ನವ ದೆಹಲಿ: ಭಾರತದ ವಿದೇಶಿ ವಿನಿಮಯ ಸಂಗ್ರಹ ಸಮೃದ್ಧವಾಗಿದ್ದು, ಕರೆನ್ಸಿ ಮಾರುಕಟ್ಟೆಗಳಲ್ಲಿ ಉಂಟಾಗುತ್ತಿರುವ ಅಲ್ಲೋಲಕಲ್ಲೋಲಗಳನ್ನು ಎದುರಿಸಲು ಸಾಕಾಗುವಷ್ಟಿದೆ. ಹೀಗಾಗಿ ವಿದೇಶಿ ವಿನಿಮಯ ಸಂಗ್ರಹದಲ್ಲಿ (Forex reserve) ಈಗ ಉಂಟಾಗಿರುವ ಇಳಿಕೆಯ ಬಗ್ಗೆ ಕಳವಳಪಡಬೇಕಾದ ಅವಶ್ಯಕತೆ ಇಲ್ಲ ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕರೆನ್ಸಿಗಳು ಒತ್ತಡದಲ್ಲಿವೆ. ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸೆಪ್ಟೆಂಬರ್ 16ರ ವೇಳೆಗೆ ವಿದೇಶಿ ವಿನಿಮಯ ಸಂಗ್ರಹ 546 ಶತಕೋಟಿ ಡಾಲರ್ ( ೪೪.೨೨ ಲಕ್ಷ ಕೋಟಿ ರೂ.) ಇತ್ತು. ವರ್ಷದ ಹಿಂದೆ 642 ಶತಕೋಟಿ ಡಾಲರ್ ಇತ್ತು.
ಆರ್ಥಿಕತೆಯ ಮೂಲಭೂತ ಅಂಶಗಳು ಪ್ರಬಲವಾಗಿಯೇ ಇರುವುದರಿಂದ ಜಾಗತಿಕ ಎಕಾನಮಿಯ ಬಿಕ್ಕಟ್ಟಿನ ಪ್ರತಿಕೂಲ ಸನ್ನಿವೇಶದ ನಡುವೆಯೂ ರೂಪಾಯಿ ಸ್ಥಿತಿ ಉತ್ತಮವಾಗಿದೆ ಎಂದು ಅವರು ಹೇಳಿದರು.