Site icon Vistara News

Vistara Explainer: ಕೊಲ್ಲಿ ರಾಷ್ಟ್ರಗಳ ಜತೆ ಭಾರತದ ದ್ವಿಪಕ್ಷೀಯ ವ್ಯಾಪಾರ 11.9 ಲಕ್ಷ ಕೋಟಿ ರೂ.

export

ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರು, ಪ್ರವಾದಿ ಮುಹಮ್ಮದ್‌ ಬಗ್ಗೆ ನೀಡಿದ ಹೇಳಿಕೆಯ ಬಳಿಕ ಉಂಟಾಗಿರುವ ವಿವಾದ ಮತ್ತು ಕೆಲ ಮುಸ್ಲಿಂ ರಾಷ್ಟ್ರಗಳ ರಾಜತಾಂತ್ರಿಕ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ, ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ದ್ವಿಪಕ್ಷೀಯ ವ್ಯಾಪಾರಗಳ ಪ್ರಾಮುಖ್ಯತೆ ಮತ್ತು ಅನಿವಾರ್ಯತೆಗಳ ಬಗ್ಗೆ ಚರ್ಚೆಯಾಗುತ್ತಿದೆ.

ಹಾಗಾದರೆ ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ಸಹಕಾರ ಒಕ್ಕೂಟ (Gulf cooperation council) ಮತ್ತು ಇತರ ಇಸ್ಲಾಮಿಕ್‌ ದೇಶಗಳ ಜತೆಗಿನ ಕೊಡು-ಕೊಳ್ಳುವಿಕೆಯ ವ್ಯಾಪಾರ ಎಷ್ಟಿದೆ? ಹೇಗೆ ಬೆಳೆದಿದೆ? ಭಾರತ ಕೊಲ್ಲಿ ರಾಷ್ಟ್ರಗಳಿಂದ ಯಾವೆಲ್ಲಾ ಉತ್ಪನ್ನ ಮತ್ತು ಸೇವೆಗಳನ್ನು ಆಮದು ಮಾಡುತ್ತದೆ? ಇಲ್ಲಿಂದ ಅಲ್ಲಿಗೆ ರಫ್ತು ಹೇಗಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ದ್ವಿಪಕ್ಷೀಯ ವಹಿವಾಟು 11.9 ಲಕ್ಷ ಕೋಟಿ ರೂ.ಗೆ ಏರಿಕೆ

ಭಾರತ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್‌ನಿಂದ ಆಮದು ಮಾಡುತ್ತದೆ. ಭಾರತದಿಂದ ಜ್ಯುವೆಲ್ಲರಿ ಉತ್ಪನ್ನಗಳು, ಲೋಹದ ವಸ್ತುಗಳು, ಎಲೆಕ್ಟ್ರಿಕಲ್‌ ಮೆಷೀನ್‌ಗಳು, ಕಬ್ಬಿಣ ಮತ್ತು ಉಕ್ಕು, ರಾಸಾಯನಿಕಗಳು ರಫ್ತಾಗುತ್ತವೆ.

