪ್‌ನ ಷೇರುಗಳು ಕಳೆದ ವರ್ಷ ಕುಸಿತಕಂಡಿತ್ತು ಆದರೂ ಅದರಿಂದ ಶೀಘ್ರವಾಗಿ ಅವರು ಚೇತರಿಸಿಕೊಂಡರು. ಹೀಗಾಗಿ ಈ ಬಾರಿ ಅದಾನಿ 84 ಶತಕೋಟಿ ಸಂಪತ್ತಿನೊಂದಿಗೆ ಜಾಗತಿಕವಾಗಿ 17ನೇ ಶ್ರೀಮಂತ ವ್ಯಕ್ತಿಯಾಗಿ ಮರಳಿದ್ದಾರೆ.

ವಿಶ್ವದ ಒಟ್ಟು ಬಿಲಿಯನೇರ್‌ಗಳು

ಪ್ರಸ್ತುತ ವಿಶ್ವಾದ್ಯಂತ 2,781 ಬಿಲಿಯನೇರ್‌ಗಳಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ 141 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ವಿಶ್ವದ 10 ಶ್ರೀಮಂತ ವ್ಯಕ್ತಿಗಳು

ಫ್ರೆಂಚ್ LVMH ನ ಅಧ್ಯಕ್ಷ ಬರ್ನಾರ್ಡ್ ಅರ್ನಾಲ್ಟ್ 233 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬಳಿಕ ಟೆಸ್ಲಾದ ಸಹ-ಸಂಸ್ಥಾಪಕ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನ ಮಾಲೀಕ ಎಲೋನ್ ಮಸ್ಕ್, ಎರಡನೇ ಸ್ಥಾನದಲ್ಲಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮೂರನೇ ಸ್ಥಾನದಲ್ಲಿದ್ದು, ಮೆಟಾ ಪ್ಲಾಟ್‌ಫಾರ್ಮ್‌ಗಳ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಂಪ್ಯೂಟರ್ ತಂತ್ರಜ್ಞಾನ ಕಂಪೆನಿ ಒರಾಕಲ್‌ನ ಸಹ ಸಂಸ್ಥಾಪಕ ಲ್ಯಾರಿ ಎಲಿಸನ್ ಐದನೇ ಸ್ಥಾನದಲ್ಲಿದ್ದಾರೆ. ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಆರನೇ ಸ್ಥಾನದಲ್ಲಿದ್ದು, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಏಳನೇ ಸ್ಥಾನದಲ್ಲಿದ್ದಾರೆ. ಮೈಕ್ರೋಸಾಫ್ಟ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಮತ್ತು ಲಾಸ್ ಏಂಜಲೀಸ್ ಕ್ಲಿಪ್ಪರ್ಸ್ ಬಾಸ್ಕೆಟ್‌ಬಾಲ್ ತಂಡದ ಮಾಲೀಕ ಸ್ಟೀವ್ ಬಾಲ್ಮರ್ ಎಂಟು, ಮುಕೇಶ್ ಅಂಬಾನಿ ಒಂಬತ್ತು ಹಾಗೂ ಆಲ್ಫಾಬೆಟ್ ಸಹ-ಸಂಸ್ಥಾಪಕ ಲ್ಯಾರಿ ಪೇಜ್ ೧೦ನೇ ಸ್ಥಾನದಲ್ಲಿದ್ದಾರೆ.

ಬಿಲಿಯನೇರ್ ಗಳಲ್ಲಿ 369 ಮಹಿಳೆಯರು

ವಿಶ್ವದ 369 ಮಹಿಳೆಯರು ವಿಶ್ವದ ವಿಶೇಷ ಬಿಲಿಯನೇರ್ ಕ್ಲಬ್‌ ಗೆ ಸೇರಿದ್ದಾರೆ. ವಿಶ್ವದ ಶ್ರೀಮಂತ ಮಹಿಳೆಯರು ಸುಮಾರು 1.8 ಟ್ರಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದಾರೆ, ಕಳೆದ ವರ್ಷಕ್ಕಿಂತ ಸುಮಾರು 240 ಶತಕೋಟಿ ಡಾಲರ್ ಹೆಚ್ಚಾಗಿದೆ.

ಫ್ರೆಂಚ್ ಮಹಿಳೆ ಫ್ರಾಂಕೋಯಿಸ್ ಬೆಟೆನ್ಕೋರ್ಟ್ ಮೆಯರ್ಸ್ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಮಹಿಳೆಯರ ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ಕನೇ ವರ್ಷ ಅವರು ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಬಿಲಿಯನೇರ್ ಗಳಲ್ಲಿ ಸೆಲೆಬ್ರಿಟಿಗಳು

ಸ್ಟಾರ್ ವಾರ್ಸ್ ಮತ್ತು ಇಂಡಿಯಾನಾ ಜೋನ್ಸ್ ಚಲನಚಿತ್ರ ಫ್ರಾಂಚೈಸಿಗಳ ಮಾಲಕ ಜಾರ್ಜ್ ಲ್ಯೂಕಾಸ್ ವಿಶ್ವದ ಶ್ರೀಮಂತ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ. ಆಸ್ಕರ್- ವಿಜೇತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಎರಡನೇ ಮತ್ತು ಮಾಜಿ ಬಾಸ್ಕೆಟ್‌ಬಾಲ್ ತಾರೆ ಮೈಕೆಲ್ ಜೋರ್ಡಾನ್ ಮೂರನೇ ಶ್ರೀಮಂತ ಸೆಲೆಬ್ರಿಟಿಯಾಗಿದ್ದಾರೆ.

Exit mobile version