Site icon Vistara News

UPI ಮತ್ತು ರುಪೇ ಕಾರ್ಡ್‌ ಸೇವೆ ಫ್ರಾನ್ಸ್‌ನಲ್ಲಿ ಲಭ್ಯ, ಅಮೆರಿಕ, ಯುರೋಪ್‌ನಲ್ಲೂ ವಿಸ್ತರಣೆ ಸಂಭವ

rupay card

ನವದೆಹಲಿ: ಭಾರತದ UPI ಮತ್ತು ರುಪೇ ಕಾರ್ಡ್‌ ಸೇವೆ ಫ್ರಾನ್ಸ್‌ನಲ್ಲಿ ಕೂಡ ಶೀಘ್ರ ಬಳಕೆದಾರರಿಗೆ ಲಭಿಸಲಿದೆ. ಇದರೊಂದಿಗೆ ಯುಪಿಐ ಮತ್ತು ರುಪೇ ಕಾರ್ಡ್‌ ಸೇವೆ ಒಟ್ಟು ೫ ದೇಶಗಳಲ್ಲಿ ವಿಸ್ತರಣೆಯಾದಂತಾಗಿದೆ.

ಸಿಂಗಾಪುರ, ಯುಎಇ, ನೇಪಾಳ ಮತ್ತು ಭೂತಾನ್‌ನಲ್ಲಿ ಈಗಾಗಲೇ ಯುಪಿಐ ಮತ್ತು ರುಪೇ ಕಾರ್ಡ್‌ ದೊರೆಯುತ್ತದೆ. ಕೇಂದ್ರ ಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ಈ ವಿಷಯ ತಿಳಿಸಿದ್ದಾರೆ.

ಎನ್‌ಪಿಸಿ ಇಂಟರ್‌ನ್ಯಾಶನಲ್‌ ಪೇಮೆಂಟ್ಸ್‌ ಲಿಮಿಟೆಡ್‌ (NIPL) ಮತ್ತು ನ್ಯಾಶನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NPCI), ಫ್ರಾನ್ಸ್‌ನ ಲಿಕ್ರಾ ನೆಟ್‌ ವರ್ಕ್‌ ಜತೆಗೆ ಫ್ರಾನ್ಸ್‌ನಲ್ಲಿ ಯುಪಿಐ ಮತ್ತು ರುಪೇ ಕಾರ್ಡ್‌ ವಿತರಿಸಲು ಒಪ್ಪಂದ ಮಾಡಿಕೊಂಡಿವೆ.

ಭಾರತದಲ್ಲಿ ಪ್ರತಿ ತಿಂಗಳು ಸರಾಸರಿ ೫೫,೦೦೦ ಕೋಟಿ ಯುಪಿಐ ಹಣಕಾಸು ವರ್ಗಾವಣೆಗಳು ನಡೆಯುತ್ತದೆ. ಇದೀಗ ಫ್ರಾನ್ಸ್‌ನಲ್ಲಿ ರುಪೇ ಕಾರ್ಡ್‌ ಸೇವೆ ಲಭಿಸುತ್ತಿರುವುದು ದೊಡ್ಡ ಯಶಸ್ಸು ಎಂದು ಕೇಂದ್ರ ಸಚಿವ ವೈಷ್ಣವ್‌ ತಿಳಿಸಿದರು.

ಅಮೆರಿಕ, ಯುರೋಪ್‌ ಮತ್ತು ಪಶ್ಚಿಮ ಏಷ್ಯಾದಲ್ಲೂ ಯುಪಿಐ ಮತ್ತು ರುಪೇ ಕಾರ್ಡ್‌ ಸೇವೆಯ ವಿಸ್ತರಣೆಗೆ ಮಾತುಕತೆ ನಡೆಯುತ್ತಿದೆ.

ಫ್ರಾನ್ಸ್‌ನಲ್ಲಿ ರುಪೇ ಕಾರ್ಡ್‌ ಮತ್ತು ಯುಪಿಐ ಸೇವೆ ದೊರೆಯುವುದರಿಂದ ಪ್ರವಾಸಿಗರು ಅಲ್ಲಿಗೆ ಪ್ರಯಾಣ ಮಾಡಿದಾಗ, ರುಪೇ ಕಾರ್ಡ್‌ ಮತ್ತು ಯುಪಿಐ ಸೇವೆಯನ್ನು ಬಳಸಲು, ಪೇಮೆಂಟ್‌ಗಳನ್ನು ಅದರ ಮೂಲಕವೇ ಮಾಡಲು ಸಾಧ್ಯವಾಗುತ್ತದೆ. ಫ್ರಾನ್ಸ್‌ನ ಜನರಿಗೂ ನಗದು ರಹಿತ ವ್ಯವಹಾರಕ್ಕೆ ರುಪೇ ಕಾರ್ಡ್‌ ಮತ್ತು ಯುಪಿಐ ಸಹಕಾರಿಯಾಗಲಿದೆ.

ಎಲ್ಲ ಕ್ರೆಡಿಟ್‌ ಕಾರ್ಡ್‌ಗಳನ್ನು ಯುಪಿಐಗೆ ಲಿಂಕ್‌ ಮಾಡಲು ಆರ್‌ಬಿಐ ಅನುಮತಿ ನೀಡಿರುವುದರಿಂದ ಮುಂಬರುವ ದಿನಗಳಲ್ಲಿ ರುಪೇ ಕಾರ್ಡ್‌ ಜನಪ್ರಿಯತೆ ಮತ್ತಷ್ಟು ಹೆಚ್ಚಲಿದೆ. ರುಪೇ ಕ್ರೆಡಿಟ್‌ ಕಾರ್ಡ್‌ಗಳು ಕೂಡ ಯುಪಿಐ ಜತೆ ಲಿಂಕ್‌ ಆಗುವುದರಿಂದ ವೀಸಾ, ಮಾಸ್ಟರ್‌ ಕಾರ್ಡ್‌ನಂತಹ ವಿದೇಶಿ ಮೂಲದ ಕ್ರೆಡಿಟ್‌ ಕಾರ್ಡ್‌ ಕಂಪನಿಗಳಿಗೆ ಭಾರಿ ಹೊಡೆತ ನಿರೀಕ್ಷಿಸಲಾಗಿದೆ.

Exit mobile version