ರಫ್ತಿಗಿಂತಲೂ ಆಮದು ಹೆಚ್ಚು

ಭಾರತವು 6 ಕೊಲ್ಲಿ ರಾಷ್ಟ್ರಗಳ ಸಹಕಾರ ಒಕ್ಕೂಟ (Gulf Cooperation Council) ಅಂದರೆ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (UAE), ಸೌದಿ ಅರೇಬಿಯಾ, ಕತಾರ್‌, ಒಮಾನ್‌, ಕುವೈತ್‌ ಮತ್ತು ಬಹರೇನ್‌ ಜತೆಗೆ ಮುಖ್ಯವಾಗಿ ಹೆಚ್ಚಿನ ದ್ವಿಪಕ್ಷೀಯ ವ್ಯಾಪಾರವನ್ನು ನಡೆಸುತ್ತಿದೆ. ಈ ಆಮದು ಮತ್ತು ರಫ್ತಿನ ಒಟ್ಟು ಮೌಲ್ಯ 2020-21ರಲ್ಲಿ (154 ಶತಕೋಟಿ ಡಾಲರ್) ಅಂದಾಜು 11.9 ಲಕ್ಷ ಕೋಟಿ ರೂ. ಇತ್ತು. ಭಾರತವು ಈ ಒಕ್ಕೂಟಕ್ಕೆ ರಫ್ತು‌ ಮಾಡುವುದಕ್ಕಿಂತಲೂ ಆಮದೇ ಜಾಸ್ತಿ. ಉದಾಹರಣೆಗೆ 2020-21ರಲ್ಲಿ ಭಾರತದ ಆಮದು 110.73 ಕೋಟಿ ಡಾಲರ್‌ ( ಅಂದಾಜು 8.52 ಲಕ್ಷ ಕೋಟಿ ರೂ.) ಹಾಗೂ ರಫ್ತು 44 ಶತಕೋಟಿ ಡಾಲರ್(‌ 3.38 ಲಕ್ಷ ಕೋಟಿ ರೂ.) ಇತ್ತು. ಈಗ ಮತ್ತಷ್ಟು ವಿವರ ನೋಡೋಣ.

ಸೌದಿ ಅರೇಬಿಯಾ

ಕಳೆದ ವರ್ಷ ಭಾರತದ 4ನೇ ದೊಡ್ಡ ವ್ಯಾಪಾರ ಪಾಲುದಾರಿಕೆ ಇರುವ ರಾಷ್ಟ್ರವಾಗಿ ಸೌದಿ ಅರೇಬಿಯಾ ಇತ್ತು. ಭಾರತಕ್ಕೆ ಕಚ್ಚಾ ತೈಲ ಸರಬರಾಜು ಮಾಡುವ ಪ್ರಮುಖ ರಾಷ್ಟ್ರಗಳಲ್ಲೊಂದು. ಭಾರತವು ಸೌದಿ ಅರೇಬಿಯಾಕ್ಕೆ ಆಭರಣ, ಯಂತ್ರೋಪಕರಣ, ಆಹಾರೋತ್ಪನ್ನಗಳನ್ನು ರಫ್ತು ಮಾಡುತ್ತದೆ.

ಕತಾರ್‌ನಿಂದ ಎಲ್‌ಎನ್‌ಜಿ ಆಮದು

ಕತಾರ್‌ನಿಂದ ಭಾರತ ವರ್ಷಕ್ಕೆ 85 ಲಕ್ಷ ಟನ್‌ ಎಲ್‌ಎನ್‌ಜಿ ಅನ್ನು ಆಮದು ಮಾಡುತ್ತದೆ. ಭಾರತವು ಕತಾರ್‌ಗೆ ಆಹಾರ ಧಾನ್ಯಗಳು, ಮೀನು, ಮಾಂಸ, ರಾಸಾಯನಿಕ ಮತ್ತು ಪ್ಲಾಸ್ಟಿಕ್‌ ಅನ್ನು ರಫ್ತು ಮಾಡುತ್ತದೆ.

ಕುವೈತ್

ಕಳೆದ ವರ್ಷ ಭಾರತದ ಜತೆಗೆ ಹೆಚ್ಚಿನ ದ್ವಿಪಕ್ಷೀಯ ವ್ಯವಹಾರ ಮಾಡಿರುವ ದೇಶಗಳ ಪೈಕಿ 27ನೇ ರಾಷ್ಟ್ರ ಕುವೈತ್.‌

ಯುಎಇ

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ 2021-22ರಲ್ಲಿ ಭಾರತದ ಜತೆಗಿನ ಮೂರನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿತ್ತು.

ಒಮಾನ್

ಕಳೆದ ವರ್ಷ ಭಾರತದ ಜತೆಗೆ 31ನೇ ಅತಿ ಹೆಚ್ಚು ವ್ಯಾಪಾರ ಪಾಲುದಾರಿಕೆ ಮಾಡಿದ ರಾಷ್ಟ್ರ ಒಮಾನ್‌ ಆಗಿತ್ತು.

ಬಹರೇನ್

ಭಾರತವು ಬಹರೇನ್‌ಗೆ ಹಣ್ಣು ತರಕಾರಿ, ಪೇಪರ್‌ ಪಲ್ಪ್‌, ಖಾದ್ಯ ತೈಲ, ವೈದ್ಯಕೀಯ ಸಲಕರಣೆಗಳನ್ನು ರಫ್ತು ಮಾಡುತ್ತದೆ.

ಈ ರಾಷ್ಟ್ರಗಳಲ್ಲದೆ ಇರಾನ್‌ ಜತೆಗೆ ಭಾರತ ಕಳೆದ ವರ್ಷ 14,630 ಕೋಟಿ ರೂ. ವಹಿವಾಟು ನಡೆಸಿದೆ.

ಭಾರತೀಯರಿಂದ ತವರಿಗೆ ಹಣ ರವಾನೆ

ಅನಿವಾಸಿ ಭಾರತೀಯರಲ್ಲಿ ಸುಮಾರು ಅರ್ಧದಷ್ಟು ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿದ್ದಾರೆ. ವಿಶ್ವಬ್ಯಾಂಕ್‌ನ 2021ರ ವರದಿಯ ಪ್ರಕಾರ ಭಾರತವು ವಿದೇಶಗಳಿಂದ 87 ಶತಕೋಟಿ ಡಾಲರ್‌ (ಅಂದಾಜು 6.69 ಲಕ್ಷ ಕೋಟಿ ರೂ.) ಹಣವನ್ನು (Remittance) ಸ್ವೀಕರಿಸಿದೆ. ಇದರಲ್ಲಿ ಕೊಲ್ಲಿ ರಾಷ್ಟ್ರಗಳಿಂದಲೂ ಗಣನೀಯ ಮೊತ್ತ ಲಭಿಸಿದೆ.

ಭಾರತದ ರಫ್ತು ಕೂಡ 10% ಹೆಚ್ಚಳ

ಗಲ್ಫ್‌ ಸಹಕಾರ ಒಕ್ಕೂಟ ಮಂಡಳಿಯಲ್ಲಿರುವ (Gulf cooperation council) 6 ಕೊಲ್ಲಿ ದೇಶಗಳಿಗೆ ಭಾರತದ ರಫ್ತು ಕೂಡ 2020-21ರಿಂದ 2021-22ರಲ್ಲಿ 58.26% ಏರಿಕೆಯಾಗಿತ್ತು.

ಯುಎಇ ಜತೆ ಮುಕ್ತ ವ್ಯಾಪಾರ ಒಪ್ಪಂದ ಜಾರಿ

ಭಾರತ ಮತ್ತು ಯುಎಇ ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದ ಜಾರಿಯಾಗಿದೆ. ಕಳೆದ ಮೇ 1ರಿಂದ ಇದು ಜಾರಿಯಾಗಿದ್ದು, ಜವಳಿ, ಕೃಷಿ, ಒಣ ಹಣ್ಣು, ಜ್ಯುವೆಲ್ಲರಿ ಇತ್ಯಾದಿ ವಲಯಗಳಲ್ಲಿ ಸುಂಕ ರಹಿತವಾಗಿ ಯುಎಇ ಮಾರುಕಟ್ಟೆಯ ಪ್ರವೇಶಾವಕಾಶ ಲಭಿಸಿದೆ.

ಒಟ್ಟಿನಲ್ಲಿ ಕೊಲ್ಲಿ ರಾಷ್ಟ್ರಗಳು ಹಾಗೂ ಇತರ ಮುಸ್ಲಿಂ ರಾಷ್ಟ್ರಗಳು ಭಾರತದ ಜತೆಗೆ ದ್ವಿಪಕ್ಷೀಯ ವ್ಯಾಪಾರದ ನಂಟನ್ನು ಹೊಂದಿವೆ. ಅದನ್ನು ಉಳಿಸಿಕೊಳ್ಳುವುದು ಉಭಯ ಬಣಗಳಿಗೂ ಅನಿವಾರ್ಯ.

Exit mobile version